ಹೈಟಿಯಲ್ಲಿ ಪ್ರಕ್ಷುಬ್ಧತೆ : ನಾಗರಿಕರನ್ನು ರಕ್ಷಿಸಲು ‘ಆಪರೇಷನ್ ಇಂದ್ರಾವತಿ’ ಕೈಗೊಂಡ ಭಾರತ

Update: 2024-03-22 13:01 GMT

Photo: X/S Jaishankar

ಹೊಸದಿಲ್ಲಿ: ಹಿಂಸಾಚಾರ ಪೀಡಿತ ಹೈಟಿಯಿಂದ ಭಾರತೀಯ ನಾಗರಿಕರನ್ನು ಡೊಮಿನಿಕನ್ ರಿಪಬ್ಲಿಕ್ ಗೆ ಸ್ಥಳಾಂತರಿಸಲು ‘ಆಪರೇಷನ್ ಇಂದ್ರಾವತಿ’ ಕಾರ್ಯಾಚರಣೆಗೆ ಭಾರತವು ಚಾಲನೆ ನೀಡಿದೆ. ಈ ರಕ್ಷಣಾ ಕಾರ್ಯಾಚರಣೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ದೃಢಪಡಿಸಿದ್ದಾರೆ.

ಸಶಸ್ತ್ರ ಗುಂಪುಗಳು ಹೈಟಿ ಬೀದಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವುದರಿಂದ ಕೆರೆಬಿಯನ್ ದೇಶವಾದ ಹೈಟಿಯಲ್ಲಿ ಪ್ರಕ್ಷುಬ್ಧತೆ ಮನೆ ಮಾಡಿದೆ. ಸರಕಾರವು ಅಲ್ಲಿ ಅಕ್ಷರಶಃ ಕಾಣೆಯಾಗಿದೆ.

ಚಾಲನೆಯಲ್ಲಿರುವ ಈ ಕಾರ್ಯಾಚರಣೆಯ ಭಾಗವಾಗಿ ಗುರುವಾರದಂದು 12 ಮಂದಿ ಭಾರತೀಯ ಪ್ರಜೆಗಳನ್ನು ಹೈಟಿಯಿಂದ ಸ್ಥಳಾಂತರಿಸಲಾಗಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಭಮದಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, “ಭಾರತವು ತನ್ನ ಪ್ರಜೆಗಳನ್ನು ಹೈಟಿಯಿಂದ ಡೊಮಿನಿಕನ್ ರಿಪಬ್ಲಿಕ್ ಗೆ ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈವರೆಗೆ 12 ಮಂದಿ ಭಾರತೀಯರನ್ನು ಸ್ಥಳಾಂತರಿಸಲಾಗಿದೆ. ವಿದೇಶಗಳಲ್ಲಿರುವ ನಮ್ಮ ಪ್ರಜೆಗಳ ಭದ್ರತೆ ಹಾಗೂ ಒಳಿತಿಗೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ನೆರವು ನೀಡಿದ ಡೊಮಿನಿಕನ್ ರಿಪಬ್ಲಿಕ್ ಸರಕಾರಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಮಾರ್ಚ್ 12ರಂದು ಸಾಪ್ತಾಹಿಕ ಸುದ್ದಿ ವಿವರಣೆಯ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ನೀಡಿದ ಹೇಳಿಕೆಯ ನಂತರ ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News