ಕುಸ್ತಿ ಫೆಡರೇಷನ್ ಅಮಾನತು ಪ್ರಶ್ನಿಸಿ ಕೋರ್ಟ್‌ಗೆ ಹೋಗುತ್ತೇವೆ: ಸಂಜಯ್ ಸಿಂಗ್

Update: 2023-12-28 16:52 GMT

ಸಂಜಯಕುಮಾರ್ ಸಿಂಗ್ | Photo: PTI 

ಹೊಸದಿಲ್ಲಿ: ಭಾರತ ಕುಸ್ತಿ ಫೆಡರೇಷನ್‌ನ ನೂತನ ಚುನಾಯಿತ ಆಡಳಿತ ಸಮಿತಿಯನ್ನು ಅಮಾನತುಗೊಳಿಸಿರುವ ಕ್ರೀಡಾ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಚುನಾಯಿತ ಅಧ್ಯಕ್ಷ ಸಂಜಯಕುಮಾರ್ ಸಿಂಗ್ ಹೇಳಿದ್ದಾರೆ.

‘ ಕಾನೂನಿನನ್ವಯ ನಡೆದ ಚುನಾವಣೆಯಲ್ಲಿ ನಾವು ಜಯಿಸಿದ್ದೇವೆ. ಜಮ್ಮು–ಕಾಶ್ಮೀರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚುನಾವಣಾಧಿಕಾರಿಯಾಗಿದ್ದರು. ಐಒಎ (ಭಾರತ ಒಲಿಂಪಿಕ್ ಸಂಸ್ಥೆ) ಮತ್ತು ಯುಡಬ್ಲ್ಯುಡಬ್ಲ್ಯು (ವಿಶ್ವ ಕುಸ್ತಿ ಸಂಘಟನೆ) ವೀಕ್ಷಕರೂ ಹಾಜರಿದ್ದರು. 22 ರಾಜ್ಯ ಸಂಸ್ಥೆಗಳು ಚುನಾವಣೆಯಲ್ಲಿ ಭಾಗವಹಿಸಿದ್ದವು. 47 ಮತಗಳು ಚಲಾವಣೆಯಾದವು. ಅದರಲ್ಲಿ ನಾವು 40 ಮತ ಗಳಿಸಿದ್ದೇವೆ’ ಎಂದು ಸಂಜಯ್ ತಿಳಿಸಿದ್ದಾರೆ

‘ಇಷ್ಟೆಲ್ಲ ಆದ ನಂತರವೂ ನಮ್ಮನ್ನು ಅಮಾನತುಗೊಳಿಸಿರುವುದು ಸರಿಯಲ್ಲಿ. ಪ್ರಜಾಪ್ರಭುತ್ವದಡಿಯಲ್ಲಿ ಚುನಾಯಿತಗೊಂಡಿರುವ ಸಮಿತಿಗೆ ತನ್ನ ವಾದವನ್ನು ಮಂಡಿಸುವ ಅವಕಾಶ ನೀಡಿಲ್ಲ. ಇದು ಸಾಮಾಜಿಕ ನ್ಯಾಯದ ನಿಯಮಕ್ಕೆ ವಿರುದ್ಧವಾಗಿದೆ. ಭಾರತದ ಸಂವಿಧಾನದಡಿಯಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಪಡೆಯುವ ಹಕ್ಕು ಇದೆ’ ಎಂದು ಅವರು ಹೇಳಿದ್ದಾರೆ.

‘ಸಮಿತಿಯನ್ನು ಅಮಾನತು ಮಾಡಿರುವ ಆದೇಶ ಹಿಂಪಡೆಯದಿದ್ದರೆ ಕಾನೂನು ಸಲಹೆ ಪಡೆದು ಕೋರ್ಟ್‌ ಮೆಟ್ಟಿಲೇರುತ್ತೇವೆ’ ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ.

‘ಡಬ್ಲ್ಯುಎಫ್‌ಐ ಮೇಲಿನ ಅಮಾನತು ತೆರವುಗೊಳಿಸುವಂತೆ ಯುಡಬ್ಲ್ಯುಡಬ್ಲ್ಯುಗೆ ಪತ್ರ ಬರೆದಿದ್ದೇವೆ. ಚುನಾವಣೆಯು ನಿಯಮಬದ್ಧವಾಗಿ ನಡೆದಿದೆ. ಆದ್ದರಿಂದ ಯುಡಬ್ಲ್ಯುಡಬ್ಲ್ಯು ಸ್ಪಂದಿಸುವ ನಿರೀಕ್ಷೆ ಇದೆ. ಸದ್ಯ ಯುರೋಪ್‌ನಲ್ಲಿ ಕಚೆರಿಗಳಿಗೆ ರಜೆ ಇದ್ದು, ನಮಗೆ ಪ್ರತಿಕ್ರಿಯೆ ಸಿಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News