15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದ್ದೇವೆ; ಸುಪ್ರೀಂಕೋರ್ಟ್‌ಗೆ ತಿಳಿಸಿದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ
ಹೊಸದಿಲ್ಲಿ: ಆಗಸ್ಟ್ 29ರಿಂದ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಿದ್ದೇವೆ ಎಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಗುರುವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಕರ್ನಾಟಕ ಬಿಳಿಗುಂಡುಲಿನಲ್ಲಿ ಆಗಸ್ಟ್ 12ರಿಂದ 26ರ ವರೆಗೆ ಒಟ್ಟು 1,49,898 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ ಎಂದು ಸಿಡಬ್ಲ್ಯುಎಂಎ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.
ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆಗಸ್ಟ್ 28ರಂದು ಸಭೆ ನಡೆಸಿತ್ತು ಹಾಗೂ ಮರು ದಿನ ಆಗಸ್ಟ್ 29ರಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸಭೆ ನಡೆಸಿತ್ತು ಎಂದು ವರದಿ ಹೇಳಿದೆ.
ಕೃಷ್ಣರಾಜ ಸಾಗರ ಹಾಗೂ ಕಬಿನಿ ಜಲಾಶಯದಿಂದ ಆಗಸ್ಟ್ 12ರಿಂದ 15 ದಿನಗಳು ಬಿಳಿಗುಂಡುಲುವಿನಲ್ಲಿ 10,000 ಕ್ಯೂಸೆಕ್ ದರದಲ್ಲಿ ಕಾವೇರಿ ನದಿ ನೀರು ಹರಿಸುವ ಖಾತರಿ ನೀಡುವಂತೆ ಸಿಡಬ್ಲ್ಯುಎಂಎ ಕರ್ನಾಟಕ ಸರಕಾರಕ್ಕೆ ನಿರ್ದೇಶಿಸಿತ್ತು. ಆಗಸ್ಟ್ 11ರಂದು ನೀಡಲಾದ ನಿರ್ದೇಶನವನ್ನು ಅನುಸರಿಸಲು ಆಗಸ್ಟ್ 31ರಂದು ಸಭೆ ನಡೆಸಲಾಯಿತು ಎಂದು ಅದು ತಿಳಿಸಿದೆ.
ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿರುವ ಕುರಿತು ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಆಗಸ್ಟ್ 25ರಂದು ಸಿಡಬ್ಲ್ಯುಎಂಎಗೆ ನಿರ್ದೇಶಿತ್ತು.
ಮುಂದಿನ 15 ದಿನಗಳ ಕಾಲ ಕಾವೇರಿ ನೀರು ಹರಿಸುವ ಕುರಿತು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನಿರಂತರ ಸಭೆ ನಡೆಸಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತಿಳಿಸಿದ ಬಳಿಕ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿತ್ತು.