“ಶೇಕ್ ಹಸೀನಾಗೆ ಆಶ್ರಯ ನೀಡಿದ್ದೇಕೆ?” : ಕೇಂದ್ರ ಗೃಹ ಸಚಿವರ ಅಕ್ರಮ ವಲಸೆ ಆರೋಪಕ್ಕೆ ಸೊರೇನ್ ತಿರುಗೇಟು

Update: 2024-11-04 04:17 GMT

PC: facebook.com/HemantSorenJMM

ರಾಂಚಿ: ಜಾರ್ಖಂಡ್ ಮೂಲಕ ದೊಡ್ಡ ಪ್ರಮಾಣದ ಬಾಂಗ್ಲಾದೇಶಿ ಅಕ್ರಮ ವಲಸಿಗರು ಪ್ರವೇಶಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಬಿಜೆಪಿ ಆಡಳಿತದ ರಾಜ್ಯಗಳ ಮೂಲಕವೇ ಅಕ್ರಮ ಗಡಿ ನುಸುಳುವಿಕೆ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಅವರಿಗೆ ಯಾವ ಆಧಾರದಲ್ಲಿ ಆಶ್ರಯ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

"ಬಾಂಗ್ಲಾದೇಶದ ಜತೆಗೆ ಬಿಜೆಪಿ ಆಂತರಿಕ ಹೊಂದಾಣಿಕೆ ಮಾಡಿಕೊಂಡಿದೆಯೇ ಎಂದು ತಿಳಿಯಲು ನಾನು ಬಯಸುತ್ತೇನೆ" ಎಂದು ಗವ್ರ್ಹಾ ಕ್ಷೇತ್ರದ ರಾಂಕಾದಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಪ್ರಶ್ನಿಸಿದರು.

"ಯಾವ ಆಧಾರದಲ್ಲಿ ಬಾಂಗ್ಲಾದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರಿಗೆ ಭಾರತಕ್ಕೆ ಬರಲು ಅವಕಾಶ ಹಾಗೂ ಆಶ್ರಯ ನೀಡಿದ್ದೀರಿ ಎಂದು ದಯವಿಟ್ಟು ತಿಳಿಸಿ. ಬಿಜೆಪಿ ಆಡಳಿತದ ರಾಜ್ಯಗಳ ಮೂಲಕವೇ ಅಕ್ರಮ ಬಾಂಗ್ಲಾದೇಶಿ ವಲಸಿಗರು ಆಗಮಿಸುತ್ತಿದ್ದಾರೆ." ಎಂದು ವಾಗ್ದಾಳಿ ನಡೆಸಿದರು.

ರಾಜ್ಯವು ಅಕ್ರಮ ವಲಸಿಗರಿಗೆ ಆಶ್ರಯ ನೀಡುತ್ತಿದೆ ಎಂದು ರವಿವಾರ ಜಾರ್ಖಂಡ್ ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ವೇಳೆ ಅಮಿತ್ ಶಾ ಆಪಾದಿಸಿದ್ದರು. "ವಲಸಿಗರಿಗೆ ಆಶ್ರಯ ನೀಡುತ್ತಿದ್ದೀರಿ. ವಲಸಿಗರನ್ನು ನೀವು ವೋಟ್ಬ್ಯಾಂಕ್ ಮಾಡಿಕೊಂಡಿದ್ದೀರಿ. ಈ ಒಲೈಕೆ ರಾಜಕೀಯವನ್ನು ಕೊನೆಗೊಳಿಸಿ, ಅಕ್ರಮ ವಲಸಿಗರನ್ನು ಓಡಿಸಿ, ಜಾರ್ಖಂಡ್ ರಾಜ್ಯವನ್ನು ತಳದಿಂದ ಮತ್ತೆ ಕಟ್ಟುತ್ತೇವೆ" ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News