ರಾಜ್ಯಸಭಾ ಸದಸ್ಯರ ಒಟ್ಟು ಆಸ್ತಿ 19,602 ಕೋಟಿ ರೂ.; ಶೇ.33 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ

Update: 2024-03-02 15:56 GMT

ರಾಜ್ಯಸಭಾ | Photo: PTI 

ಹೊಸದಿಲ್ಲಿ: ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ, ವಿಶ್ಲೇಷಿಸಲಾದ ರಾಜ್ಯಸಭೆಯ 225 ಸದಸ್ಯರ ಒಟ್ಟು ಆಸ್ತಿಯ ಮೌಲ್ಯ 19,602 ಕೋಟಿ ರೂ.(ಸರಾಸರಿ 87.12 ಕೋಟಿ ರೂ.)ಗಳಾಗಿದ್ದು,31 ಸದಸ್ಯರು (ಶೇ.14) ಶತಕೋಟ್ಯಧಿಪತಿಗಳಾಗಿದ್ದಾರೆ. 75 ಸದಸ್ಯರು (ಶೇ.33) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿದ್ದಾರೆ.

ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ನಡೆಸಿರುವ ವಿಶ್ಲೇಷಣೆಯಂತೆ 40 ಸದಸ್ಯರು (ಶೇ.18) ತಮ್ಮ ವಿರುದ್ಧ ಕೊಲೆ ಮತ್ತು ಕೊಲೆಯತ್ನದಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳು ಇರುವುದನ್ನು ಘೋಷಿಸಿದ್ದಾರೆ.

ಬಿಜೆಪಿ ತನ್ನ 90 ಸದಸ್ಯರ ಪೈಕಿ ಶೇ.23ರಷ್ಟು ಜನರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವುದರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 28 ಸದಸ್ಯರ ಪೈಕಿ ಶೇ.50ರಷ್ಟು ಸದಸ್ಯರೊಂದಿಗೆ ಕಾಂಗ್ರೆಸ್ ನಂತರದ ಸ್ಥಾನದಲ್ಲಿದೆ. ಟಿಎಂಸಿಯ 13 ಸದಸ್ಯರ ಪೈಕಿ ಐವರು (ಶೇ.38),ಆರ್ಜೆಡಿಯ ಆರು ಸದಸ್ಯರ ಪೈಕಿ ನಾಲ್ವರು (ಶೇ.67),ಸಿಪಿಎಮ್ನ ಐವರು ಸದಸ್ಯರ ಪೈಕಿ ನಾಲ್ವರು (ಶೇ.80),ಆಪ್ನ 10 ಸದಸ್ಯರ ಪೈಕಿ ಮೂವರು (ಶೇ.30),ವೈಎಸ್ಆರ್ಸಿಪಿಯ 11 ಸದಸ್ಯರ ಪೈಕಿ ನಾಲ್ವರು (ಶೇ.36) ಮತ್ತು ಡಿಎಂಕೆಯ 10 ಸದಸ್ಯರ ಪೈಕಿ ಇಬ್ಬರು (ಶೇ.20) ತಮ್ಮ ನಾಮಪತ್ರಗಳ ಜೊತೆ ಸಲ್ಲಿಸಿರುವ ಅಫಿಡವಿಟ್ಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದೇ ಪ್ರವೃತ್ತಿ ಮುಂದುವರಿದಿದೆ. ಬಿಜೆಪಿಯ 10 (ಶೇ.11), ಕಾಂಗ್ರೆಸ್ನ 9 (ಶೇ.32),ಟಿಎಂಸಿಯ ಮೂವರು (ಶೇ.23),ಆರ್ಜೆಡಿಯ ಇಬ್ಬರು (ಶೇ.33),ಸಿಪಿಎಮ್ನ ಇಬ್ಬರು (ಶೇ.40),ಆಪ್ನ ಓರ್ವ (ಶೇ.10), ವೈಎಸ್ಆರ್ಸಿಪಿಯ ಮೂವರು (ಶೇ.27) ಮತ್ತು ಡಿಎಂಕೆಯ ಓರ್ವರು (ಶೇ.10) ಸದಸ್ಯರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

ಮಹಾರಾಷ್ಟ್ರದ 18 ಸದಸ್ಯರ ಪೈಕಿ 11(ಶೇ.61),ಬಿಹಾರದ 16 ಸದಸ್ಯರ ಪೈಕಿ ಎಂಟು (ಶೇ.50),ಉತ್ತರ ಪ್ರದೇಶದ 31 ಸದಸ್ಯರ ಪೈಕಿ ಒಂಭತ್ತು(ಶೇ.29),ತಮಿಳುನಾಡಿನ 18 ಸದಸ್ಯರ ಪೈಕಿ ಆರು(ಶೇ.33),ಕೇರಳದ ಒಂಭತ್ತು ಸದಸ್ಯರ ಪೈಕಿ ಆರು(ಶೇ.67) ಮತ್ತು ಪಶ್ಚಿಮ ಬಂಗಾಳದ 16 ಸದಸ್ಯರ ಪೈಕಿ ಏಳು (ಶೇ.44) ಸದಸ್ಯರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

ವಿಶ್ಲೇಷಣೆಯು 233 ರಾಜ್ಯಸಭಾ ಸದಸ್ಯರ ಪೈಕಿ 225 ಸದಸ್ಯರನ್ನು ಒಳಗೊಂಡಿದೆ. ಮಹಾರಾಷ್ಟ್ರದಿಂದ ಒಂದು ಸ್ಥಾನ ಮತ್ತು ಜಮ್ಮ-ಕಾಶ್ಮೀರದಿಂದ ನಾಲ್ಕು ಸ್ಥಾನಗಳು ಖಾಲಿಯಿವೆ. ಮೂವರು ರಾಜ್ಯಸಭಾ ಸಂಸದರ ಅಫಿಡ್ವಿಟ್ ಗಳು ಲಭ್ಯವಾಗಿರಲಿಲ್ಲ.

ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿಯ ಒಂಭತ್ತು (ಶೇ.10),ಕಾಂಗ್ರೆಸ್ನ ನಾಲ್ವರು (ಶೇ.14),ವೈಸ್ಆರ್ಸಿಪಿಯ ಐವರು (ಶೇ.45),ಆಪ್ ನ ಇಬ್ಬರು (ಶೇ.20),ಟಿಆರ್ಎಸ್ನ ಮೂವರು (ಶೇ.75) ಮತ್ತು ಆರ್ಜೆಡಿಯ ಇಬ್ಬರು (ಶೇ.33) ಸದಸ್ಯರು ತಲಾ ನೂರು ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News