ಉತ್ತರ ಪ್ರದೇಶ: ಶಾಲೆಯ ‘ಉನ್ನತಿ’ಗಾಗಿ ಎರಡನೇ ತರಗತಿ ವಿದ್ಯಾರ್ಥಿಯ ಬಲಿ!

Update: 2024-09-27 12:12 GMT

Photo : NDTV 

ಆಗ್ರಾ: ಶಾಲೆಗೆ ಯಶಸ್ಸು ಮತ್ತು ಪ್ರಸಿದ್ಧಿಯನ್ನು ತರಲು ವಾಮಾಚಾರದ ಅಂಗವಾಗಿ ಹಥರಾಸ್‌ನ ಶಾಲಾ ಹಾಸ್ಟೆಲ್‌ನಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಯನ್ನು ’ಬಲಿ’ಯ ಹೆಸರಿನಲ್ಲಿ ಹತ್ಯೆಮಾಡಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಸಹಪವು ಪೋಲಿಸ್ ಠಾಣಾ ವ್ಯಾಪ್ತಿಯ ರಸಗಾವನ್‌ನ ಡಿಎಲ್ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕ ಮತ್ತು ಮೂವರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ಇತ್ತೀಚಿಗೆ ಇನ್ನೋರ್ವ ಬಾಲಕನ ಹತ್ಯೆಗೆ ಪ್ರಯತ್ನಿಸಿದ್ದರಾದರೂ ಅದು ಯಶಸ್ವಿಯಾಗಿರಲಿಲ್ಲ ಎಂಬ ಆಘಾತಕಾರಿ ಅಂಶವನ್ನೂ ಪೋಲಿಸರು ಬಹಿರಂಗಗೊಳಿಸಿದ್ದಾರೆ.

ಶಾಲೆಯ ನಿರ್ದೇಶಕ ದಿನೇಶ್ ಬಾಘೆಲ್, ಆತನ ತಂದೆ ಜಶೋಧನ ಸಿಂಗ್,ಶಿಕ್ಷಕರಾದ ಲಕ್ಷ್ಮಣ ಸಿಂಗ್,ವೀರಪಾಲ ಸಿಂಗ್ ಮತ್ತು ರಾಮಪ್ರಕಾಶ ಸೋಲಂಕಿ ಬಾಲಕನ ಹತ್ಯೆಯಲ್ಲಿ ಭಾಗಿಯಾಗಿದ್ದರು. ಹತ್ಯೆಯಲ್ಲಿ ಇತರ ಯಾರಾದರೂ ಭಾಗಿಯಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹಥರಾಸ್ ಎಸ್‌ಪಿ ನಿಪುಣ ಅಗರವಾಲ್ ತಿಳಿಸಿದರು.

ಜಶೋಧನ ಸಿಂಗ್ ವಾಮಾಚಾರ ಮತ್ತು ತಾಂತ್ರಿಕ ವಿಧಿಗಳಲ್ಲಿ ನಂಬಿಕೆಯನ್ನು ಹೊಂದಿದ್ದು,‌ ಆತ ಮತ್ತು ಇತರ ಆರೋಪಿಗಳು ಮಗುವೊಂದನ್ನು ಬಲಿ ನೀಡಿದರೆ ಶಾಲೆಯು ಉನ್ನತಿಗೇರುತ್ತದೆ ಎಂದು ಭಾವಿಸಿದ್ದರು ಎಂದರು.

ಡಿಎಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಸುಮಾರು 600 ವಿದ್ಯಾರ್ಥಿಗಳು ಓದುತ್ತಿದ್ದು, ಬಾಲಕನ ಹತ್ಯೆ ನಡೆದ ಹಾಸ್ಟೆಲ್‌ನಲ್ಲಿ 1ನೇ ತರಗತಿಯಿಂದ ಐದನೇ ತರಗತಿವರೆಗಿನ ಮಕ್ಕಳು ವಾಸವಾಗಿದ್ದಾರೆ. ಹತ ಬಾಲಕನ ತಂದೆ ಕೃಷ್ಣ ಕುಶ್ವಾಹ ಅವರು ದಿಲ್ಲಿಯ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ.

ಸೋಮವಾರ ಬೆಳಿಗ್ಗೆ ಬಾಲಕ ತನ್ನ ಹಾಸಿಗೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಸಾವಿನ ಕುರಿತು ತಕ್ಷಣ ಪೋಲಿಸರಿಗೆ ಮಾಹಿತಿ ನೀಡುವ ಬದಲು ಬಾಘೆಲ್ ಬಾಲಕನ ಶವವನ್ನು ತನ್ನ ಕಾರಿನಲ್ಲಿಟ್ಟುಕೊಂಡು ಆಗ್ರಾಕ್ಕೆ ಮತ್ತು ಅಲಿಗಡಕ್ಕೆ ಗಂಟೆಗಳ ಕಾಲ ತಿರುಗಾಡಿದ್ದ. ಹಥರಾಸ್‌ನ ತುರ್ಸೆನ್ ನಿವಾಸಿಗಳಾದ ಬಾಲಕನ ಕುಟುಂಬಕ್ಕೆ ಆತ ಅಸ್ವಸ್ಥಗೊಂಡಿದ್ದಾನೆ ಎಂದು ತಿಳಿಸಲಾಗಿತ್ತು. ಆದರೆ ಅವರು ಶಾಲೆಗೆ ಧಾವಿಸಿದಾಗ ಬಾಲಕ ಅಲ್ಲಿರಲಿಲ್ಲ.

ಶಂಕೆಗೊಂಡ ಕುಶ್ವಾಹ ಪೋಲಿಸರಿಗೆ ಮಾಹಿತಿ ನೀಡಿದ್ದರು. ಬಾಘೆಲ್‌ಗಾಗಿ ಹುಡುಕಾಟ ಆರಂಭಿಸಿದ ಪೋಲಿಸರಿಗೆ ಕೆಲವು ಗಂಟೆಗಳ ಬಳಿಕ ಆತನ ಕಾರಿನಲ್ಲಿ ಕುತ್ತಿಗೆಯಲ್ಲಿ ಗಾಯದ ಗುರುತುಗಳಿದ್ದ ಬಾಲಕನ ಶವ ಪತ್ತೆಯಾಗಿತ್ತು.

ರವಿವಾರ ರಾತ್ರಿ ಬಾಲಕನ ಕುತ್ತಿಗೆ ಹಿಸುಕಿ ಕೊಲ್ಲಲಾಗಿದೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಐವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News