ವಯನಾಡ್ ಭೂಕುಸಿತ | ವಾರಸುದಾರರಿಲ್ಲದ 31 ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ
ವಯನಾಡ್ : ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ ಸಾವನ್ನಪ್ಪಿರುವವರ ಪೈಕಿ ವಾರಸುದಾರರಿಲ್ಲದ 31 ಮೃತದೇಹಗಳು ಮತ್ತು ಅವಶೇಷಗಳಿಂದ ಹೊರತೆಗೆಯಲಾದ 158 ಅಂಗಾಂಗಗಳ ಸಾಮೂಹಿಕ ಅಂತ್ಯಸಂಸ್ಕಾರವನ್ನು ಸೋಮವಾರ ನಡೆಸಲಾಗಿದೆ.
ಪ್ರತಿ ಮೃತದೇಹಕ್ಕೆ ನೀಡಲಾಗಿರುವ ಗುರುತಿನ ಸಂಖ್ಯೆಯನ್ನೇ ಸಮಾಧಿಗಳಿಗೆ ನೀಡಲಾಗಿದ್ದು, ಅಂಗಾಂಗಗಳಿಂದ ಪಡೆಯಲಾದ ಡಿಎನ್ಎ ಸ್ಯಾಂಪಲ್ಗಳಿಗೆ ಅನುಗುಣವಾಗಿ ಅವುಗಳನ್ನು ಮತ್ತು ಮೃತದೇಹಗಳನ್ನು ಹೂಳಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಕೆ.ರಾಜನ್ ತಿಳಿಸಿದರು.
ನಾಪತ್ತೆಯಾಗಿರುವ ವ್ಯಕ್ತಿಗಳಿಗಾಗಿ ಶೋಧ ಕಾರ್ಯಾಚರಣೆಗಳು ಮುಂದುವರಿದಿವೆ. ಚಾಲಿಯಾರ್ ನದಿಯ ಸುತ್ತಮುತ್ತ ಮತ್ತು ಸಮೀಪದ ಪ್ರದೇಶಗಳನ್ನು ಶೋಧ ಕಾರ್ಯಾಚರಣೆಗಳು ಕೇಂದ್ರೀಕರಿಸಿವೆ ಎಂದು ಸುದ್ದಿಗಾರರಿಗೆ ತಿಳಿಸಿದ ರಾಜನ್, ಮೃತದೇಹಗಳು ಮತ್ತು ಅಂಗಾಂಗಗಳನ್ನು ಪ್ರತ್ಯೇಕ ಸಮಾಧಿಗಳಲ್ಲಿ ಹೂಳಲಾಗಿದೆ ಎಂದರು.
ಹ್ಯಾರಿಸನ್ ಮಲಯಾಳಂ ಒಡೆತನದ 64 ಸೆಂಟ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸಾಮೂಹಿಕ ಅಂತ್ಯಸಂಸ್ಕಾರವನ್ನು ಅಲ್ಲಿ ನೆರವೇರಿಸಲಾಗಿದೆ.
ಅವಶೇಷಗಳಡಿ ಸಿಲುಕಿರುವವರನ್ನು ಮತ್ತು ಶವಗಳನ್ನು ಪತ್ತೆ ಹಚ್ಚುವ ಹೆಚ್ಚುವರಿ ಶ್ವಾನಗಳಿಗಾಗಿ ಇತರ ರಾಜ್ಯಗಳನ್ನು ಕೋರಿಕೊಳ್ಳಲಾಗಿದ್ದು,ಇನ್ನೂ 15 ಶ್ವಾನಗಳು ಇಂದು ಆಗಮಿಸಿವೆ ಎಂದು ತಿಳಿಸಿದ ಅವರು, ರವಿವಾರ ಇನ್ನಷ್ಟು ಶವಗಳು ಪತ್ತೆಯಾಗಿರುವುದರಿಂದ ಕಾಣೆಯಾಗಿರುವವರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಶನಿವಾರ ಐದು ಮತ್ತು ರವಿವಾರ ಎಂಟು ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆದಿತ್ತು.
ಪ್ರಾರ್ಥನೆಗಳೊಂದಿಗೆ ಎಲ್ಲ ಧರ್ಮಗಳ ವಿಧಿಗಳಿಗೆ ಅನುಗುಣವಾಗಿ ಅಂತ್ಯಸಂಸ್ಕಾರಗಳನ್ನು ನಡೆಸಲಾಗಿದೆ.
► ಸಂತ್ರಸ್ತರಿಗಾಗಿ ಮನೆ ನಿರ್ಮಾಣ:ಗೋವಾ ಸ್ಪೀಕರ್
ಪಣಜಿ : ತನ್ನ ನೇತೃತ್ವದ ಬಲರಾಮ ದತ್ತಿ ಸಂಸ್ಥೆಯು ವಯನಾಡ್ ಭೂಕುಸಿತದಿಂದ ಸಂತ್ರಸ್ತರಿಗಾಗಿ ಮನೆಗಳನ್ನು ನಿರ್ಮಿಸಲಿದೆ ಎಂದು ಗೋವಾ ಸ್ಪೀಕರ್ ರಮೇಶ ತಾವಡ್ಕರ್ ಅವರು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು.
ತಮ್ಮ ಸರಕಾರವು ಕೇರಳಕ್ಕೆ ಎಲ್ಲ ಅಗತ್ಯ ನೆರವನ್ನು ಒದಗಿಸಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೂ ಹೇಳಿದರು.
ವಯನಾಡ್ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣಕ್ಕಾಗಿ ಬಲರಾಮ ದತ್ತಿ ಸಂಸ್ಥೆಯು 200 ಸ್ವಯಂಸೇವಕರೊಂದಿಗೆ ಶ್ರಮಿಸಲಿದೆ. ಪ್ರಸ್ತುತ ಗೋವಾದಲ್ಲಿ ಅನುಷ್ಠಾನಗೊಳ್ಳುತ್ತಿರುವ ‘ಶ್ರಮ ಧಾಮ್’ ಪರಿಕಲ್ಪನೆಯಡಿ ಈ ಮನೆಗಳನ್ನು ನಿರ್ಮಿಸಲಾಗುವುದು ಎಂದು ತಾವಡ್ಕರ್ ತಿಳಿಸಿದರು.
ಕೇರಳದಲ್ಲಿ ಸಾಮಾಜಿಕ ಸೇವೆ ಉಪಕ್ರಮಕ್ಕೆ ಆರ್ಥಿಕ ದೇಣಿಗೆ ನೀಡುವಂತೆ ಅವರು ಗೋವಾ ವಿಧಾನಸಭಾ ಸದಸ್ಯರನ್ನು ಕೋರಿಕೊಂಡರು.
ಬಲರಾಮ ದತ್ತಿ ಸಂಸ್ಥೆಯು ಅಗತ್ಯವುಳ್ಳ ಕುಟುಂಬಗಳಿಗೆ ನೆರವಾಗಲು ‘ಶ್ರಮ ಧಾಮ್’ ಪರಿಕಲ್ಪನೆಯಡಿ ಕ್ರೌಡ್ ಫಂಡಿಂಗ್ ಮೂಲಕ ಗೋವಾದ ಕಾಣಕೋಣ ತಾಲೂಕಿನಲ್ಲಿ ಮನೆಗಳನ್ನು ನಿರ್ಮಿಸಿದೆ.
‘ಎಲ್ಲ ಅಗತ್ಯ ನೆರವುಗಳನ್ನು ಒದಗಿಸಲು ಗೋವಾ ಸರಕಾರವು ಸಿದ್ಧವಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಕೇರಳದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ಕೇರಳದಿಂದ ಉತ್ತರವನ್ನು ನಾವು ಇನ್ನಷ್ಟೇ ಸ್ವೀಕರಿಸಬೇಕಿದೆ,ಆದರೆ ಅವರಿಗೆ ಎಲ್ಲ ಅಗತ್ಯ ನೆರವು ಒದಗಿಸಲು ನಾವು ಸಿದ್ಧರಿದ್ದೇವೆ ’ ಎಂದು ಸಾವಂತ್ ಸದನಕ್ಕೆ ತಿಳಿಸಿದರು.
►ಪರಿಹಾರ ಶಿಬಿರಗಳಲ್ಲಿ 2,500ಕ್ಕೂ ಅಧಿಕ ಜನರಿಗೆ ಆಶ್ರಯ
ವಯನಾಡ್ : ಭೀಕರ ಭೂಕುಸಿತಗಳಿಂದ ಸಂತ್ರಸ್ತರಾಗಿರುವ 599 ಮಕ್ಕಳು ಮತ್ತು ಆರು ಗರ್ಭಿಣಿಯರು ಸೇರಿದಂತೆ 2,500ಕ್ಕೂ ಅಧಿಕ ಜನರು ವಿವಿಧ ಪರಿಹಾರ ಶಿಬಿರಗಳಲ್ಲಿ ವಾಸವಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಮುಖ್ಯಮಂತ್ರಿಗಳ ಕಚೇರಿಯು ಬಿಡುಗಡೆಗೊಳಿಸಿದ ಇತ್ತೀಚಿನ ಅಂಕಿಅಂಶಗಳಂತೆ ಮೆಪ್ಪಾಡಿ ಮತ್ತು ಜಿಲ್ಲೆಯ ಇತರ ಪಂಚಾಯತ್ ವ್ಯಾಪ್ತಿಗಳಲ್ಲಿ ಒಟ್ಟು 16 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಸಂತ್ರಸ್ತರಿಗೆ ಆಶ್ರಯ ಒದಗಿಸಲಾಗಿದೆ.
943 ಪುರುಷರು, 972 ಮಹಿಳೆಯರು ಮತ್ತು 599 ಮಕ್ಕಳು ಸೇರಿದಂತೆ 723 ಕುಟುಂಬಗಳ ಒಟ್ಟು 2,514 ಜನರು ಈ ಶಿಬಿರಗಳಲ್ಲಿ ವಾಸವಾಗಿದ್ದಾರೆ. ಈ ಪೈಕಿ ಆರು ಗರ್ಭಿಣಿಯರು ಸೇರಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿಯು ತಿಳಿಸಿದೆ.