"ಈ ಹಿಂದೆ ವ್ಯವಸ್ಥೆ 100% ಸರಿ ಇತ್ತೇ?": ಚುನಾವಣಾ ಬಾಂಡ್ ವಿವಾದದ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ
ಹೊಸದಿಲ್ಲಿ: ಭಾರತೀಯ ಸ್ಟೇಟ್ ಬ್ಯಾಂಕ್ ಒದಗಿಸಿರುವ ದತ್ತಾಂಶವನ್ನು ಚುನಾವಣಾ ಆಯೋಗವು ಬಿಡುಗಡೆಗೊಳಿಸಿದ್ದು, ಚುನಾವಣಾ ಬಾಂಡ್ ಅನ್ನು ಖರೀದಿಸಿರುವ 30 ಕಂಪನಿಗಳ ಪೈಕಿ ಕನಿಷ್ಠ ಪಕ್ಷ 14 ಕಂಪನಿಗಳು ಕೇಂದ್ರ ಅಥವಾ ರಾಜ್ಯ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾಗಿರುವ ಸಂಗತಿ ಬಹಿರಂಗಗೊಂಡಿದೆ. ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಮುಂಚಿನ ವ್ಯವಸ್ಥೆಗಳು ಶೇ. 100ರಷ್ಟು ಸಮರ್ಪಕವಾಗಿದ್ದವೇ ಎಂದು ಮರು ಪ್ರಶ್ನಿಸಿದ್ದಾರೆ.
ಚುನಾವಣಾ ಬಾಂಡ್ ಗಳಿಗೂ ತನಿಖಾ ಸಂಸ್ಥೆಗಳ ದಾಳಿಗಳಿಗೂ ಸಂಬಂಧವಿದೆ ಎಂಬ ಮಾತುಗಳು ಕೇವಲ ಊಹಾಪೋಹ ಎಂದೂ ಅವರು ಅಲ್ಲಗಳೆದಿದ್ದಾರೆ.
“ನೀವು ಜಾರಿ ನಿರ್ದೇಶನಾಲಯವು ದಾಳಿ ನಡೆಸಿದ ನಂತರ ದೇಣಿಗೆ ನೀಡಲಾಗಿದೆ ಎಂಬ ಊಹಾಪೋಹಗಳನ್ನು ಹೊಂದಿದ್ದೀರಿ ಎಂದು ನನ್ನ ಭಾವನೆ” ಎಂದು ದತ್ತಾಂಶ ಬಿಡುಗಡೆಯ ಕುರಿತು ಪ್ರಶ್ನೆಯೊಂದಕ್ಕೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.
“ಈ ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿದ್ದು, ಇನ್ನೂ ತೀರ್ಪು ಬರಬೇಕಿದೆ. ತಾನೇನು ಸಲ್ಲಿಸಬೇಕೊ ಅದನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಸಲ್ಲಿಸಲಿದೆ” ಎಂದು ಅವರು ಹೇಳಿದ್ದಾರೆ.
“ಆದರೆ, ಇದಕ್ಕೂ ಮುಂಚಿನ ವ್ಯವಸ್ಥೆಗಳು ಶೇ. 100ರಷ್ಟು ಸಮರ್ಪಕವಾಗಿದ್ದವೆ?” ಎಂದೂ ಅವರು ಪ್ರಶ್ನಿಸಿದ್ದಾರೆ.
“ನನ್ನ ಹಿಂದಿನ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಏನು ಹೇಳಿದ್ದರು ಎಂದು ನೆನಪಿಸಿಕೊಳ್ಳೋಣ. ಅವರು, ಈ ವ್ಯವಸ್ಥೆಯು ಹಿಂದಿನ ವ್ಯವಸ್ಥೆಗಳಿಗಿಂತ ಉತ್ತಮವಾಗಿದ್ದು, ದೇಣಿಗೆದಾರರ ಖಾತೆಯಿಂದ ಪಕ್ಷಗಳ ಖಾತೆಗೆ ದೇಣಿಗೆ ಹೋಗಲಿದೆ ಎಂದು ಹೇಳಿದ್ದರು” ಎಂದು ಅವರು ನೆನಪಿಸಿದರು.
“ಇದು ನಿಖರ ವ್ಯವಸ್ಥೆಯಲ್ಲ. ಆದರೆ, ಎಲ್ಲರೂ ತಮಗೇನು ಬೇಕೊ ಅದನ್ನು ಮಾಡುತ್ತಿದ್ದ ವ್ಯವಸ್ಥೆಯಿಂದ ನಾವು ಮುಂದಡಿ ಇಟ್ಟಿದ್ದೆವು. ಸಂಪೂರ್ಣವಾಗಿ ಅಸಮರ್ಪಕವಾಗಿದ್ದ ವ್ಯವಸ್ಥೆಯಿಂದ ಅಷ್ಟೇನೂ ಸಮರ್ಪಕವಲ್ಲದ ವ್ಯವಸ್ಥೆಯನ್ನು ನಾವು ತಂದೆವು” ಎಂದು ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.