ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಉಗ್ರರೊಂದಿಗೆ ಕಾಳಗದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ
ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರೊಂದಿಗೆ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಯೋಧ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಜಿಲ್ಲೆಯ ಫೌಬಾಕ್ಚಾವೊ ಇಖಾಯಿ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದ ಗುಂಡಿನ ಕಾಳಗ ತಡರಾತ್ರಿ ಬಂಡುಕೋರರು ಪರಾರಿಯಾಗುವವರೆಗೂ ಸುಮಾರು 15 ಗಂಟೆಗಳ ಕಾಲ ಮುಂದುವರಿದಿತ್ತು. ಗುಂಡಿನ ಕಾಳಗದ ಸಂದರ್ಭದಲ್ಲಿ ಸಮೀಪದ ಟೆರಾ ಖೊಂಗ್ಸಂಗ್ಬಿಯಲ್ಲಿನ ಮನೆಯೊಂದಕ್ಕೆ ಬೆಂಕಿ ಹಚ್ಚಲಾಗಿದೆ.
ಎರಡೂ ಕಡೆಗಳು ಗುಂಡಿನ ಕಾಳಗದಲ್ಲಿ ನಿರತರಾಗಿದ್ದಾಗ, ಜನರ ಗುಂಪುಗಳನ್ನು ಚದುರಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಗಾಯಾಳು ಮಣಿಪುರ ಪೊಲೀಸ್ ಕಮಾಂಡೋವನ್ನು ನೇಮಿಯರ್ಕ್ಪಾಮ್ ಇಬೋಮ್ಚಾ (40) ಎಂದು ಗುರುತಿಸಲಾಗಿದ್ದು,ಕುಮಾಂವ್ ರೆಜಿಮೆಂಟ್ ಗೆ ಸೇರಿದ ಸೇನಾ ಯೋಧನನ್ನು ಇನ್ನಷ್ಟೇ ಗುರುತಿಸಬೇಕಿದೆ ಎಂದರು.
ಪ್ರದೇಶದಲ್ಲಿ ಹಾರಾಡಿದ್ದ ಡ್ರೋನ್ ಬಂಡುಕೋರರು ತಮ್ಮ ಕೆಲವು ಸಹಚರರನ್ನು ಹೊತ್ತೊಯ್ಯುತ್ತಿರುವ ಚಿತ್ರಗಳನ್ನು ಸೆರೆಹಿಡಿದಿದೆ, ಆದರೆ ಅವರು ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟವರೋ ಅಥವಾ ಗಾಯಾಳುಗಳೋ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.