ಅದಾನಿ ಉದ್ಯಮ ಸಮೂಹದ ವಿರುದ್ಧ ಅಮೆರಿಕ ತನಿಖೆ
ವಾಷಿಂಗ್ಟನ್: ಅದಾನಿ ಉದ್ಯಮ ಸಮೂಹ ಲಂಚ ನೀಡಿಕೆಯಲ್ಲಿ ತೊಡಗಿಸಿಕೊಂಡಿದೆಯೇ ಎಂಬ ಬಗ್ಗೆ ತನಿಖೆಯನ್ನು ಮತ್ತಷ್ಟು ವಿಸ್ತೃತಗೊಳಿಸಲು ಅಮೆರಿಕ ನಿರ್ಧರಿಸಿದೆ. ಜತೆಗೆ ಕಂಪನಿಯ ಕೋಟ್ಯಧಿಪತಿ ಸಂಸ್ಥಾಪಕರ ನಡತೆ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಅದಾನಿ ಕಂಪನಿ ಅಥವಾ ಗೌತಮ್ ಅದಾನಿ ಸೇರಿದಂತೆ ಇದಕ್ಕೆ ಸಂಬಂಧ ಹೊಂದಿದ ವ್ಯಕ್ತಿಗಳು ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ತಮ್ಮ ಪರವಾದ ನಿರ್ಧಾರ ಕೈಗೊಳ್ಳಲು ಭಾರತದ ಅಧಿಕಾರಿಗಳಿಗೆ ಲಂಚ ನೀಡುವುದರಲ್ಲಿ ನಿರತರಾಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿಗಳನ್ನು ಶೋಧಿಸಲಾಗುತ್ತಿದೆ ಎಂದು ಈ ರಹಸ್ಯ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಅಝೂರ್ ಪವರ್ ಗ್ಲೋಬಲ್ ಎಂಬ ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಕಂಪನಿ ಬಗ್ಗೆಯೂ ತನಿಖೆ ನಡೆಸಲಾಗುತ್ತಿದ್ದು, ಅಮೆರಿಕದ ನ್ಯೂಯಾರ್ಕ್ ಪೂರ್ವ ಜಿಲ್ಲೆಯ ಅಟಾರ್ನಿ ಕಚೇರಿ ಮತ್ತು ವಾಷಿಂಗ್ಟನ್‍ನ ನ್ಯಾಯಾಂಗ ಇಲಾಖೆಯ ವಂಚನೆ ಘಟನೆ ತನಿಖೆ ನಡೆಸುತ್ತಿವೆ.
"ನಮ್ಮ ಸಮೂಹದ ಅಧ್ಯಕ್ಷರ ಮೇಲೆ ತನಿಖೆ ನಡೆಯುತ್ತಿರುವ ಬಗ್ಗೆ ನಮಗೆ ಯಾವುದೇ ಅರಿವು ಇಲ್ಲ" ಎಂದು ಅದಾನಿ ಸಮೂಹ ಇ-ಮೇಲ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. "ಆಡಳಿತದ ಅತ್ಯುನ್ನತ ಮಾನದಂಡಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಉದ್ಯಮ ಸಮೂಹ, ಭಾರತ ಮತ್ತು ಇತರ ದೇಶಗಳಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಲಂಚ ವಿರೋಧಿ ಕಾನೂನುಗಳಿಗೆ ಬದ್ಧ" ಎಂದು ಹೇಳಿದೆ.