ಐದು ವರ್ಷಗಳ ಬಳಿಕ ವಿಶ್ವಭಾರತಿಯಲ್ಲಿ ಭಾಷಣ ಮಾಡಿದ ಅಮರ್ತ್ಯ ಸೇನ್, ಪ್ರಭಾತ್ ಪಟ್ನಾಯಕ್

Update: 2024-04-12 11:53 GMT

Photo : X/@AmartyaSen_Econ

ಹೊಸದಿಲ್ಲಿ: ವಿಶ್ವಭಾರತಿ ವಿವಿಯ ಕುಲಪತಿಯಾಗಿ ಬಿದ್ಯುತ್ ಚಕ್ರವರ್ತಿಯವರ ವಿವಾದಾತ್ಮಕ ಅವಧಿ ಅಂತ್ಯಗೊಂಡ ತಿಂಗಳುಗಳ ಬಳಿಕ ನೊಬೆಲ್ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಹಳೆಯ ವಿದ್ಯಾರ್ಥಿ ಅಮರ್ತ್ಯ ಸೇನ್ ಅವರ ಭಾಷಣವನ್ನು ಕೇಳಲು ವಿದ್ಯಾರ್ಥಿಗಳು ಮತ್ತು ಬೋಧಕ ವೃಂದಕ್ಕೆ ಸಾಧ್ಯವಾಗಿದೆ. ಚಕ್ರವರ್ತಿ ತನ್ನ ಅಧಿಕಾರಾವಧಿಯಲ್ಲಿ ಸೇನ್ ಅವರನ್ನು ವಿವಿ ಕ್ಯಾಂಪಸ್‌ನಿಂದ ದೂರವಿಡಲು ಸದಾ ಪ್ರಯತ್ನಿಸಿದ್ದರು.

ವಿಶ್ವಭಾರತಿ ಪಶ್ಚಿಮ ಬಂಗಾಳದ ಏಕೈಕ ಕೇಂದ್ರಿಯ ವಿವಿಯಾಗಿದೆ.

ಎ.10ರಂದು ನಡೆದ ಕಾರ್ಯಕ್ರಮಕ್ಕೆ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಭಾಗವು ದಿಲ್ಲಿಯ ಜೆಎನ್‌ಯುದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರಭಾತ ಪಟ್ನಾಯಕ್ ಅವರನ್ನೂ ಉಪನ್ಯಾಸಕರನ್ನಾಗಿ ಆಹ್ವಾನಿಸಿತ್ತು. ಅವರು 2020ರಲ್ಲಿ ನೀಡಬೇಕಿದ್ದ ಉಪನ್ಯಾಸವನ್ನು ಚಕ್ರವರ್ತಿಯವರಿಂದಾಗಿ ರದ್ದುಗೊಳಿಸಲಾಗಿತ್ತು.

ಆನ್‌ಲೈನ್‌ನಲ್ಲಿ ಮಾತನಾಡಿದ ಸೇನ್ ಪ್ರಾಸ್ತಾವಿಕ ಮಾತುಗಳ ಬಳಿಕ ಪಟ್ನಾಯಕ್‌ರನ್ನು ಶ್ರೋತೃಗಳಿಗೆ ಪರಿಚಯಿಸಿದರು. ‘ಶಾಂತಿನಿಕೇತನ ಒಂದು ಗಮನಾರ್ಹ ಪಟ್ಟಣವಾಗಿದೆ. ಇದು ಹೆಚ್ಚಾಗಿ ಕುಲಪತಿಗಳು ಅಥವಾ ಇತರರಿಂದ ಗುರುತಿಸಲ್ಪಡುವುದಿಲ್ಲ. ಆದಾಗ್ಯೂ ನಮ್ಮ ನಿಮ್ಮಂತಹ ಸಾಮಾನ್ಯ ಜನರಿಗೆ ಇಲ್ಲಿರುವುದು ನಿಜಕ್ಕೂ ಉತ್ತಮ ಅವಕಾಶವಾಗಿದೆ. ಇದು ದ್ವಿಭಾಷಾ ಪಟ್ಟಣವಾಗಿದೆ. ನಾವು ಬಂಗಾಳಿ ಅಥವಾ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡಬಹುದು’ ಎಂದು ಸೇನ್ ಹೇಳಿದರು.

ಇದು ಎರಡನೇ ಅಶೋಕ ರುದ್ರ ಸ್ಮಾರಕ ಉಪನ್ಯಾಸವಾಗಿದ್ದು, ಮೂಲತಃ 2020ರಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,ಆದರೆ ಚಕ್ರವರ್ತಿಯವರ ಹಸ್ತಕ್ಷೇಪದಿಂದಾಗಿ ಸ್ಥಗಿತಗೊಂಡಿತ್ತು. ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಸೇನ್ ಅವರ ವಿದ್ಯಾರ್ಥಿಯಾಗಿದ್ದ ಪಟ್ನಾಯಕ್ ‘ನವ-ಉದಾರವಾದಿ ಬಂಡವಾಳಶಾಹಿ ಅಡಿ ಉದ್ಯೋಗ ಮತ್ತು ಬಡತನ ’ಕುರಿತು ಮಾತನಾಡಿದರು.

‘ಚಕ್ರವರ್ತಿಯವರು ಮಾಡಿದ್ದ ಹಾನಿಯನ್ನು ಸರಿಪಡಿಸಲು ವಿವಿಯು ಈಗ ಶ್ರಮಿಸುತ್ತಿದೆ. ಮಾಜಿ ಕುಲಪತಿಗಳು (ಚಕ್ರವರ್ತಿ) ನಮ್ಮೆಲ್ಲ ಚಟುವಟಿಕೆಗಳಿಂದ ಪ್ರೊ.ಸೇನ್ ಅವರನ್ನು ದೂರವಿಡಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದರು. ವಿವಿಯ ಹೊಸ ಆಡಳಿತವು ಸೇನ್ ಮತ್ತು ಎಡಪಂಥೀಯ ಮೌಲ್ಯಗಳಿಗೆ ಹೆಸರಾದ ಪಟ್ನಾಯಕ್ ಅವರೊಂದಿಗೆ ಕಾರ್ಯಕ್ರಮ ನಡೆಸಲು ನಮಗೆ ಅವಕಾಶ ನೀಡಿದ್ದು ವಿಶ್ವಭಾರತಿಯು ಚಕ್ರವರ್ತಿಯವರಿಂದ ಉಂಟಾಗಿದ್ದ ಹಾನಿಯನ್ನು ಸರಿಪಡಿಸುತ್ತದೆ ಎನ್ನುವುದಕ್ಕೆ ಪುರಾವೆಯಾಗಿದೆ ’ಎಂದು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸುದಿಪ್ತಾ ಭಟ್ಟಾಚಾರ್ಯ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಚಕ್ರವರ್ತಿಯವರ ಅಧಿಕಾರಾವಧಿಯಲ್ಲಿ ವಿವಿ ಅಧಿಕಾರಿಗಳು ಸೇನ್ ವಿಶ್ವವಿದ್ಯಾಲಯದ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರನ್ನು ಶಾಂತಿನಿಕೇತನದಲ್ಲಿಯ ಅವರ ಪೂರ್ವಜರ ಮನೆಯಿಂದ ಹೊರದಬ್ಬಲು ಪ್ರಯತ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News