ವಯನಾಡ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 344ಕ್ಕೆ ಏರಿಕೆ; ಐದನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ

Update: 2024-08-03 06:28 GMT

‌Photo: PTI

ವಯನಾಡ್: ಕೇರಳ ಸರಕಾರದ ಇತ್ತೀಚಿನ ಮಾಹಿತಿಯ ಪ್ರಕಾರ, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿದ್ದು, ಇಲ್ಲಿಯವರೆಗೆ ವಯನಾಡ್ ಭೂ ಕುಸಿತದಲ್ಲಿ ಮೃತಪಟ್ಟಿರುವವರ ಸಂಖ್ಯೆ 344ಕ್ಕೆ ಏರಿಕೆಯಾಗಿದೆ. ಕುಸಿದಿರುವ ಮನೆಗಳು ಹಾಗೂ ಅವಶೇಷಗಳಡಿ ಇನ್ನೂ ಜೀವಂತವಾಗುಳಿದಿರುವವರನ್ನು ಪತ್ತೆ ಹಚ್ಚಲು ಡೀಪ್ ಸರ್ಚ್ ರೇಡಾರ್ ಅನ್ನು ಬಳಸಲಾಗುತ್ತಿದೆ ಎಂದು ವರದಿಯಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಡೀಪ್ ಸರ್ಚ್ ರೇಡಾರ್ ಗಳನ್ನು ರವಾನಿಸುವಂತೆ ಕೇಂದ್ರ ಸರಕಾರಕ್ಕೆ ಕೇರಳ ಸರಕಾರ ಮನವಿ ಮಾಡಿದೆ. ಶನಿವಾರ ಉತ್ತರ ಕಮಾಂಡ್ ನಿಂದ ಒಂದು ಕ್ಸೇವರ್ ರೇಡಾರ್ ಹಾಗೂ ದಿಲ್ಲಿಯ ತಿರಂಗ ಮೌಂಟೇನ್ ರೆಸ್ಕ್ಯೂ ಆರ್ಗನೈಸೇಷನ್ ನಿಂದ ನಾಲ್ಕು ರೀಕೊ ರಡಾರ್ ಗಳನ್ನು ಭಾರತೀಯ ವಾಯು ಪಡೆ ಏರ್ ಲಿಫ್ಟ್ ಮೂಲಕ ವಯನಾಡ್ ಗೆ ರವಾನಿಸಿವೆ.

ಇಲ್ಲಿಯವರೆಗೆ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆಯಲ್ಲಿ ತಜ್ಞತೆ ಹೊಂದಿರುವ ಖಾಸಗಿ ಕಂಪನಿಗಳು, ಸ್ವಯಂ ಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಜೊತೆಗೂಡಿದ್ದಾರೆ. ಭಾರತೀಯ ಸೇನೆ, ಕೇರಳ ಪೊಲೀಸರು ಹಾಗೂ ತುರ್ತು ಸೇವಾ ಘಟಕಗಳು ಈ ಕಾರ್ಯಾಚರಣೆಯ ನೇತೃತ್ವ ವಹಿಸಿವೆ. ಇಂದಿಗೆ ರಕ್ಷಣಾ ಕಾರ್ಯಾಚರಣೆಯು ಐದನೆಯ ದಿನಕ್ಕೆ ಕಾಲಿಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News