" ಜನರು ಪ್ರಧಾನಿಯನ್ನು ದೃಢವಾಗಿ ನಂಬುತ್ತಾರೆ ಎಂಬ ವಿಶ್ವಾಸ ನಮಗಿದೆ” : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Update: 2024-02-02 15:44 GMT

ನಿರ್ಮಲಾ ಸೀತಾರಾಮನ್ | Photo: PTI 

ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿ ಕುರಿತ ಜನರ ವಿಶ್ವಾಸ ಅಚಲವಾಗಿರುವುದರಿಂದ ನಾವು ವಿಶ್ವಾಸದಿಂದಿದ್ದೇವೆ. ಯಾಕೆಂದರೆ ಕಳೆದ 10 ವರ್ಷಗಳಲ್ಲಿ ನಾವು ಜನಪರ ಕಾರ್ಯಕ್ರಮಗಳನ್ನು ಮಾತ್ರ ಪ್ರಕಟಿಸಿಲ್ಲ, ಬದಲಿಗೆ, ಈ ನೀತಿಗಳಿಂದ ತುತ್ತತುದಿಯಲ್ಲಿರುವ ಪ್ರತಿಯೊಬ್ಬ ಅರ್ಹರೂ ಅದರ ಲಾಭ ಪಡೆಯುವಂತೆ ಕಠಿಣವಾಗಿ ಶ್ರಮಿಸಿದ್ದೇವೆ. ನಾವೇನು ಭರವಸೆ ನೀಡಿದ್ದೇವೊ ಅವನ್ನೇ ನಾವು ಮಾಡಿದ್ದೇವೆ” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ ನಂತರ NDTV ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಮೋದಿ ಸರ್ಕಾರವು ಸಬಲೀಕರಣದ ಕಡೆ ಗಮನ ಹರಿಸಿತ್ತೇ ಹೊರತು ಜನಪ್ರಿಯ ಕ್ರಮಗಳ ಮೇಲಲ್ಲ. ಅದು ಜನರು ತಮ್ಮ ಸ್ವಂತ ನಿರ್ಧಾರ ಕೈಗೊಳ್ಳದಂತೆ ಅವರ ಕೈಕಟ್ಟಿ ಹಾಕುವುದರಲ್ಲಿ ನಂಬಿಕೆ ಇಟ್ಟಿರಲಿಲ್ಲ ಎಂದು ಹೇಳಿದ್ದಾರೆ.

ತೆರಿಗೆ ಪಾವತಿ ಪರಿಷ್ಕರಣೆ ಸೇರಿದಂತೆ ಯಾವುದೇ ಜನಪ್ರಿಯ ಘೋಷಣೆಗಳನ್ನು ಹೊಂದಿರದಿದ್ದ ಮಧ್ಯಂತರ ಬಜೆಟ್ ಮಂಡಿಸಿದ ನಂತರ ಮಾತನಾಡಿದ ಅವರು, “ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ಜನರು ಪ್ರಧಾನಿಯ ಮೇಲೆ ಇಟ್ಟಿರುವ ನಂಬಿಕೆಗೆ ದೊರೆತಿರುವ ಸಮ್ಮತಿ ಅದಾಗಿದೆ” ಎಂದು ಹೇಳಿದ್ದಾರೆ.

ಬಾಯಿ ಮಾತಿನ ಪ್ರಚಾರವಿದ್ದಾಗ, ಸರ್ಕಾರವು ಜನರಿಗೆ ತಲುಪುವಂತೆ ಯೋಜನೆಗಳನ್ನು ರೂಪಿಸುತ್ತಿದೆ ಎಂಬ ವಿಶ್ವಾಸ ಜನರಲ್ಲಿರುತ್ತದೆ. ಎಲ್ಲ ಯೋಜನೆಗಳೂ ಜನರಿಗೆ ತಲುಪಿದಾಗ, ಅಲ್ಲಿ ವಿಶ್ವಾಸ ಮೂಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.

ಜನರು ಮೊದಲು ಮತ್ತು ಎರಡನೆಯ ಬಾರಿ ನಮಗೆ ಆಶೀರ್ವದಿಸಿದರು. ಈ ಬಾರಿಯೂ ಅದೇ ಆಗಲಿದೆ ಎಂದು 2014 ಹಾಗೂ 2019ರಲ್ಲಿನ ಬಿಜೆಪಿಯ ಗೆಲುವನ್ನು ಉಲ್ಲೇಖಿಸಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ 2024ರ ಮಧ್ಯಂತರ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್, ಮೋದಿ ಸರ್ಕಾರವು 2047ರ ವೇಳೆಗೆ ದೇಶವನ್ನು ವಿಕಸಿತ ಭಾರತವನ್ನಾಗಿಸುವತ್ತ ಕೆಲಸ ಮಾಡುತ್ತಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News