ನಾರಿ ಶಕ್ತಿ ಅನ್ನುತ್ತೀರಿ, ಅದನ್ನು ಇಲ್ಲಿ ತೋರಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌

Update: 2024-02-20 06:44 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕೋಸ್ಟ್‌ ಗಾರ್ಡ್‌ನಲ್ಲಿ ಮಹಿಳೆಯರಿಗೆ ಖಾಯಂ ಆಯೋಗ ನೀಡಿಕೆ ವಿಚಾರದಲ್ಲಿ ಪುರುಷ ಪ್ರದಾನ ನಿಲುವನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌, ಈಗಾಗಲೇ ಸೇನೆ ಮತ್ತು ನೌಕಾಪಡೆಗಳು ನೀತಿಯನ್ನು ಜಾರಿಗೊಳಿಸಿರುವಾಗ ಕೋಸ್ಟ್‌ ಗಾರ್ಡ್‌ ಏಕೆ ಭಿನ್ನವಾಗಿರಬೇಕು ಎಂದು ಪ್ರಶ್ನಿಸಿದೆ.

“ಮಹಿಳೆಯರು ಗಡಿಗಳನ್ನು ರಕ್ಷಿಸಬಲ್ಲರಾದರೆ ಅವರು ಕರಾವಳಿಯನ್ನೂ ರಕ್ಷಿಸಬಲ್ಲರು,” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠ ಹೇಳಿದೆ. “ಸರಕಾರ ಮಹಿಳಾ ಶಕ್ತಿಯ ಬಗ್ಗೆ ಮಾತನಾಡುತ್ತಿರುತ್ತದೆ, ಈ ನಿಟ್ಟಿನಲ್ಲಿ ಅದರ ಬದ್ಧತೆಯನ್ನು ತೋರಿಸಲು ಸಮಯ ಬಂದಿದೆ,” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕೋಸ್ಟ್‌ ಗಾರ್ಡ್‌ನ ಶಾರ್ಟ್‌ ಸರ್ವಿಸ್‌ ಅಪಾಯಿಂಟ್ಮೆಂಟ್‌ ಅಧಿಕಾರಿ ಪ್ರಿಯಾಂಕ ತ್ಯಾಗಿ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿದೆ. “ನೀವು (ಕೇಂದ್ರ ಸರ್ಕಾರ) ನಾರಿ ಶಕ್ತಿ ನಾರಿ ಶಕ್ತಿ ಎನ್ನುತ್ತೀರಿ. ಅದನ್ನು ಇಲ್ಲಿ ತೋರಿಸಿ. ಸೇನೆ ಮಾಡಿರುವಾಗ ಕೋಸ್ಟ್‌ ಗಾರ್ಡ್‌ ಮಾಡಬಾರದೆಂದೇನಿಲ್ಲ. ಕೋಸ್ಟ್‌ ಗಾರ್ಡ್‌ನಲ್ಲಿ ಮಹಿಳೆಯರು ಉನ್ನತಿ ಸಾಧಿಸುವುದನ್ನು ನೋಡಲು ಬಯಸದಷ್ಟು ಪುರುಷಪ್ರಧಾನ ಮನಸ್ಥಿತಿ ಏಕೆ ಹೊಂದಿದ್ದೀರಿ?” ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ತ್ಯಾಗಿ ಅವರು ಕೋಸ್ಟ್‌ ಗಾರ್ಡ್‌ನ ಡೋರ್ನಿಯರ್‌ ವಿಮಾನಗಳ ನಿರ್ವಹಣೆಗೆ ನಿಯೋಜಿಸಲಾದ ಮೊದಲ ಮಹಿಳಾ ತಂಡದ ಭಾಗವಾಗಿದ್ದರು. ಪುರುಷ ಅಧಿಕಾರಿಗಳಂತೆಯೇ ತಮಗೂ ಖಾಯಂ ಆಯೋಗ ಬೇಕೆಂದು ಅವರು ಆಗ್ರಹಿಸಿದ್ದರು. ಖಾಯಂ ಆಯೋಗಕ್ಕೆ ಆಕೆಯನ್ನು ಪರಿಗಣಿಸಲು ನಿರಾಕರಿಸಿ ಡಿಸೆಂಬರಿನಲ್ಲಿ ಆಕೆಯನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News