ನಿರುದ್ಯೋಗ ರಾಷ್ಟ್ರೀಯ ಬಿಕ್ಕಟ್ಟು ಎಂಬುದನ್ನು ಬಜೆಟ್‌ನಲ್ಲಿ ಕೇಂದ್ರ ಸರಕಾರ ಒಪ್ಪಿಕೊಂಡಿದೆ: ಕಾಂಗ್ರೆಸ್ ಟೀಕೆ

Update: 2024-07-23 14:01 GMT

 ನಿರ್ಮಲಾ ಸೀತಾರಾಮನ್ , ಜೈರಾಮ್ ರಮೇಶ್ | PC : PTI 

ಹೊಸದಿಲ್ಲಿ: ಲೋಕಸಭೆಯಲ್ಲಿ ಸೋಮವಾರ ನಿರ್ಮಲಾ ಸೀತಾರಾಮನ್ ಮಾಡಿದ ಬಜೆಟ್ ಭಾಷಣವು ಕ್ರಿಯೆಗಿಂತಲೂ ಜನರನ್ನು ತಪ್ಪುದಾರಿಗೆ ಎಳೆಯುವುದರತ್ತ ಹೆಚ್ಚು ಗಮನಹರಿಸಿದೆ .ಭಾರೀ ಪ್ರಮಾಣದ ನಿರುದ್ಯೋಗವು ರಾಷ್ಟ್ರೀಯ ಬಿಕ್ಕಟ್ಟು ಎಂಬುದನ್ನು ಅದು ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ಪಕ್ಷವು ಟೀಕಿಸಿದೆ.

ಹತ್ತು ವರ್ಷಗಳ ನಿರಾಕರಣೆಯ ಬಳಿಕ ಪ್ರಧಾನಿ ಹಾಗೂ ಅವರ ಪಕ್ಷವು ನಿರುದ್ಯೋಗವು ಒಂದು ರಾಷ್ಟ್ರೀಯ ಬಿಕ್ಕಟ್ಟು ಎಂಬುದನ್ನು ಒಪ್ಪಿಕೊಂಡಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಕೇಂದ್ರ ಸರಕಾರದ ಬಜೆಟ್‌ನಲ್ಲಿ ಮಾಡಲಾಗಿರುವ ಹಲವಾರು ಘೋಷಣೆಗಳು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಅಂಶಗಳೇ ಆಗಿವೆ. 2024ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭ ಕಾಂಗ್ರೆಸ್ ಪಕ್ಷವು ಪ್ರಕಟಿಸಿದ ನ್ಯಾಯಪತ್ರದಲ್ಲಿ ಉಲ್ಲೇಖಿಸಲಾಗಿದ್ದ ‘ಪೆಹ್ಲಿ ನೌಕರಿ ಪಕ್ಕಿ ’ ಎಂಬ ಪ್ರಸ್ತಾವಿತ ಅಪ್ರೆಂಟಿಸ್ ಯೋಜನೆಯನ್ನೇ ಆಧರಿಸಿ ವಿತ್ತ ಸಚಿವೆ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ಘೋಷಿಸಿದ್ದಾರೆಂದು ಅವರು ಟೀಕಿಸಿದರು.

ಆದರೆ ಈ ಕಾರ್ಯಕ್ರಮವು ಡಿಪ್ಲೊಮಾ ಹೊಂದಿದವರು ಹಾಗೂ ಪದವೀಧರರಿಗೆ ಉದ್ಯೋಗ ಖಾತರಿಯನ್ನು ಒದಗಿಸುವ ಬದಲು ಪ್ರಚಾರಕ್ಕಷ್ಟೇ ರೂಪಿಸಿದಂತಿದೆ ಎಂದು ಅವರು ಟೀಕಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಒಂದು ವೇಳೆ ತಾನು ಅಧಿಕಾರಕ್ಕೇರಿದಲ್ಲಿ ಪ್ರತಿಯೊಬ್ಬ ಡಿಪ್ಲೊಮಾ ಹಾಗೂ ಕಾಲೇಜು ವಿದ್ಯಾರ್ಥಿಗೆ ಖಾಸಗಿ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಅನ್ನು ಒದಗಿಸುವ ಭರವಸೆಯನ್ನು ನೀಡಿತ್ತು.

ಇಂದು ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಜಾರ್ಖಂಡ್ ಅನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆಯೆಂದು ಕಾಂಗ್ರೆಸ್ ಪಕ್ಷದ ಜಾರ್ಖಂಡ್ ಘಟಕವು ಟೀಕಿಸಿದೆ. ಕೇಂದ್ರ ಬಜೆಟ್ ಜಾರ್ಖಂಡ್‌ಗಾಗಿ ಏನನ್ನೂ ಮಾಡಿಲ್ಲ. ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಲಾಗಿದೆ. ಆದರೆ ಬುಡಕಟ್ಟು ಜನರ ಪ್ರಾಬಲ್ಯದ ಜಾರ್ಖಡ್ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಟೀಕಿಸಿದ್ದಾರೆ.

ಜಾರ್ಖಂಡ್ ಕೇಂದ್ರದ ಪಕ್ಷಪಾತಕ್ಕೆ ಗುರಿಯಾಗಿದೆ.ಯಾಕೆಂದರೆ ಅದು ಬಿಜೆಪಿಯೇತರ ಸರಕಾರದಿಂದ ಆಳಲ್ಪಡುತ್ತಿದೆ. ರಾಜ್ಯ ಸರಕಾರದ ಮೇಲೆ ಒತ್ತಡವನ್ನು ಸೃಷ್ಟಿಸಲು ಕೇಂದ್ರ ಸರಕಾರವು ಬಯಸುತ್ತಿದೆ ಮತ್ತು ತನ್ನ ರಾಜಕೀಯ ಕಾರ್ಯಸೂಚಿಗಾಗಿ ಜನತೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶವನ್ನು ಸೃಷ್ಟಿಸಲು ಅದು ಬಯಸುತ್ತಿದೆ ಎಂದು ಠಾಕೂರ್ ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News