ವಯನಾಡ್ ಭೂಕುಸಿತ | 7ನೇ ದಿನಕ್ಕೆ ಕಾಲಿರಿಸಿದ ಶೋಧ ಕಾರ್ಯಾಚರಣೆ ; ಮೃತರ ಸಂಖ್ಯೆ 385ಕ್ಕೆ ಏರಿಕೆ

Update: 2024-08-05 15:50 GMT

PC : PTI 

ಹೊಸದಿಲ್ಲಿ : ಭೂಕುಸಿತ ಸಂಭವಿಸಿದ ವಯನಾಡ್‌ನಲ್ಲಿ 7ನೇ ದಿನವಾದ ಸೋಮವಾರ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮುಂಡಕ್ಕೈ ಹಾಗೂ ಚೂರಲ್‌ಮಲದಲ್ಲಿ ನಾಪತ್ತೆಯಾಗಿರುವರನ್ನು ಪತ್ತೆ ಹಚ್ಚಲು ಸ್ವಯಂಸೇವಕರು ಸೇರಿದಂತೆ 1,500ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 385ಕ್ಕೆ ಏರಿಕೆಯಾಗಿದೆ. 180ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಬಾಧಿತ ಪ್ರದೇಶಗಳನ್ನು 6 ವಲಯಗಳಾಗಿ ವರ್ಗೀಕರಿಸಲಾಗಿದೆ ಹಾಗೂ ಈ ಪ್ರದೇಶದಲ್ಲಿ ನಡೆಸುತ್ತಿರುವ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಕೆಲವು ಮನೆಗಳಲ್ಲಿ ಕಳ್ಳತನ ನಡೆದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆಯಲ್ಲಿ ಸಂಚರಿಸಲು ರಕ್ಷಣಾ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೃತದೇಹಗಳಿಗಾಗಿ ಚಾಲಿಯಾರ್ ನದಿಯಲ್ಲಿ ಕೂಡ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಅವಶೇಷಗಳಡಿ ಸಿಲುಕಿದ ಮೃತದೇಹಗಳನ್ನು ಪತ್ತೆ ಹಚ್ಚಲು ಡ್ರೋನ್ ಹಾಗೂ ಕಾಡವರ್ ಶ್ವಾನಗಳನ್ನು ಬಳಸಲಾಗುತ್ತಿದೆ. ಗುರುತು ಪತ್ತೆ ಹಚ್ಚಲಾರದ ಮೃತದೇಹಗಳನ್ನು ಪುತ್ತುಮಲೆಯಲ್ಲಿ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಗಿದೆ. 25ಕ್ಕೂ ಅಧಿಕ ಗುರುತು ಪತ್ತೆಹಚ್ಚಲಾಗದ ಮೃತದೇಹಗಳು ಹಾಗೂ ಮೃತದೇಹದ ಭಾಗಗಳನ್ನು ರವಿವಾರ ದಫನ ಮಾಡಲಾಗಿತ್ತು.

ನಾಪತ್ತೆಯಾದವರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಇದಕ್ಕೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೆ. ರಾಜನ್ ತಿಳಿಸಿದ್ದಾರೆ. ಸಂತ್ರಸ್ತರಿಗೆ ಪ್ರಮಾಣಪತ್ರಗಳನ್ನು ಮರು ನೀಡಲು ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಈ ನಡುವೆ ವಯನಾಡ್‌ನಲ್ಲಿ ಪರಿಹಾರ ಕೇಂದ್ರಗಳು ಕಾರ್ಯಾಚರಿಸುತ್ತಿರುವ ಸಂಸ್ಥೆಗಳನ್ನು ಹೊರತುಪಡಿಸಿ ಇತರ ಶಾಲೆಗಳು ಮರು ಆರಂಭಗೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News