ಪ್ರಮಾಣವಚನ ಕಾರ್ಯಕ್ರಮದಲ್ಲಿ ತೃತೀಯಲಿಂಗಿಗಳು, ಸ್ವಚ್ಛತಾ ಕಾರ್ಮಿಕರು
ಹೊಸದಿಲ್ಲಿ: ಸೋಮವಾರ ನಡೆದ ನರೇಂದ್ರ ಮೋದಿ ನೇತೃತ್ವದ ನೂತನ ಸಂಪುಟದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೃತೀಯ ಲಿಂಗಿಗಳು ಹಾಗೂ ನೈರ್ಮಲ್ಯ ಕಾರ್ಮಿಕರನ್ನು ಆಹ್ವಾನಿಸಲಾಗಿತ್ತು.
ಪ್ರಮಾಣವಚನಕ್ಕೆ ಮುನ್ನ ತೃತೀಯಲಿಂಗಿಗಳನ್ನು ಹಾಲಿ ಬಿಜೆಪಿ ಸಂಸದ ಹಾಗೂ ಮಾಜಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ತನ್ನ ನಿವಾಸದಲ್ಲಿ ಸನ್ಮಾನಿಸಿದರು. ಜಲಶಕ್ತಿ ಖಾತೆಯ ಮಾಜಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ನೈರ್ಮಲ್ಯ ಕಾರ್ಮಿಕರನ್ನು ಸನ್ಮಾನಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೀರೇಂದ್ರ ಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿಯವರ‘ ಸಬ್‌ಕಾ ಸಾಥ್ ಸಬ್ ಕಾ ವಿಶ್ವಾಸ್ ಹಾಗೂ ಸಬ್ ಕಾ ಪ್ರಯಾಸ್’ ಕರೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರನ್ನೂ ಒಳಪಡಿಸುವಿಕೆಯ ಕುರಿತಾದ ಪ್ರಧಾನಿಯವರ ಸಂದೇಶವನ್ನು ಹರಡುವ ಧ್ಯೇಯವನ್ನು ಇದು ಹೊಂದಿದೆ’’ ಎಂದು ಹೇಳಿದರು.
ಕೇಂದ್ರ ಸಂಪುಟದ ಪ್ರಮಾಣವಚನ ಕಾರ್ಯಕ್ರಮಕ್ಕೆ ತೃತೀಯ ಲಿಂಗಿ ಸಮುದಾಯವನ್ನು ಆಹ್ವಾನಿಸಿರುವುದು ಇದೇ ಮೊದಲು ಎಂದವರು ತಿಳಿಸಿದರು. ಕಾರ್ಯಕ್ರಮದಲ್ಲಿ ಅವರ ಪಾಲ್ಗೊಳ್ಳುವಿಕೆಯು ಲಿಂಗಾಂತರಿ ಸಮುದಾಯದ ಸಬಲೀಕರಣಕ್ಕೆ ಕೊಡುಗೆ ನೀಡಲಿದೆ ಎಂದು ವೀರೇಂದ್ರ ಕುಮಾರ್ ತಿಳಿಸಿದರು.
ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿತರಾಗಿದ್ದ ಉತ್ತರಪ್ರದೇಶದ ಬಿಜೆಪಿ ಘಟಕದ ಕಾರ್ಯಕರ್ತೆಯಾದ ಸೋನಂ ಕಿನ್ನರ್ ಅವರು ಸುದ್ದಿಗಾರರ ಜೊತೆ ಮಾತನಾಡಿ,, ನೂತನ ಸರಕಾರವನ್ನು ಆಶೀರ್ವದಿಸಲು ತನ್ನ ಸಮುದಾಯದ 50 ಸದಸ್ಯರ ಜೊತೆ ತಾನು ಆಗಮಿಸಿದ್ದಾಗಿ ತಿಳಿಸಿದರು.
ಜಾತಿ ಆಧಾರಿತ ರಾಜಕೀಯದ ಕಾರಣ ನಿರೀಕ್ಷಿತ ಸಂಖ್ಯೆಯ ಸ್ಥಾನಗಳು ಪ್ರಧಾನಿ ಮೋದಿಯವರಿಗೆ ದೊರೆಯದೇ ಇದ್ದುದು ನಮಗೆ ಬೇಸರ ತಂದಿದೆ. ಆದರೆ ಪ್ರಧಾನಿಯ ಬಗ್ಗೆ ನಮಗೆ ಸಂಪೂರ್ಣ ಭರವಸೆಯಿದೆ ಹಾಗೂ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಆಕೆ ಹೇಳಿದರು.