ಅಮೃತಸರ ದೇವಾಲಯ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಪೊಲೀಸ್‌ ಗುಂಡಿಗೆ ಬಲಿ

Update: 2025-03-17 12:38 IST
ಅಮೃತಸರ ದೇವಾಲಯ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಪೊಲೀಸ್‌ ಗುಂಡಿಗೆ ಬಲಿ

ಸಾಂದರ್ಭಿಕ ಚಿತ್ರ (PTI)

  • whatsapp icon

ಚಂಡೀಗಢ: ಅಮೃತಸರದಲ್ಲಿನ ದೇವಾಲವೊಂದರ ಹೊರಗೆ ನಡೆದಿದ್ದ ಸ್ಪೋಟದ ಶಂಕಿತ ಆರೋಪಿಯು ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ಸೋಮವಾರ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಸೆರೆ ಹಿಡಿಯುವ ಪ್ರಯತ್ನಗಳು ಮುಂದುವರಿದಿವೆ ಎಂದೂ ಅವರು ಹೇಳಿದರು.

ಮಾರ್ಚ್ 15ರಂದು ಅಮೃತಸರದಲ್ಲಿರುವ ಠಾಕೂರ್ ದ್ವಾರ ದೇವಾಲಯದತ್ತ ದುಷ್ಕರ್ಮಿಯೊಬ್ಬ ಸ್ಫೋಟಕ ಸಾಧನವೊಂದನ್ನು ಎಸೆದಿದ್ದ. ಈ ಘಟನೆಯಲ್ಲಿ ದೇವಾಲಯದ ಗೋಡೆ ಹಾನಿಗೊಳಗಾಗಿ, ಕಿಟಕಿಯ ಗಾಜುಗಳು ಪುಡಿಪುಡಿಯಾಗಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್, ನಿರ್ದಿಷ್ಟ ಗುಪ್ತಚರ ಸುಳಿವನ್ನು ಆಧರಿಸಿ, ದೇವಾಲಯದ ಮೇಲಿನ ದಾಳಿಗೆ ಕಾರಣರಾಗಿದ್ದವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

“ಪೊಲೀಸರು ಶಂಕಿತ ಆರೋಪಿಗಳನ್ನು ರಾಜಸಾನ್ಸಿಯಲ್ಲಿ ಪತ್ತೆ ಹಚ್ಚಿದ್ದಾರೆ. ಈ ವೇಳೆ, ಆರೋಪಿಗಳು ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮುಖ್ಯ ಪೇದೆ ಗುರ್ ಪ್ರೀತ್ ಸಿಂಗ್ ಗಾಯಗೊಂಡಿದ್ದರೆ, ಇನ್ಸ್ ಪೆಕ್ಟರ್ ಅಮೋಲಕ್ ಸಿಂಗ್ ಪೇಟಕ್ಕೆ ಗುಂಡು ತಗುಲಿದೆ” ಎಂದು ಹೇಳಿದ್ದಾರೆ.

“ಸ್ವಯಂರಕ್ಷಣೆಯ ಭಾಗವಾಗಿ ಪೊಲೀಸರೂ ಪ್ರತಿ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಆರೋಪಿ ಗಾಯಗೊಂಡಿದ್ದಾನೆ. ಆತನನ್ನು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಆತ, ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.

ಮಾರ್ಚ್ 15ರಂದು ನಡೆದಿದ್ದ ಠಾಕೂರ್ ದ್ವಾರ ದೇವಸ್ಥಾನದ ಮೇಲಿನ ದಾಳಿಗೂ ಮುನ್ನ, ಇಬ್ಬರು ಅಪರಿಚಿತ ವ್ಯಕ್ತಿಗಳು ಮೋಟಾರ್ ಬೈಕ್ ನಲ್ಲಿ ದೇವಾಲಯದ ಬಳಿ ಬಂದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಅಲ್ಲೇ ಕೆಲ ಹೊತ್ತು ಕಾದಿರುವ ಆರೋಪಿಗಳ ಪೈಕಿ ಓರ್ವ ದೇವಾಲಯದತ್ತ ಸ್ಫೋಟಕ ಸಾಧನವನ್ನು ಎಸೆಯುತ್ತಿರುವುದು ಹಾಗೂ ನಂತರ ಅವರಿಬ್ಬರೂ ಸ್ಥಳದಿಂದ ಪರಾರಿಯಾಗಿರುವುದೂ ಆ ದೃಶ್ಯಾವಳಿಯಲ್ಲಿ ದಾಖಲಾಗಿದೆ.

ನಂತರ, ದೇವಾಲಯದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐನ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದರು.

ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗದಿದ್ದರೂ, ಸ್ಫೋಟದ ಸದ್ದಿಗೆ ಅಮೃತಸರದ ಖಾಂಡ್ವಾಲಾ ಪ್ರದೇಶದ ನಿವಾಸಿಗಳು ಗಾಬರಿಗೊಳಗಾಗಿದ್ದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News