ವಿವಾದಿತ ವಿಷಯಗಳನ್ನು ಎತ್ತಿದರೆ ಬಿಜೆಪಿ ಸರ್ಕಾರವನ್ನು ಬೆಂಬಲಿಸಲ್ಲ: ಎನ್‍ಸಿಪಿ

Update: 2024-11-13 12:04 GMT

Photo: PTI 

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದ್ದಂತೇ ಆಡಳಿತಾರೂಢ ಮಹಾಯುತಿ ಕೂಟದಲ್ಲಿ ಒಡಕು ಕಾಣಿಸಿಕೊಂಡಿದೆ. ಬಿಜೆಪಿ ವಿಭಜಿತ ಮತ್ತು ವಿವಾದಿತ ವಿಷಯಗಳನ್ನು ಎತ್ತಿದರೆ ತಮ್ಮ ಪಕ್ಷ ಮೈತ್ರಿಕೂಟ ಸರ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ನಾಯಕ ನವಾಬ್ ಮಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸಿರುವ ಮತಾಂತರ ವಿರೋಧಿ ಕಾನೂನಿನ ವಿಚಾರ ಜನರನ್ನು ತಪ್ಪು ದಾರಿಗೆ ಎಳೆಯುಂವಥದ್ದು ಎಂದು ಮನ್‍ಖುರ್ದ್ ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಅವರು ಸ್ಪಷ್ಟಪಡಿಸಿದ್ದಾರೆ. ಅತಂತ್ರ ವಿಧಾನಸಭೆ ನಿರ್ಮಾಣವಾದಲ್ಲಿ ವಿರೋಧಿ ಎಂವಿಎ ಕೂಟವನ್ನು ಸೇರುವ ಸಾಧ್ಯತೆಯನ್ನೂ ಅವರು ಅಲ್ಲಗಳೆಯಲಿಲ್ಲ.

ಎನ್‍ಸಿಪಿ ಮಹಾಯುತಿ ಕೂಟದ ಮಿತ್ರಪಕ್ಷವಾಗಿದ್ದರೂ, ಬಿಜೆಪಿ ಮನುಖುರ್ದು ಶಿವಾಜಿ ನಗರ ಕ್ಷೇತ್ರದಲ್ಲಿ ಶಿವಸೇನೆ ಶಿಂಧೆ ಬಣದ ಅಭ್ಯರ್ಥಿ ಸುರೇಶ್ ಪಾಟೀಲ್ ಅವರನ್ನು ಬೆಂಬಲಿಸಿದೆ. ಮಹಾಯುತಿಗೆ ಒಂದು ವೇಳೆ ಬಹುಮತ ದೊರಕಿದಲ್ಲಿ, ಬಿಜೆಪಿ ನೀತಿಗಳ ಆಧಾರದಲ್ಲಿ ಸರ್ಕಾರ ರಚನೆಯಾಗುವುದಿಲ್ಲ; ಬದಲಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಆಧಾರದಲ್ಲೇ ಸರ್ಕಾರ ರಚನೆಯಾಗಲಿದೆ ಎಂದು ʼಟೈಮ್ಸ್ ಆಫ್ ಇಂಡಿಯಾʼಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು. ಕೆಲ ವಿವಾದಗಳನ್ನು ಬಿಜೆಪಿ ಕೈಬಿಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ "ಬಟೇಂಗೇ ತೋ ಕಟೇಂಗೆ' ಕರೆಯ ಬಗ್ಗೆ ಕೇಳಿದ ಪ್ರಶ್ನೆಗೆ, "ಈ ಘೋಷಣೆಯನ್ನು ನಾನು ಖಂಡಿಸುತ್ತೇನೆ. ರಾಜಕೀಯದಲ್ಲಿ ಧರ್ಮ ಅಲ್ಪಾಯುಷಿ" ಎಂದು ಉತ್ತರಿಸಿದರು. ಮತಾಂತರ ವಿರೋಧಿ ಕಾನೂನು ಜಾರಿಗೊಳಿಸುವ ಬಿಜೆಪಿ ಭರವಸೆಗಳ ಬಗ್ಗೆ ಉಲ್ಲೇಖಿಸಿ, "ಧರ್ಮದ ಹಕ್ಕು ಸಂವಿಧಾನ ನೀಡಿದ ಮೂಲಭೂತ ಹಕ್ಕು ಮತ್ತು ಮತಾಂತರವನ್ನು ತಡೆಯಲಾಗದು. ಜನರನ್ನು ತಪ್ಪುದಾರಿಗೆ ಎಳೆಯುವ ಸಲುವಾಗಿ ಬಿಜೆಪಿ ಶಬ್ದಗಳ ಆಟವಾಡುತ್ತಿದೆ" ಎಂದು ವ್ಯಂಗ್ಯವಾಡಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News