ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಅಂಗವಿಕಲತೆ ಕುರಿತ ಪ್ರಶ್ನೆ ಕೈಬಿಟ್ಟ ನಿರ್ಧಾರ ಸಮರ್ಥಿಸಿಕೊಂಡ ಕೇಂದ್ರ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6ರ ಭಾಗವಾಗಿ ಅಂಗವಿಕಲತೆ ಕುರಿತಾದ ಪ್ರಶ್ನೆಗಳನ್ನು ಕೈಬಿಟ್ಟಿರುವ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ಹೊಸದಿಲ್ಲಿ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6ರ ಭಾಗವಾಗಿ ಅಂಗವಿಕಲತೆ ಕುರಿತಾದ ಪ್ರಶ್ನೆಗಳನ್ನು ಕೈಬಿಟ್ಟಿರುವ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಅಂಗವಿಕಲತೆ ಕುರಿತ ಡೇಟಾ ಅಷ್ಟು ಬೇಗ ಬದಲಾಗುವ ಸಾಧ್ಯತೆಯಿಲ್ಲದೇ ಇರುವುದರಿಂದ ಅದನ್ನು ಸಂಗ್ರಹಿಸುವ ಅಗತ್ಯವಿಲ್ಲವೆಂಬ ಕಾರಣವನ್ನು ಕೇಂದ್ರ ನೀಡಿದೆ.
ಈ ಸಮೀಕ್ಷೆಯ ಪ್ರಾಥಮಿಕ ಆದ್ಯತೆ ತಾಯಿ, ಮಗುವಿನ ಆರೋಗ್ಯದ ಕುರಿತು ಡೇಟಾ ಸಂಗ್ರಹಿಸುವುದಾಗಿದೆ ಹಾಗೂ ಅದರ ಈಗಿನ ರೀತಿಯಲ್ಲಿ ಅಂಗವಿಕಲತೆ ಕುರಿತ ಮಾಹಿತಿಯನ್ನು ನಿಖರವಾಗಿ ದಾಖಲೀಕರಿಸಿಕೊಳ್ಳಲು ಸಾಧ್ಯವಾಗದು ಎಂದು ತಿಳಿಸಲಾಗಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹಾಗೂ ಎನ್‌ಎಸ್‌ಎಸ್‌ಒ ಅಂಗವಿಕಲತೆ ಕುರಿತು ಸಂಗ್ರಹಿಸುವ ಡೇಟಾದಲ್ಲಿ ವ್ಯತ್ಯಾಸವಿದೆ ಹಾಗೂ ಈಗಿನ ಸಮೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಅಂಗವಿಕಲತೆಯ ಪ್ರಮಾಣವನ್ನು ನಿಖರವಾಗಿ ಪಡೆಯಲು ಸಾಧ್ಯವಾಗದು ಎಂದು ಹೇಳಲಾಗಿದೆ.
ಅಂಗವಿಕಲತೆ ಕುರಿತ ಪ್ರಶ್ನೆಗಳನ್ನು 2019-21ರಲ್ಲಿ ನಡೆಸಲಾದ ಈ ಸಮೀಕ್ಷೆಯ ಐದನೇ ಸುತ್ತಿನಲ್ಲಿ ಸೇರ್ಪಡಿಸಲಾಗಿತ್ತು ಹಾಗೂ ಎನ್‌ಎಫ್‌ಎಚ್‌ಎಸ್ -5 ವರದಿಯ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಅಂಗವಿಕಲತೆ ಪ್ರಮಾಣ ಕೇವಲ ಶೇ1 ಆಗಿದ್ದರೆ ನಗರ ಪ್ರದೇಶಗಳಲ್ಲಿ ಇದು ಶೇ0.9 ಆಗಿದೆ. ಆದರೆ ಎನ್‌ಎಸ್‌ಎಸ್‌ಒ ಅಂದಾಜಿನ ಪ್ರಕಾರ 2018ರಲ್ಲಿ ಗ್ರಾಮೀಣ ಭಾಗಗಳಲ್ಲಿ ಶೇ2.3 ಹಾಗೂ ನಗರ ಪ್ರದೇಶಗಳಲ್ಲಿ ಶೇ 2 ಅಂಗವಿಕಲತೆಯಿದೆ.
ಅಂಗವಿಕಲತೆ ಕುರಿತ ಅಂಕಿಅಂಶ ಎನ್‌ಎಸ್‌ಎಸ್ 76ನೇ ಸುತ್ತಿನ ವರದಿಯಲ್ಲಿ ಲಭ್ಯವಿದೆ ಹಾಗೂ ಈಗಿನ ಸಮೀಕ್ಷೆಯು ತಾಂತ್ರಿಕ ಸಲಹಾ ಸಮಿತಿ ಮತ್ತು ಇತರ ಉನ್ನತ ಮಟ್ಟದ ಸಮಿತಿಗಳ ಶಿಫಾರಸುಗಳನ್ನು ಆಧರಿಸಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಅಂಗವಿಕಲತೆ ಕುರಿತ ಪ್ರಶ್ನೆಯನ್ನು ಈಗಿನ ಸಮೀಕ್ಷೆಯಲ್ಲಿ ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿದ ನ್ಯಾಷನಲ್ ಪ್ಲಾಟ್‌ಫಾರ್ಮ್ ಫಾರ್ ದಿ ರೈಟ್ಸ್ ಆಫ್ ದಿ ಡಿಸೇಬಲ್ಡ್ ಪ್ರಧಾನ ಕಾರ್ಯದರ್ಶಿ ಮುರಳೀಧರನ್, “ಜನರೊಂದಿಗೆ ಸರಿಯಾಗಿ ಸಂವಹನ ನಡೆಸುವ ಸಮೀಕ್ಷೆ ನಡೆಸುವವರ ಅಸಾಮರ್ಥ್ಯಕ್ಕೆ ಜನರನ್ನು ದೂಷಿಸುವುದು ಸಮೀಕ್ಷೆ ನಡೆಸುವವರ ಅಸಂವೇದಿತನ ಹಾಗೂ ಸೂಕ್ತ ತರಬೇತಿಯ ಕೊರತೆಯನ್ನು ಬಿಂಬಿಸುತ್ತದೆ. ನೀತಿ ತಯಾರಕರು ಹಾಗೂ ಅಧಿಕಾರಶಾಹಿಯಲ್ಲಿ ಸಂವೇದನಾಶೀಲತೆಯ ಕೊರತೆಯ ಪ್ರಶ್ನೆಯ ಜೊತೆಗೆ ವಹಿಸಲಾದ ಕೆಲಸಗಳ ಮೂಲಭೂತ ಅವಶ್ಯಕತೆಗಳ ಕುರಿತು ಉನ್ನತ ಮಟ್ಟದಲ್ಲಿರುವ ಜನರಿಗೆ ಅರ್ಥವಾಗದೇ ಇದ್ದಾಗ ಹೀಗಾಗುತ್ತದೆ,” ಎಂದು ಹೇಳಿದ್ದಾರೆ.