ಹೈದರಾಬಾದ್ | ಬೀದಿ ನಾಯಿಗಳ ಗುಂಪಿನ ದಾಳಿಯಿಂದ ಪಾರಾದ ಮಹಿಳೆ

Update: 2024-06-23 15:10 GMT

Screengrab from the video | PC: X

ಹೈದರಾಬಾದ್: ಬೀದಿ ನಾಯಿಗಳ ಹಾವಳಿ ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳಗಿನ ವಾಯುವಿಹಾರಕ್ಕೆಂದು ಹೊರಟಿದ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ನಡೆಸಲು ಯತ್ನಿಸಿರುವ ಘಟನೆ ಮನಿಕೊಂಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಬೀದಿ ನಾಯಿಗಳ ಹಾವಳಿಯ ಬಗ್ಗೆ ಸಾರ್ವತ್ರಿಕ ಕಳವಳ ವ್ಯಕ್ತವಾಗಿದೆ.

ತನ್ನನ್ನು ಸುತ್ತುವರಿದಿದ್ದ ಬೀದಿ ನಾಯಿಗಳ ಗುಂಪಿನಿಂದ ಕೊಂಚ ಭಯಭೀತವಾಗಿದ್ದರೂ, ಧೈರ್ಯ ಕಳೆದುಕೊಳ್ಳದೆ ಆ ಮಹಿಳೆಯು ತಾನು ತೊಟ್ಟಿದ್ದ ಪಾದರಕ್ಷೆಯನ್ನು ಬಳಸಿ ಆ ಬೀದಿ ನಾಯಿಗಳ ಗುಂಪಿನಿಂದ ಪಾರಾಗಲು ಯತ್ನಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಮೊದಮೊದಲು ಬೀದಿ ನಾಯಿಗಳ ಗುಂಪಿನ ದಾಳಿಯಿಂದ ತಪ್ಪಿಸಿಕೊಳ್ಳಲು ತಡವರಿಸಿರುವ ಆ ಮಹಿಳೆಯು, ಕೊನೆಗೂ ಅವುಗಳಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆಯ ವೀಡಿಯೊವನ್ನು ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಮಹಿಳೆಯ ಪತಿಯು, ತನ್ನ ಪತ್ನಿಯು ನಾಯಿಗಳ ದಾಳಿಯಿಂದ ಪಾರಾಗಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿದ್ದು, ನಾಯಿಗಳಿಗೆ ಆಹಾರ ಒದಗಿಸುವ ಮೂಲಕ ಅವು ಸ್ಥಳೀಯ ನಿವಾಸಿಗಳ ಮೇಲೆ ದಾಳಿ ನಡೆಸದಂತೆ ನೋಡಿಕೊಳ್ಳಿ ಎಂದು ವಸತಿ ಪ್ರದೇಶದಲ್ಲಿರುವ ಜನರಿಗೆ ಮನವಿ ಮಾಡಿದ್ದಾರೆ.

ಘಟನೆಯ ಕುರಿತು PTI ಸುದ್ದಿ ಸಂಸ್ಥೆಯು ಮನಿಕೊಂಡ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಮಹಾನಗರ ಪಾಲಿಕೆಯು ಪ್ರಾಣಿ ದಯಾ ಸಂಸ್ಥೆ ಬ್ಲ್ಯೂ ಕ್ರಾಸ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಸಂಸ್ಥೆಯು ಶನಿವಾರ ಮತ್ತು ರವಿವಾರದಂದು ಲಸಿಕೆ ಮತ್ತು ಸಂತಾನಹರಣ ಚಿಕಿತ್ಸೆಗಾಗಿ ದೊಡ್ಡ ಸಂಖ್ಯೆಯ ನಾಯಿಗಳನ್ನು ಸೆರೆ ಹಿಡಿಯುತ್ತಿದೆ. ಈ ಅಭಿಯಾನವು ಮುಂದೆಯೂ ಮುಂದುವರಿಯಲಿದೆ ಎಂದು ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News