ವಯನಾಡ್ ಭೂಕುಸಿತ | ಮಲಪ್ಪುರದ ಯುವಕರಿಂದ ಸಂತ್ರಸ್ತರಿಗೆ ಮೊಬೈಲ್ ಪೋನ್
ವಯನಾಡ್ : ವಯನಾಡ್ ಭೂಕುಸಿತ ಸಂತ್ರಸ್ತರು ನೆಲೆಸಿರುವ ಪರಿಹಾರ ಶಿಬಿರಗಳಿಗೆ ಪರಿಹಾರ ಸಮಾಗ್ರಿಗಳು ಹರಿದು ಬರುತ್ತಿವೆ. ಈ ನಡುವೆ ದುರಂತದ ಸಂದರ್ಭ ಮೊಬೈಲ್ ಕಳೆದುಕೊಂಡ ಸಂತ್ರಸ್ತರಿಗೆ ತಮ್ಮ ಬಂಧುಗಳನ್ನು ಸಂಪರ್ಕಿಸಲು ಅನುಕೂಲವಾಗಲು ಮಲಪ್ಪುರದ 10 ಮಂದಿ ಯುವಕರು ಗುಂಪು ಮೊಬೈಲ್ ಪೂರೈಸಲು ನಿರ್ಧರಿಸಿದೆ.
ತಮ್ಮ ಮೊಬೈಲ್ ಕಳೆದುಕೊಂಡ ಭೂಕುಸಿತ ಸಂತ್ರಸ್ತರಿಗೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಒದಗಿಸಲು ಮಲಪ್ಪುರಂನ ತಿರುವಾಲಿಯ ಈ ಯುವಕರ ಗುಂಪು ಮೆಪ್ಪಾಡಿ ಎಚ್‌ಎಸ್‌ಎಸ್ ಶಾಲೆಯಲ್ಲಿ ಸ್ಟಾಲ್ ಒಂದನ್ನು ತೆರೆದಿದೆ.
ನಮ್ಮ ಆತ್ಮೀಯ ಗೆಳೆಯರು ಮಾತ್ರ ಸದಸ್ಯರಾಗಿರುವ ‘ಚಾಂಯಿ’ ಎಂಬ ಹೆಸರಿನ ವ್ಯಾಟ್ಸ್ ಆ್ಯಪ್ ಗುಂಪು ಇದೆ. ನಾವು ಈ ಭೂಕುಸಿತದ ಬಗ್ಗೆ ಚರ್ಚಿಸಿದೆವು ಹಾಗೂ ನಮ್ಮ ಆರ್ಥಿಕ ಅನುಕೂಲತೆಗೆ ಅನುಗುಣವಾಗಿ ಸಂತ್ರಸ್ತರಿಗೆ ನೆರವು ನೀಡಲು ನಿರ್ಧರಿಸಿದೆವು. ಅಲ್ಲದೆ, ಅವರಿಗೆ ಉಪಯುಕ್ತವಾದುದನ್ನು ನೀಡಲು ನಿರ್ಣಯಿಸಿದೆವು. ಭೂಕುಸಿತ ಸಂಭವಿಸಿದ ಸಂದರ್ಭ ಮನೆಯಿಂದ ಹೊರಗೆ ಓಡಿಕೊಂಡ ಬಂದ ಹಲವರು ತಮ್ಮ ಮೊಬೈಲ್ ಕಳೆದುಕೊಂಡಿರುವುದನ್ನು ನಾವು ತಿಳಿದುಕೊಂಡೆವು. ಇದರಿಂದ ಈಗ ಹಲವು ಸಂತ್ರಸ್ತರಿಗೆ ತಮ್ಮ ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ನಾವು ಗೆಳೆಯರಿಂದ ಹಣ ಸಂಗ್ರಹಿಸಿದೆವು. ಅವರಿಗೆ ಮೊಬೈಲ್, ಸಿಮ್ ನೀಡಲು ನಿರ್ಧರಿಸಿದೆವು ಎಂದು ಗುಂಪಿನ ಸದಸ್ಯ ಸಜೀಶ್ ತಿಳಿಸಿದ್ದಾರೆ.