ಉತ್ತರ ಪ್ರದೇಶ :ಕಸ್ಟಡಿಯಲ್ಲಿ ವ್ಯಕ್ತಿ ಸಾವು; ಥಳಿತದ ಆರೋಪ ನಿರಾಕರಿಸಿದ ಪೋಲಿಸರು
ಪಿಲಿಭಿತ್: ಜಿಲ್ಲೆಯ ಬಾರ್ಖೇರಾ ಪೋಲಿಸ್ ಠಾಣೆಯಲ್ಲಿ ಶುಕ್ರವಾರ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಪೋಲಿಸ್ ಕಸ್ಟಡಿಯಲ್ಲಿದ್ದ ಆತನನ್ನು ಥಳಿಸಲಾಗಿತ್ತು ಎಂಬ ಕುಟುಂಬದ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಪಹಾಡಗಂಜ್ ನಿವಾಸಿ ಬಶೀರ್ ಖಾನ್ ಅಲಿಯಾಸ್ ಪಹಲ್ವಾನ್ (40) ನನ್ನು ಆತನ ಪತ್ನಿಯ ದೂರಿನ ಮೇರೆಗೆ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದರು. ಪೋಲಿಸರಿಂದ ಹಲ್ಲೆಯ ಬಳಿಕ ಖಾನ್ ಮೃತಪಟ್ಟಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ವೈದ್ಯರ ತಂಡವು ಖಾನ್ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ಅದನ್ನು ವೀಡಿಯೊದಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ ಬಿಸಾಲ್‌ಪುರ ಸರ್ಕಲ್ ಆಫೀಸರ್ ಸತೀಶ ಶುಕ್ಲಾ ಅವರು, ಕುಟುಂಬ ಸದಸ್ಯರು ಸಲ್ಲಿಸಿರುವ ದೂರು ಮತ್ತು ಮರಣೋತ್ತರ ಪರೀಕ್ಷಾ ವರದಿಯ ಆಧಾರದಲ್ಲಿ ತನಿಖೆಯ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಯಾವುದೇ ದೂರನ್ನು ಸ್ವೀಕರಿಸಿರುವುದನ್ನು ಮತ್ತು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಪೋಲಿಸರು, ಖಾನ್ ಓರ್ವ ಕ್ರಿಮಿನಲ್ ಆಗಿದ್ದ ಎಂದಿದ್ದಾರೆ.
ಶುಕ್ಲಾ ಪ್ರಕಾರ ಖಾನ್ ವಿರುದ್ಧ ಪಿಲಿಬಿತ್‌ನಲ್ಲಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಕೊಲೆ,ಮಾರಣಾಂತಿಕ ಹಲ್ಲೆ ಮತ್ತು ಗೂಂಡಾ ಕಾಯ್ದೆಯಡಿ ಸೇರಿದಂತೆ ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 20 ಪ್ರಕರಣಗಳು ದಾಖಲಾಗಿವೆ.
ಮೃತನ ಸೋದರ ಜಮೀರ್ ಸಲ್ಲಿಸಿರುವ ದೂರಿನಂತೆ ಖಾನ್ ಪತ್ನಿ ಶಬಾನಾ ಗುರುವಾರ ಪೊಲೀಸರಿಗೆ ದೂರು ನೀಡಿ ಆತ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ ಎಂದು ಆರೋಪಿಸಿದ್ದಳು.
ಪೋಲಿಸರು ಗುರುವಾರ ತಡರಾತ್ರಿ ಖಾನ್ ಮನೆಗೆ ತೆರಳಿ ಆತನನ್ನು ಠಾಣೆಗೆ ಕರೆದೊಯ್ದಿದ್ದರು. ಪೋಲಿಸರು ಖಾನ್‌ನನ್ನು ಮನೆಯಿಂದ ಹೊರಗೆಳೆದು ಮುಷ್ಟಿಯಿಂದ ಆತನನ್ನು ಗುದ್ದಿದ್ದರು ಮತ್ತು ಕಾಲುಗಳಿಂದ ಒದ್ದಿದ್ದರು ಎಂದು ಆರೋಪಿಸಲಾಗಿದೆ.
ತಾನು ಪೋಲಿಸ್ ಜೀಪ್‌ನ್ನು ಹಿಂಬಾಲಿಸಿದ್ದೆ ಮತ್ತು ಬಾರ್ಖೇರಾ ಠಾಣೆಯಲ್ಲಿ ಸೋದರನನ್ನು ಭೇಟಿಯಾದಾಗ ಆತ ಲಾಕಪ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಮತ್ತು ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು ಎಂದೂ ಜಮೀರ್ ದೂರಿನಲ್ಲಿ ಹೇಳಿದ್ದಾನೆ.
ಖಾನ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಆತನ ಕುಟುಂಬ ಸದಸ್ಯರೂ ಠಾಣೆಯನ್ನು ತಲುಪಿದ್ದರು.