ಉತ್ತರಾಖಂಡ ಹಿಂಸಾಚಾರ; ನ್ಯಾಯಾಲಯದ ಆದೇಶವಿಲ್ಲದೇ ಹಲ್ದ್ವಾನಿ ಮದ್ರಸ ನೆಲಸಮ

Update: 2024-02-10 06:12 GMT

Photo: PTI

ಡೆಹ್ರಾಡೂನ್: ಹಲ್ದ್ವಾನಿ ನಗರಪಾಲಿಕೆ ಗುರುವಾರ ಪಟ್ಟಣದ ಬನಭೂಲ್ಪುರ ಪ್ರದೇಶದಲ್ಲಿರುವ ಮಸೀದಿ ಮತ್ತು ಮದ್ರಸವನ್ನು ಯಾವುದೇ ನ್ಯಾಯಾಲಯ ಆದೇಶವಿಲ್ಲದೇ ಧ್ವಂಸಗೊಳಿಸಿರುವ ಅಂಶ ಇದೀಗ ಬೆಳಕಿಗೆ ಬಂದಿದೆ ಎಂದು scroll.in ವರದಿ ಮಾಡಿದೆ.

ಒತ್ತುವರಿ ತೆರವು ಕಾರ್ಯಾಚರಣೆ ಅಂಗವಾಗಿ ಕೈಗೊಂಡ ಈ ಕ್ರಮ, ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಘಟನೆಯ ವಿಡಿಯೊಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗಲಭೆ ಹಿನ್ನೆಲೆಯಲ್ಲಿ ಕರ್ಫ್ಯೂ ಮತ್ತು ಕಂಡಲ್ಲಿ ಗುಂಡಿಕ್ಕುವಂತೆ ಆದೇಶಿಸಲಾಗಿತ್ತು. ಹಿಂಸಾಚಾರದಲ್ಲಿ ಐದು ಮಂದಿ ಮೃತಪಟ್ಟಿದ್ದು, ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂಬ ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಹೇಳಿಕೆಯನ್ನು ಎಎನ್ಐ ವರದಿ ಮಾಡಿದೆ.

2002ರಲ್ಲಿ ಕಂಪನಿಬಾಗ್ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಮರಿಯಮ್ ಮಸೀದಿ ಮತ್ತು ಅಬ್ದುಲ್ ರಝಾಕ್ ಝಕರಿಯಾ ಮದ್ರಸವನ್ನು ಅಬ್ದುಲ್ ಮಲಿಕ್ ಹಾಗೂ ಅವರ ಪತ್ನಿ ಸಫಿಯಾ ಮಲಿಕ್ ನೋಡಿಕೊಳ್ಳುತ್ತಿದ್ದರು.

ಇದನ್ನು ಸಾರ್ವಜನಿಕ ಬಳಕೆಗೆ ಇರಿಸಿದ್ದ ನಝೂಲ್ ಭೂಮಿಯಲ್ಲಿ (ಕೃಷಿಯೇತರ ಉದ್ದೇಶಕ್ಕಾಗಿ ಬಳಸಲಾಗುವ ಸರ್ಕಾರಿ ಭೂಮಿ) ನಿರ್ಮಿಸಲಾಗಿದ್ದು, ಮಲಿಕ್ ಅವರಿಗೆ ಜನವರಿ 30ರಂದು ತೆರವು ನೋಟಿಸ್ ಜಾರಿಗೊಳಿಸಲಾಗಿತ್ತು ಎಂದು ಹಲ್ದ್ವಾನಿ ನಗರಪಾಲಿಕೆ ಆಯುಕ್ತ ಪಂಕಜ್ ಉಪಾಧ್ಯಾಯ ಹೇಳಿದ್ದಾರೆ.

ಫೆಬ್ರವರಿ 6ರಂದು ಉತ್ತರಾಖಂಡ ಹೈಕೋರ್ಟ್ ಮೊರೆ ಹೋಗಿದ್ದ ಸಫಿಯಾ ಮಲಿಕ್, ಮಸೀದಿ ಹಾಗೂ ಮದ್ರಸವನ್ನು 1937ರಲ್ಲಿ ಲೀಸ್ ಗೆ ನೀಡಿದ್ದ ಭೂಮಿಯಲ್ಲಿ ನಿರ್ಮಿಸಲಾಗಿತ್ತಾದರೂ 1994ರಲ್ಲಿ ಆ ಭೂಮಿಯನ್ನು ನನ್ನ ಕುಟುಂಬಕ್ಕೆ ಮಾರಾಟ ಮಾಡಲಾಗಿದೆ. ಲೀಸ್ ನವೀಕರಿಸುವಂತೆ ಕೋರಿ ಸಲ್ಲಿಸಿದ ಅರ್ಜಿ 2007ರಿಂದೀಚೆಗೆ ಜಿಲ್ಲಾಡಳಿತದಲ್ಲಿ ಬಾಕಿ ಇದೆ ಎಂದು ಹೇಳಿದ್ದರು.

ಇದು ದತ್ತಿ ಉದ್ದೇಶಕ್ಕೆ ಸ್ಥಾಪಿಸಲಾಗಿರುವ ಶಾಲೆಯಾಗಿರುವುದರಿಂದ ಈ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆ ನೀಡುವಂತೆಯೂ ಮಲಿಕ್ ಕೋರಿದ್ದರು. ಹೈಕೋರ್ಟ್ ಫೆಬ್ರವರಿ 8ರಂದು ಈ ಬಗ್ಗೆ ವಿಚಾರಣೆ ನಡೆಸಿತ್ತು.

ಈ ಮಧ್ಯೆ ಒತ್ತುವರಿ ತೆರವು ಕಾರ್ಯಾಚರಣೆಗೆ ಕೋರ್ಟ್ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಧಾಮಿ ಹೇಳಿದ್ದನ್ನು ನೈನಿತಾಲ್ ಜಿಲ್ಲಾಧಿಕಾರಿ ದೃಢಪಡಿಸಿದ್ದಾರೆ.

ಆದರೆ ಆದೇಶದ ಪ್ರತಿಯಲ್ಲಿ ಎರಡೂ ಕಡೆಯವರು ಫೆಬ್ರವರಿ 14ರಂದು ವಿಚಾರಣೆಗೆ ಹಾಜರಿರುವಂತೆ ಸೂಚಿಸಿರುವುದು ಕಾಣಿಸುತ್ತಿದ್ದು, ನಗರಸಭೆ ಮುಂದಿನ ವಿಚಾರಣೆಗೆ ಕಾಯದೇ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ಕಾರ್ಯಾಚರಣೆಗೆ ನ್ಯಾಯಾಲಯ ಆದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿರುವ ಹಲ್ದ್ವಾನಿ ನಗರಪಾಲಿಕೆ ಆಯುಕ್ತ ಪಂಕಜ್ ಉಪಾಧ್ಯಾಯ, ಮಲಿಕ್ ತಡೆಯಾಜ್ಞೆ ತಂದಿದ್ದರೆ ಕಾರ್ಯಾಚರಣೆ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನು ಪ್ರಶ್ನಿಸಿದ ಮಲಿಕ್ ಅವರ ವಕೀಲ ಅಹ್ರಾರ್ ಬೇಗ್, ನಗರಸಭೆ ಸೂಕ್ತ ವಿಧಿವಿಧಾನವನ್ನು ಅನುಸರಿಸಿಲ್ಲ. ನಮಗೆ ಪ್ರಕರಣದಲ್ಲಿ ಹಾಜರಾಗುವಂತೆ ನೋಟಿಸ್ ಕೂಡಾ ನೀಡಿರಲಿಲ್ಲ ಎಂದು ಮಲಿಕ್ ಪರ ವಕೀಲ ಅಹ್ರರ್ ಬೇಗ್ ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News