ರಾಹುಲ್‌ ಗಾಂಧಿ ಹೊಲಿದ ಚಪ್ಪಲಿ ಖರೀದಿಸಲು 10 ಲಕ್ಷ ರೂ. ಆಫರ್ | ಮಾರಾಟಕ್ಕೆ ನಿರಾಕರಿಸಿದ ಚಮ್ಮಾರ

Update: 2024-08-01 16:35 GMT

PC : X/@iSumitjoshi

ಸುಲ್ತಾನ್ಪುರ : ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಹಾಜರಾಗಲು ಉತ್ತರಪ್ರದೇಶದ ಸುಲ್ತಾನ್‌ಪುರಕ್ಕೆ ತೆರಳಿದ್ದ ರಾಹುಲ್‌ ಗಾಂಧಿ, ಮಾರ್ಗ ಮಧ್ಯೆ ಚಮ್ಮಾರ ರಾಮ್‌ ಚೇತ್ ಅಂಗಡಿಗೂ ಭೇಟಿ ನೀಡಿದ್ದಾಗ ಹೊಲಿದಿದ್ದ ಚಪ್ಪಲಿಗಳನ್ನು ಕೊಳ್ಳಲು 10 ಲಕ್ಷ ರೂ. ಕೊಟ್ಟು ಖರೀದಿಸಲು ಜನರು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ. ಆದರೆ ಚಮ್ಮಾರ ರಾಮ್‌ ಚೇತ್‌ ಅವುಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದಾರೆ.

ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೊಲಿದಿರುವ ಚಪ್ಪಲಿಗಳು ನನ್ನ ಅದೃಷ್ಟದ ಪಾದರಕ್ಷೆಗಳೆಂದು ಭಾವಿಸಿದ್ದೇನೆ. ಅವುಗಳನ್ನು ಗಾಜಿನ ಪೆಟ್ಟಿಗೆಯಲ್ಲಿ ಜೋಪಾನವಾಗಿಡುತ್ತೇನೆ ಎಂದು ರಾಮ್‌ ಚೇತ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ಭೇಟಿಯ ಬಳಿಕ ಚಮ್ಮಾರ ರಾಮ್‌ ಚೇತ್‌ ಗೆ ಈಗ ʼಸ್ಟಾರ್‌ ಗಿರಿʼ ಬಂದಿದೆ. ಅವರೀಗ ಸುಲ್ತಾನ್‌ಪುರದಲ್ಲಿ ಸೆಲೆಬ್ರಿಟಿಯಾಗಿದ್ದಾರೆ. ದೂರದ ಊರುಗಳಿಂದಲೂ ಜನರು ಅವರ ಭೇಟಿಗೆ ಬರುತ್ತಿದ್ದಾರೆ.

ಜುಲೈ 26ರಂದು ಉತ್ತರಪ್ರದೇಶದ ಸುಲ್ತಾನ್‌ಪುರದ ಹೊರವಲಯದ ವಿಧಾಯಕನಗರ ಮಾರ್ಗವಾಗಿ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ತೆರಳುತ್ತಿದ್ದ ವೇಳೆ, ರಾಹುಲ್ ಗಾಂಧಿ ಅವರು ಚಮ್ಮಾರ ರಾಮ್‌ ಚೇತ್‌ ಅವರ ಅಂಗಡಿಗೆ ಭೇಟಿ ನೀಡಿದ್ದರು. ಅವರ ಕೆಲಸ, ಕುಟುಂಬದ ಕುರಿತು ರಾಹುಲ್ ವಿಚಾರಿಸಿದ್ದರು. ಬಳಿಕ ಚಪ್ಪಲಿ ಹೊಲಿಯುವ ಬಗ್ಗೆ ಮಾಹಿತಿ ಪಡೆದ ಅವರು, ಸ್ವತಃ ಗ್ರಾಹಕರೊಬ್ಬರ ಚಪ್ಪಲಿ ಹೊಲಿದಿದ್ದರು. ಕಚ್ಛಾ ವಸ್ತು ಬಳಸಿ ಶೂ ಸಿದ್ಧಪಡಿಸಿದ್ದರು.

ರಾಹುಲ್‌ ಗಾಂಧಿ ಚಮ್ಮಾರರೊಬ್ಬರ ಅಂಗಡಿಗೆ ಭೇಟಿ ನೀಡಿದ್ದ ವಿಚಾರ ತಿಳಿದು ಜನಸ್ತೋಮವೇ ನೆರೆದಿತ್ತು. ಅಲ್ಲಿಂದ ತೆರಳಿದ್ದ ರಾಹುಲ್‌ ಚಮ್ಮಾರ ರಾಮ್‌ ಚೇತ್‌ ಗೆ ಸಹಾಯವಾಗಲೆಂದು ಆಧುನಿಕ ಹೊಲಿಗೆ ಯಂತ್ರವನ್ನು ತನ್ನ ತಂಡದ ಮೂಲಕ ಕಳುಹಿಸಿಕೊಟ್ಟಿದ್ದರು. ಇದು ರಾಮ್‌ ಚೇತ್‌ ಗೆ ಅಚ್ಚರಿಯ ಜೊತೆ ಸಂತಸವುಂಟು ಮಾಡಿತ್ತು.

“ರಾಹುಲ್‌ ಗಾಂಧಿ ಅವರು ಭೇಟಿ ನೀಡಿದ ನಂತರ ನನ್ನ ಅದೃಷ್ಟವೇ ಬದಲಾಗಿದೆ. ಈ ಮೊದಲು ನಾನು ಒಬ್ಬ ಸಾಮಾನ್ಯ ಚಮ್ಮಾರನಾಗಿದ್ದೆ. ನನ್ನ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಈಗ ಜನರು ಅಂಗಡಿಗೆ ಬಂದು, ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ” ಎಂದು ರಾಮ್‌ ಚೇತ್‌ ಹೇಳುತ್ತಾರೆ.

ವಿಪಕ್ಷ ನಾಯಕನ ಭೇಟಿಯು ವೈರಲ್‌ ಆದ ಬಳಿಕ, ಚಮ್ಮಾರ ರಾಮ್‌ ಚೇತ್ ಎದುರಿಸುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆಯುವುದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಅವರ ಭೇಟಿಗೆ ಬರುತ್ತಿದ್ದಾರೆ.

ರಾಮ್ ಚೇತ್‌ ಅವರ ಮೊಬೈಲ್‌ ಗೆ ಕರೆಗಳು ಬರುತ್ತಿವೆ. ರಾಹುಲ್‌ ಗಾಂಧಿ ಹೊಲಿದಿರುವ ಚಪ್ಪಲಿಗಳನ್ನು ಖರೀದಿಸಲು ಬಹಳಷ್ಟು ಜನರು ಆಸಕ್ತಿ ತೋರುತ್ತಿದ್ದಾರೆ. ಕರೆ ಮಾಡಿದ್ದವರೊಬ್ಬರು ಮೊದಲು 5 ಲಕ್ಚ ರೂ ಕೊಡುತ್ತೇನೆ ಎಂದಿದ್ದಾರೆ. ನಿರಾಕರಿಸಿದಾಗ 10 ಲಕ್ಷ ರೂ. ನೀಡಿ ಖರೀದಿಸುವುದಾಗಿ ಹೇಳಿರುವುದು ರಾಮ್‌ ಚೇತ್‌ ಅವರಿಗೂ ಅಚ್ಚರಿ ತಂದಿದೆ. ಆದರೆ ರಾಮ್‌ ಚೇತ್ ಅದನ್ನು ನಯವಾಗಿಯೇ ನಿರಾಕರಿಸಿದ್ದಾರೆ. ತಾನು ಆ ಚಪ್ಪಲಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ತನ್ನ ಅಂಗಡಿಗೆ ಬೇಟಿ ನೀಡಿರುವುದು, ಬಳಿಕ ಹೊಲಿಗೆ ಯಂತ್ರ ಕಳುಹಿಸಿಕೊಟ್ಟಿರುವುದೆಲ್ಲವೂ ರಾಮ್‌ ಚೇತ್‌ ಗೆ ಕನಸಿನಲ್ಲಿ ನಡೆದ ಘಟನೆಯಂತೆ ಭಾಸವಾಗುತ್ತಿದೆ. ರಾಹುಲ್‌ ಗಾಂಧಿ ನನ್ನೊಂದಿಗೆ ಅಂಗಡಿಯಲ್ಲಿ ಕುಳಿತು, ಚಪ್ಪಲಿ ಹೊಲಿಯುವ ಮೂಲಕ ನನ್ನ ಪಾಲುದಾರರಾಗಿದ್ದಾರೆ ಎಂದು ರಾಮ್‌ ಚೇತ್ ಈಗ ಅಭಿಮಾನದ ನಗೆ ಬೀರುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News