ಬಾಂಬ್ ಬೆದರಿಕೆಯ ನಡುವೆಯೇ ಮುಂಬೈನಲ್ಲಿ ಸುರಕ್ಷಿತವಾಗಿ ಇಳಿದ ವಿಸ್ತಾರ ವಿಮಾನ
ಮುಂಬೈ: ಪ್ಯಾರಿಸ್‌ನಿಂದ 294 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳೊಂದಿಗೆ ಮುಂಬೈಗೆ ಆಗಮಿಸುತ್ತಿದ್ದ ವಿಸ್ತಾರ ವಿಮಾನವು ಬಾಂಬ್ ಬೆದರಿಕೆಯ ನಡುವೆಯೇ ರವಿವಾರ ಬೆಳಿಗ್ಗೆ 10:19ಕ್ಕೆ ಇಲ್ಲಿಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನದ ಆಗಮನಕ್ಕೆ ಮುನ್ನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಸ್ಥಿತಿಯನ್ನು ಘೋಷಿಸಲಾಗಿತ್ತು.
ಪ್ಯಾರಿಸ್‌ನ ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣದಿಂದ ಹೊರಟಿದ್ದ ಯುಕೆ 024 ಯಾನದಲ್ಲಿ ಏರ್ ಸಿಕ್‌ನೆಸ್ ಬ್ಯಾಗ್‌ನಲ್ಲಿ ಬಾಂಬ್ ಬೆದರಿಕೆಯ ಕೈಬರಹದ ಚೀಟಿ ಪತ್ತೆಯಾಗಿತ್ತು. ಶಿಷ್ಟಾಚಾರದಂತೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10:08 ಗಂಟೆಗೆ ಸಂಪೂರ್ಣ ತುರ್ತು ಸ್ಥಿತಿಯನ್ನು ಘೋಷಿಸಲಾಗಿತ್ತು ಮತ್ತು ವಿಮಾನವು ಸುರಕ್ಷಿತವಾಗಿ ಇಳಿದಿದೆ ಎಂದು ಬಲ್ಲ ಮೂಲಗಳು ತಿಳಿಸಿದವು.
ಬಾಂಬ್ ಬೆದರಿಕೆಯನ್ನು ವಿಸ್ತಾರ ವಿಮಾನಯಾನ ಸಂಸ್ಥೆಯು ದೃಢಪಡಿಸಿದೆ.