ಬೆಳ್ಳಿ ಪದಕ ನೀಡುವಂತೆ ಕೋರುವ ವಿನೇಶ್ ಫೋಗಟ್ ಅರ್ಜಿ ವಿಚಾರಣೆ | ಒಲಿಂಪಿಕ್ಸ್ ಮುಕ್ತಾಯಕ್ಕೆ ಮುನ್ನ ತೀರ್ಪು ಪ್ರಕಟ : ನ್ಯಾಯಾಲಯ
ಪ್ಯಾರಿಸ್ : ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ರಿಗೆ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ನೀಡಬೇಕು ಎಂಬ ಮನವಿಯ ಕುರಿತ ನಿರ್ಧಾರವನ್ನು ಪ್ರಸಕ್ತ ಒಲಿಂಪಿಕ್ಸ್ ಮುಕ್ತಾಯಗೊಳ್ಳುವ ಮುನ್ನ ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್) ಶುಕ್ರವಾರ ಘೋಷಿಸಿದೆ.
ಫೋಗಟ್ ರ ತೂಕವು ಮಿತಿಗಿಂತ 100 ಗ್ರಾಮ್ ಹೆಚ್ಚಾದ ಕಾರಣಕ್ಕಾಗಿ ಫೈನಲ್‌ನಲ್ಲಿ ಸ್ಪರ್ಧಿಸುವುದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು.
ಫೋಗಟ್ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಝ್ಮನ್ ಲೊಪೆಝ್‌ರನ್ನು 5-0 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಅವರು ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಅಮೆರಿಕದ ಸಾರಾ ಆ್ಯನ್ ಹಿಲ್ಡಬ್ರಾಂಟ್‌ರನ್ನು ಎದುರಿಸಬೇಕಾಗಿತ್ತು.
ಆದರೆ, ಬುಧವಾರ ಬೆಳಗ್ಗೆ ಅವರ ದೇಹ ತೂಕ ಮಿತಿಗಿಂತ 100 ಗ್ರಾಮ್ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಅನರ್ಹತೆಯ ಬೆನ್ನಿಗೇ ಗುರುವಾರ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದರು.
ಫೋಗಟ್ ರ ಪ್ರಕರಣದ ವಿಚಾರಣೆಯನ್ನು ಆಸ್ಟ್ರೇಲಿಯದ ನ್ಯಾಯಾಧೀಶೆ ಡಾ. ಅನಾಬೆಲ್ ಬೆನೆಟ್ ಎಸಿ ಎಸ್‌ಸಿ ನಡೆಸುವರು ಹಾಗೂ ಅವರು ಈ ಪ್ರಕರಣದ ಏಕೈಕ ನ್ಯಾಯ ನಿರ್ಣಾಯಕರಾಗಿರುತ್ತಾರೆ ಎಂದು ಕ್ರೀಡಾ ಪಂಚಾಯಿತಿ ನ್ಯಾಯಾಲಯ ಮಾಧ್ಯಮ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಅವರು ಶುಕ್ರವಾರ ರಾತ್ರಿ ವಿಚಾರಣೆ ನಡೆಸುತ್ತಾರೆ ಮತ್ತು ತನ್ನ ತೀರ್ಪನ್ನು ಒಲಿಂಪಿಕ್ ಕ್ರೀಡಾಕೂಟ ಮುಕ್ತಾಯಗೊಳ್ಳುವ ಮುನ್ನ ನೀಡುವ ನಿರೀಕ್ಷೆಯಿದೆ ಎಂದು ಪ್ರಕಟನೆ ತಿಳಿಸಿದೆ.
ತನ್ನನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವ ವಿಶ್ವ ಕುಸ್ತಿ ಫೆಡರೇಶನ್‌ನ ನಿರ್ಧಾರವನ್ನು ಕ್ರೀಡಾ ಪಂಚಾಯಿತಿ ನ್ಯಾಯಾಲಯವು ರದ್ದುಗೊಳಿಸಬೇಕು ಮತ್ತು ಫೈನಲ್ ಪಂದ್ಯಕ್ಕೆ ಮುನ್ನ ಇನ್ನೊಮ್ಮೆ ತೂಕ ಮಾಡುವಂತೆ ಅದಕ್ಕೆ ಆದೇಶ ನೀಡಬೇಕು ಎಂಬುದಾಗಿ ವಿನೇಶ್ ಫೋಗಟ್ ತನ್ನ ಆರಂಭಿಕ ಮನವಿಯಲ್ಲಿ ಕೋರಿದ್ದರು ಎಂದು ಮಾಧ್ಯಮ ಪ್ರಕಟನೆ ತಿಳಿಸಿದೆ. ಅದೂ ಅಲ್ಲದೆ, ಫೈನಲ್‌ನಲ್ಲಿ ಸ್ಪರ್ಧಿಸಲು ತಾನು ಅರ್ಹತೆ ಹೊಂದಿದ್ದೇನೆ ಎಂಬುದಾಗಿ ಘೋಷಿಸಬೇಕು ಎಂಬುದಾಗಿಯೂ ಅವರು ಕ್ರೀಡಾ ಪಂಚಾಯಿತಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಬಳಿಕ, ಅವರು ಇನ್ನೊಂದು ಮನವಿ ಸಲ್ಲಿಸಿ, ಮಹಿಳೆಯರ ಕುಸ್ತಿ 50 ಕೆಜಿ ವಿಭಾಗದಲ್ಲಿ ತನಗೆ ಬೆಳ್ಳಿ ಪದಕ ನೀಡುವಂತೆ ನಿರ್ದೇಶನ ನೀಡಬೇಕು ಎಂಬ ಕೋರಿಕೆ ಸಲ್ಲಿಸಿದ್ದಾರೆ.
ವಿನೇಶ್ ಪರವಾಗಿ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯ ವಾದಿಸಲಿದ್ದಾರೆ.