ಚೆನ್ನೈನಲ್ಲಿ ಅವಳಿ ಅವಘಡ ; ಓರ್ವ ಸಾವು, ಕನಿಷ್ಠ 25 ಮಂದಿ ಅಸ್ವಸ್ಥ

Update: 2023-12-27 15:38 GMT

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಭಾರತೀಯ ತೈಲ ನಿಗಮ(ಐಓಸಿಎಲ್)ದ ಸ್ಥಾವರದಲ್ಲಿರುವ ಬಾಯ್ಲರ್ ಬುಧವಾರ ಸ್ಫೋಟಗೊಂಡಿದ್ದು, ಓರ್ವ ಮೃತಪಟ್ಟರುವ ಬಗ್ಗೆ ವರದಿಯಾಗಿದೆ. ಚೆನ್ನೈನ ಇನ್ನೊಂದೆಡೆ ಸಂಭವಿಸಿದ ಅವಘಡವೊಂದರಲ್ಲಿ ರಸಗೊಬ್ಬರ ಕಾರ್ಖಾನೆಯೊಂದರ ಕೊಳವೆಯಿಂದ ಅಮೋನಿಯಾ ಅನಿಲ ಸೋರಿಕೆಯಾಗಿ 25ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ.

ಚೆನ್ನೈನ ಭಾರತೀಯ ತೈಲ ನಿಗಮ (ಐಓಸಿಎಲ್) ಸ್ಥಾವರದ ಎಥೆನಾಲ್ ಸಂಗ್ರಹಾಗಾರದಲ್ಲಿ ಕಾರ್ಮಿಕರ ತಂಡವೊಂದು ವೆಲ್ಡಿಂಗ್ ಕಾರ್ಯದಲ್ಲಿ ತೊಡಗಿದ್ದಾಗ ಬಾಯ್ಲರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಓರ್ವ ವೆಲ್ಡರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೋರ್ವನಿಗೆ ಗಂಭೀರವಾದ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದಿಂದ ಬಾಯ್ಲರ್ಗೆ ಬೆಂಕಿ ಹತ್ತಿಕೊಂಡಿದ್ದು, ಕಾರ್ಖಾನೆಯ ಭದ್ರತಾ ಸಿಬ್ಬಂದಿ ತಕ್ಷಣವೇ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಅವರು ಹೇಳಿದ್ದಾರೆ.

ಅವಘಡಕ್ಕೆ ಸ್ಪಷ್ಟ ಕಾರಣವೇನೆಂಬುದು ತಿಳಿದುಬಂದಿಲ್ಲ ಮತ್ತು ಘಟನೆಗೆ ಸಂಬಂಧಿಸಿ ಐಓಸಿಎಲ್ ತನಿಖೆಗೆ ಆದೇಶಿಸಿದೆ.

ಚೆನ್ನೈನಲ್ಲಿ ಇಂದು ಸಂಭವಿಸಿದ ಇನ್ನೊಂದು ಘಟನೆಯಲ್ಲಿ, ನಗರದ ಎನ್ನೋರ್ನಲ್ಲಿ ಖಾಸಗಿ ರಸಗೊಬ್ಬರ ಕಾರ್ಖಾನೆಯ ಜೊತೆ ಸಂಪರ್ಕಿಸಲ್ಪಟ್ಟಿದ್ದ ಪೈಪ್ಲೈನಿಂದ ಅಮೋನಿಯಾ ಸೋರಿಕೆಯಾಗಿದ್ದರಿಂದ ಸುಮಾರು 25 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ವಸ್ಥಗೊಂಡವರಲ್ಲಿ ಉಸಿರಾಟದ ತೊಂದರೆ ಹಾಗೂ ವಾಕರಿಕೆ ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 11;45ರ ವೇಳೆಗೆ ಅನಿಲ ಸೋರಿಕೆ ಸಂಭವಿಸಿದ್ದು, ಉತ್ತರ ಚೆನ್ನೈನ ಪ್ರದೇಶಗಳಲ್ಲಿ ಅಮೋನಿಯಾ ಅನಿಲದ ಹೊಗೆ ಹರಡಿದ್ದರಿಂದ ಅಲ್ಲಿನ ಹಲವಾರು ಮಂದಿ ಅಸ್ವಸ್ಥಗೊಂಡರು. ಹಲವಾರು ಮಂದಿ ಗಂಟಲು ಹಾಗೂ ಎದೆಯಲ್ಲಿ ಉರಿ ಕಾಣಿಸಿಕೊಂಡಿದ್ದು, ಅನೇಕರು ಪ್ರಜ್ಞೆ ಕಳೆದುಕೊಂಡಿದ್ದರು.

ಅನಿಲ ಸೋರಿಕೆಯ ಅನುಭವಾಗುತ್ತಿದ್ದಂತೆಯೇ ಹಲವಾರು ಮಂದಿ ಭಯಭೀತರಾಗಿ ಹೊರಗೋಡಿ ಬಂದು ನೆರೆಹೊರೆಯವರನ್ನೂ ಎಚ್ಚರಿಸಿದರು. ಬಳಿಕ ಏನು ಮಾಡಬೇಕೆಂದು ತಿಳಿಯದೇ ಮುಖ್ಯ ರಸ್ತೆಗೆ ಬಂದರು.

ಮಕ್ಕಳು ಸೇರಿದಂತೆ ರಸಗೊಬ್ಬರ ಕಾರ್ಖಾನೆಗೆ ಸಮೀಪದ ಪ್ರದೇಶಗಳ 25 ನಿವಾಸಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಹೆಚ್ಚಿನವರಿಗೆ ಅಸೌಖ್ಯ, ಉಸಿರಾಟದ ತೊಂದರೆ, ವಾಕರಿಕೆ ಹಾಗೂ ಸುಸ್ತು ಉಂಟಾಗಿತ್ತೆಂದು ವರದಿಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News