ನೀವು ಮತ್ತೊಬ್ಬ ನಾಯಕನನ್ನು ರಕ್ಷಿಸಿದಿರಿ: ಸೋನಿಯಾ ಗಾಂಧಿ ಅವರನ್ನು ಪರೋಕ್ಷವಾಗಿ ಛೇಡಿಸಿದ ಪ್ರಧಾನಿ ಮೋದಿ
ಜೈಪುರ : ಚುನಾವಣೆಗಳನ್ನು ಗೆಲ್ಲಲಾಗದವರು ಕ್ಷೇತ್ರ ಖಾಲಿ ಮಾಡುತ್ತಿದ್ದು, ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಪರೋಕ್ಷವಾಗಿ ಛೇಡಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ತಮ್ಮ ರಾಜ್ಯಸಭಾ ಅವಧಿಗೂ ಮುನ್ನ ಅವರು ಕಾಂಗ್ರೆಸ್ ನ ಭದ್ರಕೋಟೆಯಾದ ರಾಯ್ ಬರೇಲಿಯನ್ನು ಎರಡು ದಶಕಗಳ ಕಾಲ ಪ್ರತಿನಿಧಿಸಿದ್ದರು. ಇದಲ್ಲದೆ ಅಮೇಥಿ ಲೋಕಸಭಾ ಕ್ಷೇತ್ರವನ್ನೂ ಐದು ವರ್ಷಗಳ ಕಾಲ ಪ್ರತಿನಿಧಿಸಿದ್ದರು.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಎದುರು ಜಾಲೋರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಲುಂಬಾರಾಮ್ ಚೌಧರಿ ಪರವಾಗಿ ಜಾಲೋರ್ ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಜಾಲೋರ್ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಕಳೆದ ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬರುತ್ತಿದೆ.
ಇಂದಿನ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುತ್ತಿರುವ ಸಂಸದರೇನಾದರೂ ರಾಜಸ್ಥಾನದ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದಾರೆಯೆ ಎಂದು ಪ್ರಶ್ನಿಸಿದರು. “ಕಾಂಗ್ರೆಸ್ ಪಕ್ಷವು ದಕ್ಷಿಣದ ನಾಯಕರೊಬ್ಬರನ್ನು ರಾಜ್ಯಸಭೆಗೆ ಕಳಿಸಿತು. ಅವರೆಂದಾದರೂ ರಾಜಸ್ಥಾನದ ಕುರಿತು ಮಾತನಾಡಿದ್ದಾರೆಯೆ? ಇಲ್ಲ. ನೀವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ರಾಜ್ಯಸಭೆಗೆ ಕಳಿಸಿದಿರಿ. ಅವರು ಅನಾರೋಗ್ಯಕ್ಕೀಡಾಗಿದ್ದರು. ಆದರೆ, ನೀವು ಅವರನ್ನು ರಾಜಸ್ಥಾನದಲ್ಲಿ ಎಂದಾದರೂ ಕಂಡಿದ್ದೀರಾ? ಈಗ ನೀವು ಮತ್ತೊಬ್ಬ ನಾಯಕರನ್ನು ರಕ್ಷಿಸಿದ್ದೀರಿ. ಚುನಾವಣೆಗಳಲ್ಲಿ ಹೋರಾಡಲಾಗದವರು, ಚುನಾವಣೆಗಳಲ್ಲಿ ಗೆಲ್ಲಲಾಗದವರು ತಮ್ಮ ಕ್ಷೇತ್ರಗಳನ್ನು ಖಾಲಿ ಮಾಡುತ್ತಿದ್ದು, ರಾಜಸ್ಥಾನದಿಂದ ರಾಜ್ಯಸಭೆಗೆ ಬರುತ್ತಿದ್ದಾರೆ” ಎಂದು ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಛೇಡಿಸಿದರು.
ಸದ್ಯ, ರಾಜಸ್ಥಾನದಿಂದ ಸೋನಿಯಾ ಗಾಂಧಿ, ನೀರಜ್ ಡಾಂಗಿ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಪ್ರಮೋದ್ ತಿವಾರಿ ಹಾಗೂ ಮುಕುಲ್ ವಾಸ್ನಿಕ್ ಸೇರಿದಂತೆ ಆರು ಮಂದಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಪೈಕಿ ಡಾಂಗಿ ಮಾತ್ರ ರಾಜಸ್ಥಾನದ ನಿವಾಸಿಯಾಗಿದ್ದಾರೆ.