ಬಾಂಗ್ಲಾದೇಶದ ಇಬ್ಬರು ಕಳ್ಳ ಸಾಗಾಣೆದಾರರ ಗುಂಡಿಕ್ಕಿ ಹತ್ಯೆಗೈದ ಬಿಎಸ್ಎಫ್
ಕೃಷ್ಣಗಂಜ್(ಪಶ್ಚಿಮಬಂಗಾಳ): ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಬಾಂಗ್ಲಾದೇಶದ ಇಬ್ಬರು ಅಕ್ರಮ ಕಳ್ಳ ಸಾಗಾಣೆದಾರರನ್ನು ಗುಂಡು ಹಾರಿಸಿ ಹತ್ಯೆಗೈದಿದೆ.
ಕೃಷ್ಣಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದಪುರದ ಅಂತರ ರಾಷ್ಟ್ರೀಯ ಗಡಿಯಲ್ಲಿ ಶನಿವಾರ ತಡ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ಬಾಂಗ್ಲಾದೇಶದ ಕಳ್ಳ ಸಾಗಣೆದಾರರ ಗುಂಪೊಂದು ಹೊಸದಾಗಿ ನಿರ್ಮಿಸಲಾಗಿರುವ ತಂತಿ ಬೇಲಿಯನ್ನು ಕತ್ತರಿಸಿ ಭಾರತದ ಒಳಗೆ ನುಸುಳಲು ಪ್ರಯತ್ನಿಸಿತು. ಆದರೆ, ಭದ್ರತಾ ಪಡೆಯ ಗಸ್ತು ಘಟಕ ಗಾಳಿಯಲ್ಲಿ ಕೆಲವು ಸುತ್ತು ಗುಂಡು ಹಾರಿಸಿತು. ಇದರಿಂದ ಹೆದರಿ ಅವರು ಪರಾರಿಯಾದರು ಎಂದು ಬಿಎಸ್ಎಫ್ ಡಿಐಜಿ (ಪೂರ್ವ ಕಮಾಂಡ್) ಎಸ್.ಎಸ್. ಗುಲೇರಿಯಾ ತಿಳಿಸಿದ್ದಾರೆ.
ಅನಂತರ ಸ್ಪಲ್ಪ ಸಮಯದ ಬಳಿಕ ಬಿಎಸ್ಎಫ್ ನ ಶೋಧ ತಂಡ ಈ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭ ಅದೇ ಗುಂಪು ಗುಂಡಿನ ದಾಳಿ ನಡೆಸಿತು. ಆತ್ಮ ರಕ್ಷಣೆಗಾಗಿ ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದರು. ಇದರಿಂದ ಬಾಂಗ್ಲಾದೇಶದ ಇಬ್ಬರು ಕಳ್ಳ ಸಾಗಣೆದಾರರು ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟ ಕಳ್ಳ ಸಾಗಣೆದಾರರನ್ನು ಇನ್ನಷ್ಟೆ ಗುರುತಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.