ಪಂಜಾಬ್‌, ಈಶಾನ್ಯ ರಾಜ್ಯಗಳೂ ಅಂತಹುದೇ ಪರಿಸ್ಥಿತಿ ಎದುರಿಸಿವೆ: ಜಮ್ಮು ಕಾಶ್ಮೀರ ವಿಭಜನೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

Update: 2023-08-30 09:03 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರದಂತಹುದೇ ಪರಿಸ್ಥಿತಿಗಳನ್ನು ಪಂಜಾಬ್‌ ಮತ್ತು ಈಶಾನ್ಯ ರಾಜ್ಯಗಳೂ ಎದುರಿಸಿವೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಅದೇ ಸಮಯ ಆಗಸ್ಟ್‌ 2019ರಂದು ಜಮ್ಮು ಕಾಶ್ಮೀರದ ವಿಭಜನೆಯ ಅಗತ್ಯತೆಯನ್ನು ಪ್ರಶ್ನಿಸಿದೆ.

ಒಂದು ರಾಜ್ಯವನ್ನು ವಿಭಜಿಸಿ ಅದರ ಅಧಿಕಾರವು ಕೇಂದ್ರ ಸರ್ಕಾರದ ಬಳಿ ಬಂದ ನಂತರ ಆ ಅಧಿಕಾರವು “ದುರುಪಯೋಗವಾಗುವುದಿಲ್ಲ” ಎಂಬುದನ್ನು ಹೇಗೆ ಖಾತ್ರಿಪಡಿಸಬಹುದು ಎಂದೂ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಪ್ರಶ್ನಿಸಿದರು.

ಸಂವಿಧಾನದ 370 ವಿಧಿಯನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೈಬಿಟ್ಟ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದು ಹಲವು ಅರ್ಜಿಗಳ ವಿಚಾರಣೆಯ 12ನೇ ದಿನದಂದು ಸುಪ್ರೀಂ ಕೋರ್ಟ್‌ ಮೇಲಿನ ಪ್ರಶ್ನೆಯನ್ನು ಕೇಳಿದೆ.

ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿಕ್ರಿಯಿಸಿ ಎಲ್ಲಾ ನೆರೆಯ ರಾಷ್ಟ್ರಗಳ ಸ್ನೇಹಪರವಾಗಿಲ್ಲ ಹಾಗೂ ಜಮ್ಮು ಕಾಶ್ಮೀರದ ಇತಿಹಾಸ ಮತ್ತು ಅದರ ಪ್ರಸಕ್ತ ಸ್ಥಿತಿ “ಕಲ್ಲು ತೂರಾಟ, ಮುಷ್ಕರಗಳು, ಸಾವುಗಳು, ಉಗ್ರ ದಾಳಿಗಳು” ಪರಿಗಣಿಸಿದಾಗ ಅದನ್ನು ಮುಖ್ಯವಾಹಿನಿಗೆ ತರುವ ಅಗತ್ಯವಿದೆ,” ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ, “ಒಮ್ಮೆ ಒಂದು ರಾಜ್ಯ ವಿಭಜನೆಯಾಗಿ ಅಧಿಕಾರ ಕೇಂದ್ರದ ಕೈಗೆ ಹೋದಾಗ ದುರುಪಯೋಗವಾಗದು ಎಂದು ಹೇಗೆ ಖಾತ್ರಿಪಡಿಸುವುದು,” ಎಂದು ಕೇಳಿದರು.

ಪಂಚ ಸದಸ್ಯರ ಸಂವಿಧಾನಿಕ ಪೀಠದ ಭಾಗವಾಗಿರುವ ಜಸ್ಟಿಸ್‌ ಎಸ್‌ ಕೆ ಕೌಲ್‌ ಪ್ರತಿಕ್ರಿಯಿಸಿ “ಇದು ಇಂತಹ ಒಂದೇ ಪ್ರಕರಣವಲ್ಲ, ಪಂಜಾಬ್‌ನ ಉತ್ತರ ಗಡಿ ಭಾಗ ಕೂಡ ಕಷ್ಟಕರ ಪರಿಸ್ಥಿತಿ ಎದುರಿಸಿತ್ತು. ಕೆಲ ಈಶಾನ್ಯ ರಾಜ್ಯಗಳು ಕೂಡ. ಈ ಪ್ರತಿಯೊಂದು ರಾಜ್ಯಗಳು ಈ ಸಮಸ್ಯೆ ಮುಂದೆ ಎದುರಿಸಿದರೆ…” ಎಂದು ಕೇಳಿದರು.

“ಅಸ್ತಿತ್ವದಲ್ಲಿರುವ ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಅಧಿಕಾರ ಸಂಸತ್ತಿಗಿದೆಯೇ?” ಎಂಬ ಪ್ರಶ್ನೆಯನ್ನೂ ಮುಖ್ಯ ನ್ಯಾಯಮೂರ್ತಿಗಳು ಕೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News