ವಿಚಾರಣಾಧೀನ ಕೈದಿಗಳನ್ನು ಅನಿರ್ದಿಷ್ಟ ಕಾಲ ಜೈಲಿನಲ್ಲಿರಿಸುವಂತಿಲ್ಲ: ಬಾಂಬೆ ಹೈಕೋರ್ಟ್

Update: 2023-10-01 11:49 GMT

ಬಾಂಬೆ ಹೈಕೋರ್ಟ್ | Photo: PTI

ಮುಂಬೈ: ವಿಚಾರಣೆಯನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿ ಕೂಡಿ ಹಾಕುವಂತಿಲ್ಲ, ಹಾಗೆ ಮಾಡಿದರೆ ಅದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಇತ್ತೀಚಿನ ತೀರ್ಪೊಂದರಲ್ಲಿ ಹೇಳಿದೆ.

ಸೆ.೨೬ರಂದು ಜೋಡಿ ಕೊಲೆ ಮತ್ತು ಒಳಸಂಚು ಪ್ರಕರಣದಲ್ಲಿ ಆಕಾಶ ಸತೀಶ ಚಂಡಾಲಿಯಾ ಎಂಬ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ನ್ಯಾ.ಭಾರತಿ ಡಾಂಗ್ರೆ ಅವರ ಏಕ ನ್ಯಾಯಾಧೀಶ ಪೀಠವು ಈ ತೀರ್ಪನ್ನು ನೀಡಿದೆ.

ವಿಚಾರಣೆಯು ಬಾಕಿಯಿರುವಾಗ ವ್ಯಕ್ತಿಯನ್ನು ಅನಿರ್ದಿಷ್ಟಾವಧಿಗೆ ಜೈಲಿನಲ್ಲಿ ಇಡುವಂತಿಲ್ಲ ಮತ್ತು ಅದು ಸಂವಿಧಾನದಲ್ಲಿ ಹೇಳಲಾಗಿರುವ ಮೂಲಭೂತ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಇದು ಆರೋಪಿಯನ್ನು ಬಿಡುಗಡೆಗೊಳಿಸಲು ವಿವೇಚನೆಯನ್ನು ಚಲಾಯಿಸಲು ಸಮರ್ಥನೀಯ ಕಾರಣವೆಂದು ಪದೆ ಪದೇ ಪರಿಗಣಿಸಲಾಗಿದೆ ಎಂದು ನ್ಯಾ.ಡಾಂಗ್ರೆ ತೀರ್ಪಿನಲ್ಲಿ ಹೇಳಿದ್ದಾರೆ.

ಎರಡು ವಾರಗಳ ಹಿಂದಷ್ಟೇ ನ್ಯಾ.ಡಾಂಗ್ರೆಯವರು ಇನ್ನೊಂದು ಕೊಲೆ ಪ್ರಕರಣದಲ್ಲಿ ವಿಚಾರಣೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೆ.೨೦೨೨ರಲ್ಲಿ ಉಚ್ಚ ನ್ಯಾಯಾಲಯವು ಆದೇಶಿಸಿದ್ದರೂ ವಿಚಾರಣೆಯನ್ನು ಪೂರ್ಣಗೊಳಿಸುವುದರಲ್ಲಿ ವಿಳಂಬವನ್ನು ವಿವರಿಸುವಂತೆ ಸೆಷನ್ಸ್ ನ್ಯಾಯಾಧೀಶರಿಗೆ ಸೂಚಿಸಿದ್ದರು. ಪ್ರಕರಣದ ವಿಚಾರಣೆಗಳಲ್ಲಿ ಸಾಕ್ಷಿಗಳು ಮತ್ತು ಆರೋಪಿಯ ಹಾಜರಿಯನ್ನು ಖಚಿತಪಡಿಸುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವೈಫಲ್ಯಕ್ಕಾಗಿ ಅವರು ಸೆಷನ್ಸ್ ನ್ಯಾಯಾಧೀಶರನ್ನು ತರಾಟೆಗೆತ್ತಿಕೊಂಡಿದ್ದರು.

ಜೋಡಿ ಕೊಲೆ ಪ್ರಕರಣದಲ್ಲಿಯೂ ತನ್ನ ನಿರ್ದೇಶನಗಳಿದ್ದರೂ ವಿಚಾರಣಾ ನ್ಯಾಯಾಲಯವು ಕಾಲಮಿತಿಯಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ವಿಫಲಗೊಂಡಿದೆ ಎಂದು ಉಚ್ಚ ನ್ಯಾಯಾಲಯವು ಹೇಳಿತು. ಇಂತಹ ಸಂದರ್ಭಗಳಲ್ಲಿ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸದೆ ಬೇರೆ ಮಾರ್ಗವಿಲ್ಲ ಎಂದು ನ್ಯಾ.ಡಾಂಗ್ರೆ ಹೇಳಿದರು.

ತನ್ನ ಕಕ್ಷಿದಾರನು ಎಂಟು ತಿಂಗಳುಗಳಿಂದ ಜೈಲಿನಲ್ಲಿದ್ದಾನೆ ಮತ್ತು ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ತಿಳಿಸಿದ ಚಂಡಾಲಿಯಾ ಪರ ನ್ಯಾಯವಾದಿ ಸನಾ ರಯೀಸ್ ಖಾನ್ ಅವರು, ಅನಿರ್ದಿಷ್ಟಾವಧಿಗೆ ಸೆರೆವಾಸವು ವಿಚಾರಣಾ ಪೂರ್ವ ದೋಷನಿರ್ಣಯಕ್ಕೆ ಸಮನಾಗಿದೆ ಮತ್ತು ತ್ವರಿತ ವಿಚಾರಣೆಯನ್ನು ಖಚಿತಪಡಿಸದೆ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಸಂವಿಧಾನದ ೨೧ನೇ ವಿಧಿಗೆ ಅನುಗುಣವಾಗಿಲ್ಲ ಮತ್ತು ಅದು ಆರೋಪಿಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.

ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಅವರ ಹತ್ಯೆಗಾಗಿ ಗ್ಯಾಂಗ್ಸ್ಟರ್ ಜೊತೆ ಒಳಸಂಚು ರೂಪಿಸಿದ್ದ ಆರೋಪವನ್ನು ಚಂಡಾಲಿಯಾ ಎದುರಿಸುತ್ತಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News