ಶಿಶುವನ್ನು ನಾವು ಕೊಲ್ಲಲಾರೆವು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಶಿಶುವೊಂದನ್ನು ನಾವು ಕೊಲ್ಲಲಾರೆವು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಇಬ್ಬರು ಮಕ್ಕಳ ತಾಯಿಯಾಗಿರುವ ವಿವಾಹಿತ ಮಹಿಳೆಯೊಬ್ಬರ 26 ವಾರಗಳ ಗರ್ಭವನ್ನು ತೆಗೆಯಲು ಅನುಮತಿ ನೀಡುವ ತೀರ್ಪನ್ನು ಹಿಂದಕ್ಕೆ ಪಡೆಯುವಂತೆ ಕೋರಿ ಕೇಂದ್ರ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಹೇಳಿಕೆ ನೀಡಿದೆ.
ಇನ್ನೂ ಹುಟ್ಟದಿರುವ ಮಗುವಿನ ಹಕ್ಕುಗಳು ಮತ್ತು ಅದರ ತಾಯಿಯ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದ ನಡುವೆ ನಾವು ಸಮತೋಲನ ತರಬೇಕಾಗಿದೆ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಸದಸ್ಯರಾಗಿರುವ ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಇನ್ನು ಕೆಲವು ವಾರಗಳ ಕಾಲ ಗರ್ಭವನ್ನು ಉಳಿಸಿಕೊಳ್ಳಬಹುದೇ ಎಂಬ ಬಗ್ಗೆ ಮಹಿಳೆಯೊಂದಿಗೆ ಮಾತನಾಡುವಂತೆ ನ್ಯಾಯಪೀಠವು ಕೇಂದ್ರ ಸರಕಾರ ಮತ್ತು ಮಹಿಳೆಯ ವಕೀಲರಿಗೆ ಸೂಚಿಸಿತು.
‘‘ಭ್ರೂಣದ ಹೃದಯವನ್ನು ನಿಲ್ಲಿಸುವಂತೆ ಏಮ್ಸ್‌ನ ವೈದ್ಯರಿಗೆ ನಾವು ಹೇಳಬೇಕೆಂದು ನೀವು ಬಯಸುತ್ತೀರಾ?’’ ಎಂದು ನ್ಯಾಯಾಲಯ ಕೇಳಿತು.
ಅದಕ್ಕೆ ಮಹಿಳೆಯ ವಕೀಲರು ಇಲ್ಲ ಎಂದು ಉತ್ತರಿಸಿದಾಗ, ‘‘ಮಹಿಳೆಯು 26 ವಾರ ಕಾದಿದ್ದಾರೆ. ಇನ್ನೂ ಕೆಲವು ವಾರ ಬ್ರೂಣವನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಾರದೇ? ಯಾಕೆಂದರೆ ಆರೋಗ್ಯವಂತೆ ಮಗುವೊಂದರ ಜನನವಾಗುವ ಸಾಧ್ಯತೆಯಿದೆ’’ ಎಂದು ನ್ಯಾಯಾಲಯ ಹೇಳಿತು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಶುಕ್ರವಾರ 10:30ಕ್ಕೆ ನಿಗದಿಪಡಿಸಿತು.
ಮಹಿಳೆಯ 26 ವಾರಗಳ ಗರ್ಭವನ್ನು ಕೊನೆಗೊಳಿಸಲು ಸುಪ್ರೀಂ ಕೋರ್ಟ್ ಅಕ್ಟೋಬರ್ 9ರಂದು ಅನುಮತಿ ನೀಡಿತ್ತು. ಈ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಕೇಂದ್ರ ಸರಕಾರವು ಮೇಲ್ಮನವಿ ಸಲ್ಲಿಸಿತ್ತು. ಬುಧವಾರ ಅದರ ವಿಚಾರಣೆಯನ್ನು ಕೈಗೆತ್ತಿಕೊಂಡ ಇಬ್ಬರು ನ್ಯಾಯಾಧೀಶರ ಪೀಠವು ಭಿನ್ನ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ, ಗುರುವಾರ ಈ ಪ್ರಕರಣವು ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠಕ್ಕೆ ಬಂದಿದೆ.