ಉತ್ತರ ಪ್ರದೇಶ | ಸಮಾಜವಾದಿ ಪಕ್ಷದ ಶಾಸಕನ ನಿವಾಸಗಳಿಗೆ ಈಡಿ ದಾಳಿ
ಲಕ್ನೋ : ಜಾರಿ ನಿರ್ದೇಶನಾಲಯ (ಈಡಿ)ವು ಗುರುವಾರ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಳಂಕಿ ಮತ್ತು ಅವರ ಕುಟುಂಬ ಸದಸ್ಯರ ಕಾನ್ಪುರದಲ್ಲಿರುವ ನಿವಾಸಗಳಲ್ಲಿ ಗುರುವಾರ ಶೋಧ ನಡೆಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ.
ಸೋಳಂಕಿ (44) ಸಿಸಮಾವು ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರೀಗ ಮಹಾರಾಜ್ ಗಂಜ್ ಜೈಲಿನಲ್ಲಿದ್ದಾರೆ.
ಸೋಳಂಕಿ, ಅವರ ಜೈಲಿನಲ್ಲಿರುವ ಸಹೋದರ ರಿಝ್ವಾನ್, ಶೌಕತ್ ಅಲಿ, ಹಝಿ ವಾಸಿ, ನೂರಿ ಶೌಕತ್ ಮತ್ತು ಇತರರು ಕಾನ್ಪುರದಲ್ಲಿರುವ ಐದು ನಿವಾಸಗಳು ಮತ್ತು ಮುಂಬೈಯಲ್ಲಿರುವ ಒಂದು ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಯ ಬೆಂಗಾವಲಿನೊಂದಿಗೆ ಮುಂಜಾನೆ ದಾಳಿ ನಡೆಸಿದರು ಎನ್ನಲಾಗಿದೆ.
ಉತ್ತರಪ್ರದೇಶ ಪೊಲೀಸರು ದಾಖಲಿಸಿದ ಹಲವು ಮೊಕದ್ದಮೆಗಳ ಆಧಾರದಲ್ಲಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಮ್ಎಲ್ಎ)ಯಡಿ ಜಾರಿ ನಿರ್ದೇಶನಾಲಯವು ಸೋಳಂಕಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯ್ನನು ದಾಖಲಿಸಿದೆ. ಆ ಬಳಿಕ ಈ ದಾಳಿ ನಡೆದಿದೆ.