ಭಾಷಾ ಸಮರಕ್ಕೆ ತಮಿಳುನಾಡು ಸಿದ್ಧ: ಉದಯ ನಿಧಿ ಸ್ಟಾಲಿನ್

Update: 2025-02-19 20:59 IST

ಉದಯನಿಧಿ ಸ್ಟಾಲಿನ್ | PC : PTI 

ಚೆನ್ನೈ: ಕೇಂದ್ರದ ತ್ರಿ ಭಾಷಾ ನೀತಿ ಹಾಗೂ ಹಿಂದಿ ಹೇರಿಕೆಯ ಕುರಿತಂತೆ ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ಹಾಗೂ ಬಿಜೆಪಿ ನಡುವೆ ವಾಗ್ಯುದ್ಧ ತೀವ್ರಗೊಂಡಿದೆ.

ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಹಿಂದಿಯನ್ನು ಸ್ವೀಕರಿಸುವ ರಾಜ್ಯಗಳು ತಮ್ಮ ಮಾತೃ ಭಾಷೆಯನ್ನು ಕಳೆದುಕೊಳ್ಳುತ್ತವೆ. ತನ್ನ ರಾಜ್ಯ ‘ಭಾಷಾ ಸಮರ’ಕ್ಕೆ ಸಿದ್ಧವಾಗಿದೆ ಎಂದು ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಕೇಂದ್ರ ಹಣಕಾಸು ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ‘‘ಬ್ಲಾಕ್‌ಮೇಲ್’’ ಎಂದು ತರಾಟೆಗೆ ತೆಗೆದುಕೊಂಡಿರುವುದನ್ನು ಅವರು ಉದಯನಿಧಿ ಸ್ಟಾಲಿನ್ ಪುನರುಚ್ಛರಿಸಿದ್ದಾರೆ. ಶಿಕ್ಷಣಕ್ಕೆ ಕೇಂದ್ರ ಸರಕಾರದಿಂದ ಬರಬೇಕಾಗಿರುವ ಹಣ ಹಾಗೂ ತೆರಿಗೆಯ ಪಾಲಿನಿಂದ ಬರಬೇಕಾಗಿರುವ ಹಣವನ್ನು ಮಾತ್ರ ರಾಜ್ಯ ಸರಕಾರ ಕೇಳುತ್ತಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳದೇ ಇದ್ದರೆ, ಸಮಗ್ರ ಶಿಕ್ಷಾ ಅಭಿಯಾನಕ್ಕಿರುವ ಸುಮಾರು 2,400 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನ್ ಘೋಷಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನ ನಾಯಕರು ಈ ವಾಗ್ದಾಳಿ ನಡೆಸಿದ್ದಾರೆ.

‘‘ನಾವು ಕೇವಲ ನಮ್ಮ ತೆರಿಗೆಯ ಹಣ ಹಾಗೂ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಾವು ನ್ಯಾಯಯುತವಾಗಿ ನಮ್ಮ ಹಣವನ್ನು ಕೇಳುತ್ತಿದ್ದೇವೆ. ತ್ರಿ ಭಾಷಾ ನೀತಿಯನ್ನು ನಾವು ಸ್ವೀಕರಿಸಿದರೆ ಮಾತ್ರವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಧರ್ಮೇಂದ್ರ ಪ್ರದಾನ್ ಬಹಿರಂಗವಾಗಿ ಬೆದರಿಕೆ ಒಡ್ಡಿದ್ದಾರೆ. ಆದರೆ, ನಾವು ನಿಮ್ಮ ಅಪ್ಪನ ಹಣ ಕೇಳುತ್ತಿಲ್ಲ. ನಾವು ಭಿಕ್ಷೆ ಬೇಡುತ್ತಿಲ್ಲ’’ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

‘‘ನಾವು ಬಾಕಿ ಪಾಲನ್ನು ಕೇಳುತ್ತಿದ್ದೇವೆ. ಒಂದು ವೇಳೆ ನಮಗೆ ಬೆದರಿಕೆ ಒಡ್ಡಬಹುದು ಎಂದು ನೀವು (ಬಿಜೆಪಿ) ಭಾವಿಸಿದರೆ, ಅದು ತಮಿಳುನಾಡಿನಲ್ಲಿ ಎಂದಿಗೂ ನಡೆಯಲಾರದು. ತಮಿಳುನಾಡು ಜನರು ಗಮನಿಸುತ್ತಿದ್ದಾರೆ. ಅವರು ಸೂಕ್ತ ಸಮಯದಲ್ಲಿ ಪ್ರತ್ಯುತ್ತರ ನೀಡಬಹುದು’’ ಎಂದು ಚೆನ್ನೈಯಲ್ಲಿ ನಡೆದ ಡಿಎಂಕೆ ನೇತೃತ್ವದ ಪ್ರತಿಭಟನಾ ರ‍್ಯಾಲಿಯಲ್ಲಿ ಅವರು ಹೇಳಿದರು.

ಇದು ದ್ರಾವಿಡ ನೆಲ. ಪೆರಿಯಾರ್ ಅವರ ಭೂಮಿ ಎಂದು ಉದಯನಿಧಿ ಸ್ಟಾಲಿನ್ ಬಿಜೆಪಿಗೆ ನೆನಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News