ಮಹಿಳೆ ಆತ್ಮಹತ್ಯೆ; ಪತಿಯನ್ನು ಥಳಿಸಿ ಹತ್ಯೆಗೈದ ಸಂಬಂಧಿಕರು
ಹೈದರಾಬಾದ್: ತನ್ನ ಪತಿಯ ಕಿರುಕುಳ ತಾಳದೆ 26 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ನಂತರ ಆಕೆಯ ಸಾವಿಗೆ ಪತಿಯೇ ಕಾರಣವೆಂದು, ಮಹಿಳೆಯ ಕುಟುಂಬದ ಸದಸ್ಯರು ಆತನನ್ನು ಥಳಿಸಿ ಹತ್ಯೆಗೈದಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಿಂಧು ಎಂಬ ಯುವತಿಯು ತನ್ನ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮೂರು ವರ್ಷಗಳ ಹಿಂದೆ ನಾಗಾರ್ಜುನ ಎಂಬ ಯುವಕನನ್ನು ವಿವಾಹವಾಗಿದ್ದಳು. ಆದರೆ, ಕಳೆದ ಕೆಲವು ತಿಂಗಳಿನಿಂದ ಅವರಿಬ್ಬರ ನಡುವಿನ ಸಂಬಂಧ ಹದಗೆಟ್ಟಿತ್ತು ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ, ತನ್ನ ಕುಟುಂಬದ ಸದಸ್ಯರು ಯಾರೂ ಮನೆಯಲ್ಲಿ ಇರದೆ ಇದ್ದಾಗ, ಸಿಂಧು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯು ನೆರೆಹೊರೆಯವರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ಆಕೆಯ ಕುಟುಂಬದ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಕೂಡಲೇ ಸಿಂಧುವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಆಕೆಗೆ ಪ್ರಥಮ ಚಿಕಿತ್ಸೆ ಒದಗಿಸಲಾಗಿದೆ. ನಂತರ, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಗೆ ಕರೆದೊಯ್ದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.
“ಸಿಂಧು ಮೃತದೇಹವನ್ನು ಅಚಂಪೇಟ್ ಗೆ ತಂದಾಗ ಆಕೆಯ ಕುಟುಂಬದ ಸದಸ್ಯರು ಆಕೆಯ ಸಾವಿಗೆ ಪತಿ ನಾಗಾರ್ಜುನನೇ ಕಾರಣ ಎಂದು ದೂಷಿಸಿದ್ದು, ಆತನ ಕಿರುಕುಳದಿಂದಾಗಿಯೇ ಆಕೆ ಇಂತಹ ಅತಿರೇಕದ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತದೇಹವನ್ನು ಹೊತ್ತು ತಂದ ಕಾರಿನಲ್ಲಿದ್ದ ಪತಿ ನಾಗಾರ್ಜುನ ಮೇಲೆ ಹಲ್ಲೆ ನಡೆಸಲಾಗಿದೆ. ಅಚಂಪೇಟ್ ಗೆ ತಲುಪಿದ ನಂತರ ಕುಟುಂಬದ ಸದಸ್ಯರ ಗುಂಪೊಂದು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ” ಎಂದು ನಾಗರ್ ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ಗಾಯಕ್ವಾಡ್ ವೈಭವ್ ರಘುನಾಥ್ ತಿಳಿಸಿದ್ದಾರೆ.
ನಾಗಾರ್ಜುನನ ಮೇಲೆ ಹಲ್ಲೆ ನಡೆಸಿದ ಗುಂಪಿನಲ್ಲಿ ಭಾಗಿಯಾಗಿದ್ದವರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಮ್ಮಂ ಜಿಲ್ಲೆಯ ನಿವಾಸಿಯಾಗಿದ್ದ ನಾಗಾರ್ಜುನ ಜೀವನೋಪಾಯಕ್ಕಾಗಿ ಅಚಂಪೇಟ್ ಗೆ ತನ್ನ ವಾಸ್ತವ್ಯ ಬದಲಿಸಿದ್ದ. ಮೃತ ಸಿಂಧು ಮಾಜಿ ಮಂಡಲ ಪಂಚಾಯಿತಿ ಸದಸ್ಯರೊಬ್ಬರ ಪುತ್ರಿ ಎಂದು ಹೇಳಲಾಗಿದೆ.
ನಾಗಾರ್ಜುನ ಖಾಸಗಿ ಆಸ್ಪತ್ರೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಸಿಂಧು ಟಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.