2018ರಲ್ಲಿ ಕೆ.ಸಿ.ವೇಣುಗೋಪಾಲ್ ಸಲಹೆಯಿಂದ ರಾಜಕೀಯವಾಗಿ ಗೆದ್ದೆ: ಸಿಎಂ ಸಿದ್ದರಾಮಯ್ಯ
ನೀಲಂಬೂರು (ಕೇರಳ): ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ರಾಜಕೀಯ ಚಾಣಾಕ್ಷ ಎಂದು ಬಣ್ಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2018ರ ವಿಧಾನಸಭೆ ಚುನಾವಣೆಯಲ್ಲಿ ಅವರ ಸಲಹೆಯಂತೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರಿಂದಾಗಿ ರಾಜಕೀಯವಾಗಿ ಗೆದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನೀಲಂಬೂರು ನಗರದಲ್ಲಿ ಆರ್ಯದನ್ ಮೊಹಮ್ಮದ್ ಸಂಸ್ಮರಣಾ ಸಮಿತಿ ಅಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಆರ್ಯದನ್ ಮೊಹಮ್ಮದ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
"2018ರಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದೆ. ಆದರೆ, ವೇಣುಗೋಪಾಲ್ ಅವರು, ನೀವು ಚಾಮುಂಡೇಶ್ವರಿಯ ಜತೆಗೆ ಬೇರೊಂದು ಕ್ಷೇತ್ರದಲ್ಲೂ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದರು. ಒಂದು ವೇಳೆ ಅವರ ಸಲಹೆ ಕಡೆಗಣಿಸಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ, ಬಾದಾಮಿಯಲ್ಲಿ ನಿಲ್ಲದೇ ಹೋಗಿದ್ದರೆ ಚಾಮುಂಡೇಶ್ವರಿಯಲ್ಲಿ ರಾಜಕೀಯವಾಗಿ ಸೋಲುತ್ತಿದ್ದೆ. ಅವರ ಲೆಕ್ಕಾಚಾರದಂತೆ ಚಾಮುಂಡೇಶ್ವರಿಯಲ್ಲಿ ಸೋತೆ, ಬದಾಮಿಯಲ್ಲಿ ಗೆದ್ದೆ", ಎಂದರು.
"ನಾನು 2013-18ರ ಅವಧಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಕೆ.ಸಿ. ವೇಣುಗೋಪಾಲ್ ಅವರು ಎಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರನ್ನು ಹತ್ತಿರದಿಂದ ನೋಡಿದ್ದೇನೆ ಮತ್ತು ಅರ್ಥ ಮಾಡಿಕೊಂಡಿದ್ದೇನೆ. ಸ್ವಭಾವತ ಜನಪರ ವ್ಯಕ್ತಿಯಾಗಿರುವ ಅವರು ಚಿಕ್ಕ ಮಯಸ್ಸಿನಿಂದಲೇ ಪಕ್ಷಕ್ಕಾಗಿ ದುಡಿದು ಅನೇಕ ಸ್ಥಾನಮಾನಗಳನ್ನು ಗಳಿಸಿದವರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಹಿಂದೆ ವೇಣುಗೋಪಾಲ್ ಅವರ ಪಾತ್ರ ದೊಡ್ಡದಿದೆ", ಎಂದು ಹೇಳಿದರು.
"2013ರಲ್ಲಿ ಮೊದಲ ಬಾರಿ ನಾನು ಮುಖ್ಯಮಂತ್ರಿಯಾಗಿ ಜನಪರ ಯೋಜನೆಗಳನ್ನು ರೂಪಿಸಿದಾಗ ಅದಕ್ಕೆ ಸಂಪೂರ್ಣ ಬೆಂಬಲ ನೀಡಿದರು. 2023ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಪಂಚ ಗ್ಯಾರಂಟಿಗಳನ್ನು ಘೋಷಿಸಿದಾಗಲೂ ಬೆಂಬಲ ನೀಡಿ ಪ್ರೋತ್ಸಾಹಿಸಿದರು. ಅವರು ಕೆಲವು ವರ್ಷ ಕಾಲ ಕರ್ನಾಟಕ ಉತ್ಸುವಾರಿಯಾಗಿದ್ದರು. ಹಾಗಾಗಿ ಕೆಸಿ ವೇಣುಗೋಪಾಲ್ ಅವರನ್ನು ಹತ್ತಿರದಿಂದ ನೋಡಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ. ಅವರು ಸ್ವಭಾವತಃ ಜನಪರ ವ್ಯಕ್ತಿಯಾಗಿರುವಂತಹದ್ದು, ಅಷ್ಟೇ ಅಲ್ಲ, ಹಿರಿಯರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಚಿಕ್ಕವರನ್ನೂ ಗೌರವಿಸುತ್ತಾರೆ", ಎಂದು ಕೆ.ಸಿ.ವೇಣುಗೋಪಾಲ್ ಅವರನ್ನು ಶ್ಲಾಘಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಸಿ.ವೇಣುಗೋಪಾಲ್ ಅವರಿಗೆ ಆರ್ಯದನ್ ಮೊಹಮ್ಮದ್ ಪ್ರಶಸ್ತಿ ಪ್ರದಾನ ಮಾಡಿದರು. ಕೇರಳ ವಿಧಾನಸಭೆ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್, ಪ್ರತಿಪಕ್ಷದ ಉಪನಾಯಕ ಪಿ.ಕೆ.ಕುಂಞಾಲ್ಲಿ ಕುಟ್ಟಿ, ಸಿಡಬ್ಲ್ಯುಸಿ ಸದಸ್ಯ ರಮೇಶ್ ಚಿನ್ನಿತಾಲ್, ಯುಡಿಎಫ್ ಸಂಚಾಲಕ ಎಂ.ಎಂ.ಹಸನ್, ಕಾಂಗ್ರೆಸ್ ಕೇರಳ ಉಸ್ತುವಾರಿ ದೀಪದಾಸ್ ಮುನ್ಷಿ ಮತ್ತಿತರರು ಇದ್ದರು.