2018 ಕರ್ನಾಟಕ ಚುನಾವಣೆಗೆ ಮುನ್ನ ಅವಧಿ ಮೀರಿದ ಬಾಂಡ್‌ಗಳನ್ನು ನಗದೀಕರಿಸಲು ಬಿಜೆಪಿಗೆ ಅನುಮತಿಸಲು ಎಸ್‌ಬಿಐಗೆ ಒತ್ತಡ ಹಾಕಿದ್ದ ಕೇಂದ್ರ ಸರ್ಕಾರ: ವರದಿ
ಹೊಸದಿಲ್ಲಿ: ಚುನಾವಣಾ ಆಯೋಗ ಬಹಿರಂಗಪಡಿಸಿರುವ ಹೊಸ ಮಾಹಿತಿಗಳ ಪ್ರಕಾರ 2018 ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಅವಧಿ ಮೀರಿದ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಲು ಆಗಿನ ಅಲ್ಲಿನ ಆಡಳಿತ ಬಿಜೆಪಿಗೆ ಅನುವು ಮಾಡಿಕೊಡಲು ಚುನಾವಣಾ ಬಾಂಡ್ ನಿಯಮಗಳನ್ನು ಮುರಿಯಲು ಕೇಂದ್ರ ಸರ್ಕಾರ ತ್ವರಿತ ಅನುಮೋದನೆ ನೀಡಿತ್ತು ಎಂಬುದು ಬೆಳಕಿಗೆ ಬಂದಿದೆ.
ಬಿಜೆಪಿ ಪಕ್ಷದವರು ಅವಧಿ ಮೀರಿದ ರೂ. 10 ಕೋಟಿ ಬೆಲೆಯ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಲು ಬ್ಯಾಂಕ್‌ಗೆ ತೆರಳಿದಾಗ ಆಗ ಕೇಂದ್ರ ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರು ಅದಕ್ಕೆ ಅನುಮೋದನೆ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಲವಂತಪಡಿಸಿದ್ದರು ಎಂದು reporters-collective.in ವರದಿ ಮಾಡಿದೆ.
ಚುನಾವಣಾ ಬಾಂಡ್‌ಗಳನ್ನು 15 ದಿನ ಅವಧಿಯೊಳಗೆ ನಗದೀಕರಿಸಬೇಕೆಂಬ ನಿಯಮವಿದ್ದರೂ ಈ ಅವಧಿ ಮುಗಿದ ಎರಡು ದಿನಗಳ ನಂತರ, ಅಂದರೆ ಮೇ 23, 2028 ರಂದು ರೂ 10 ಕೋಟಿ ಮೌಲ್ಯದ ಬಾಂಡ್‌ಗಳನ್ನು ನಗದೀಕರಿಸಲು ಅಜ್ಞಾತ ರಾಜಕೀಯ ಪಕ್ಷಕ್ಕೆ ಎಸ್‌ಬಿಐ ಅನುಮತಿಸಿತ್ತು ಎಂದು ರಿಪೋರ್ಟರ್ಸ್ ಕಲೆಕ್ಟಿವ್ 2019ರಲ್ಲಿಯೇ ಅಧಿಕೃತ ದಾಖಲೆಗಳನ್ನಾಧರಿಸಿ (ಕೊಮ್ಮೊಡೋರ್ ಲೋಕೇಶ್ ಬಾತ್ರಾ ಅವರು ಪಡೆದ ಅಧಿಕೃತ ದಾಖಲೆಗಳು) ವರದಿ ಮಾಡಿತ್ತು.
ಆಗ ಆ ಪಕ್ಷ ಯಾವುದೆಂದು ತಿಳಿಯದೇ ಇದ್ದರೂ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಸಾರವಾಗಿ ಚುನಾವಣಾ ಆಯೋಗ ಈಗ ಬಹಿರಂಗಪಡಿಸಿರುವ ಮಾಹಿತಿಯಲ್ಲಿ ನಿಯಮ ಉಲ್ಲಂಘಿಸಿ ಅವಧಿ ಮೀರಿದ ನಂತರ ರೂ. 10 ಕೋಟಿ ಮೌಲ್ಯದ ಬಾಂಡ್ ನಗದೀಕರಿಸಿದ ಪಕ್ಷ ಬಿಜೆಪಿ ಎಂದು ತಿಳಿದು ಬಂದಿದೆ.
ನಿಯಮಗಳ ಪ್ರಕಾರ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್‌ನಲ್ಲಿ 10 ದಿನ ಅವಧಿಯಲ್ಲಿ ಬಾಂಡ್ ಮಾರಾಟಕ್ಕೆ ಅನುಮತಿಸಲಾಗಿದ್ದರೆ 2018ರಲ್ಲಿ ಪ್ರಧಾನಿ ಕಾರ್ಯಾಲಯವು ವಿತ್ತ ಸಚಿವಾಲಯಕ್ಕೆ ತನ್ನದೇ ನಿಯಮಗಳನ್ನು ಮುರಿದು ಕರ್ನಾಟಕ ಚುನಾವಣೆಗಳಿಗೆ ಮುನ್ನ ಬಾಂಡ್ ಮಾರಾಟಕ್ಕೆ ವಿಶೇಷ 10 ದಿನ ಅವಕಾಶ ಕಲ್ಪಿಸಿತ್ತು ಎಂದೂ ವರದಿಯಾಗಿದೆ.
ಇದೇ ರೀತಿ ಗುಜರಾತ್ ವಿಧಾನಸಭಾ ಚುನಾವಣೆಗೆ ಮುಂಚೆ ಡಿಸೆಂಬರ್ 2022ರಲ್ಲಿ ಬಾಂಡ್ ಮಾರಾಟಕ್ಕೆ ವಿಶೇಷ 10 ದಿನಗಳ ಸಮಾಯವಕಾಶ ಕಲ್ಪಿಸಲಾಗಿತ್ತೆಂದೂ ವರದಿಯಾಗಿದೆ.