ಉತ್ತರ ಪ್ರದೇಶ| ದ್ವೇಷ ಪ್ರಚೋದನೆ ಆರೋಪ; ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್ ವಿರುದ್ಧ ಎಫ್‌ಐಆರ್ ದಾಖಲು

Update: 2023-11-04 16:43 GMT

ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್  Photo- PTI

ಲಕ್ನೊ: ದ್ವೇಷ ಪ್ರಚೋದನೆ ಆರೋಪಿಸಿ ಎಬಿವಿಪಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಉತ್ತರಪ್ರದೇಶ ರಾಜ್ಯಾಧ್ಯಕ್ಷ ಅಜಯ್ ರಾಯ್ ಅವರ ವಿರುದ್ಧ ಉತ್ತರಪ್ರದೇಶ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಎಬಿವಿಪಿಯ ಪದಾಧಿಕಾರಿಗಳು ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರಕಾರ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (ಬಿಎಚ್‌ಯು)ದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಘಟನೆಯಲ್ಲಿ ಸಂಘಟನೆಯ ಸದಸ್ಯರು ಭಾಗಿಯಾಗಿದ್ದಾರೆ ಎಂದು ರಾಯ್ ಆರೋಪಿಸಿದ್ದರು.

‘‘ದೂರಿನ ಆಧಾರದಲ್ಲಿ ಕಾಂಗ್ರೆಸ್ ನಾಯಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇಲ್ಲಿನ ಲಂಕಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮ್ಮ ವಿರುದ್ಧದ ದೂರನ್ನು ಆರೆಸ್ಸೆಸ್ ನ ವಿದ್ಯಾರ್ಥಿ ವಿಭಾಗವಾಗಿರುವ ಎಬಿವಿಪಿಯ ಆತಂಕದ ಸಂಕೇತ ಎಂದು ರಾಯ್ ಅವರು ವಿವರಿಸಿದ್ದಾರೆ.

‘‘ಇದು ಅವರ ಆತಂಕವನ್ನು ಪ್ರದರ್ಶಿಸಿದೆ. ಪ್ರಕರಣದ ತನಿಖೆಯ ಬಳಿಕ ಯಾರು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿಯಲಿದೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಹೊರಗಿನವರಿಗೆ ಆಶ್ರಯ ನೀಡುವ ಎಬಿವಿಪಿ ಸದಸ್ಯರ ಅಡ್ಡೆಯಾಗಿ ಮಾರ್ಪಟ್ಟಿದೆ’’ ಎಂದು ರಾಯ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News