ವಯನಾಡ್ ಭೂಕುಸಿತ: ಅಂತಿಮ ಹಂತ ತಲುಪಿದ ಶೋಧ ಕಾರ್ಯಾಚರಣೆ; ದೂರದ ಪ್ರದೇಶಗಳ ಕಡೆ ಗಮನ

Update: 2024-08-06 07:46 GMT

Photo: PTI

ವಯನಾಡ್: 300ಕ್ಕೂ ಹೆಚ್ಚು ಜೀವಹಾನಿಗೆ ಕಾರಣವಾದ ವಯನಾಡ್ ಭೂಕುಸಿತ ದುರಂತದ ಸಂಬಂಧ ನಡೆಯುತ್ತಿರುವ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಅಂತಿಮ ಘಟ್ಟ ತಲುಪಿದೆ ಎಂದು ಮಂಗಳವಾರ ಕೇರಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಆರ್.ಅಜಿತ್ ಕುಮಾರ್ ತಿಳಿಸಿದರು.

ತಲುಪಲು ಸಾಧ್ಯವಿರುವ ಎಲ್ಲ ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಇನ್ನು ತಲುಪಲು ಅಸಾಧ್ಯವಾದ ಸ್ಥಳಗಳ ಕುರಿತು ಗಮನ ಕೇಂದ್ರೀಕರಿಸಲಾಗುವುದು ಎಂದು ಅವರು ಹೇಳಿದರು.

“ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಬಹುತೇಕ ಭೂಪ್ರದೇಶಗಳ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದ್ದು, 50-100 ಮೀಟರ್ ಮಣ್ಣು ತುಂಬಿಕೊಂಡಿರುವ ಕೆಸರುಮಯ ಪ್ರದೇಶಗಳ ಶೋಧ ಕಾರ್ಯಾಚರಣೆ ಮಾತ್ರ ಬಾಕಿ ಉಳಿದಿದೆ. ತಲುಪಲು ಸಾಧ್ಯವಿಲ್ಲದ ಪ್ರದೇಶಗಳ ಬಗ್ಗೆ ಚೆನ್ನಾಗಿ ಅರಿತಿರುವ ಅರಣ್ಯ ಸಿಬ್ಬಂದಿಗಳ ಮಾರ್ಗದರ್ಶನದೊಂದಿಗೆ, ಅಂತಹ ಸ್ಥಳಗಳನ್ನು ತಲುಪುವುದು ಈ ಕಾರ್ಯಾಚರಣೆಯ ಮುಂದಿನ ಗುರಿ” ಎಂದೂ ಅವರು ಹೇಳಿದ್ದಾರೆ.

ಇಂದಿನ ಗಮನ ನದಿಯ ಬದಿ ಹಾಗೂ ಕಣಿವೆ ಪ್ರದೇಶಗಳಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜುಲೈ 30ರಂದು ವಯನಾಡ್ ನ ಚೂರಲ್ ಮಲ ಹಾಗೂ ಮುಂಡಕ್ಕೈನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಭಾರಿ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ. ಇಂದಿಗೆ ಶೋಧ ಕಾರ್ಯಾಚರಣೆಯು ಎಂಟನೆ ದಿನಕ್ಕೆ ಕಾಲಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News