ಉತ್ತರಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟ ಸದೃಢ : ಅಖಿಲೇಶ್
ಲಕ್ನೋ : ಉತ್ತರಪ್ರದೇಶದಲ್ಲಿ ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಊಹಾಪೋಹಗಳು ಹರಡುತ್ತಿರುವಂತೆಯೇ, ಪ್ರತಿಪಕ್ಷ ಮೈತ್ರಿಕೂಟವು ಸದೃಢವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಹೇಳಿದ್ದಾರೆ. ರಾಜ್ಯದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜೊತೆಯಾಗಿ ಸ್ಪರ್ಧಿಸಲಿವೆ ಎಂದು ಅವರು ತಿಳಿಸಿದ್ದಾರೆ.
ತನ್ನ ತಂದೆ ಹಾಗೂ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಮ್ ಸಿಂಗ್ ಯಾದವ್‌ರ ಎರಡನೇ ಪುಣ್ಯತಿಥಿಯ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಮುಂಬರುವ ಉತ್ತರಪ್ರದೇಶ ಉಪಚುನಾವಣೆಯಲ್ಲಿ ಮೈತ್ರಿಕೂಟದ ಸ್ಥಿತಿಗತಿ ಬಗ್ಗೆ ಚರ್ಚಿಸಿದರು.
‘‘ಉತ್ತರಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟವು ಸದೃಢವಾಗಿದೆ. ರಾಜ್ಯದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜೊತೆಯಾಗಿ ಸ್ಪರ್ಧಿಸಲಿವೆ’’ ಎಂದು ಅಖಿಲೇಶ್ ಸ್ಪಷ್ಟಪಡಿಸಿದರು.
ಸಮಾಜವಾದಿ ಪಕ್ಷವು ಬುಧವಾರ ಕರ್ಹಲ್, ಸಿಸಮಾವು, ಕತೇರಿ, ಫೂಲ್‌ಪುರ, ಮಿಲ್ಕಿಪುರ್ ಮತ್ತು ಮಝ್ವ- ಈ ಆರು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಈ ಘೋಷಣೆಯ ಬೆನ್ನಿಗೇ, ಈ ನಿರ್ಧಾರದ ಬಗ್ಗೆ ತಮಗೆ ಮಾಹಿತಿ ನೀಡಲಾಗಿಲ್ಲ ಮತ್ತು ಇಂಡಿಯಾ ಒಕ್ಕೂಟದ ಸಮನ್ವಯ ಸಮಿತಿಯೊಂದಿಗೆ ಯಾವುದೇ ಮಾತುಕತೆ ನಡೆಸಲಾಗಿಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.
‘‘ರಾಜ್ಯ ಉಸ್ತುವಾರಿ ಅವಿನಾಶ್ ಪಾಂಡೆ ಏನು ಹೇಳಿದ್ದಾರೋ ಅದನ್ನು ಮಾಡಲಾಗುತ್ತದೆ. ಕೇಂದ್ರೀಯ ನಾಯಕತ್ವವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಇರುತ್ತದೆ’’ ಎಂದು ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಹೇಳಿದರು.
ಉತ್ತರಪ್ರದೇಶದ 10 ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ.