ನಿಮ್ಮ ಮಂಗಳಸೂತ್ರ ಸುರಕ್ಷಿತವಾಗಿರುವುದಿಲ್ಲ: ಪ್ರಧಾನಿಯಿಂದ ಕಾಂಗ್ರೆಸ್ ವಿರುದ್ಧದ ಆರೋಪದ ಪುನರಾವರ್ತನೆ

Update: 2024-04-22 16:14 GMT

ನರೇಂದ್ರ ಮೋದಿ | PC : NDTV 

ಹೊಸದಿಲ್ಲಿ : ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಜನರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಅವರ ಜೀವಿತಾವಧಿಯ ಉಳಿತಾಯಗಳನ್ನು ಕಿತ್ತುಕೊಳ್ಳಲು ಸಂಪತ್ತು ಸಮೀಕ್ಷೆಯನ್ನು ನಡೆಸಲಿದೆ ಎಂದ ತನ್ನ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಪುನರುಚ್ಚರಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡಲಿದೆ ಎಂದು ರವಿವಾರ ಆರೋಪಿಸಿದ್ದ ಮೋದಿ,ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತ ಸಮುದಾಯವು ಮೊದಲ ಹಕ್ಕನ್ನು ಹೊಂದಿದೆ ಎಂಬ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ 18 ವರ್ಷಗಳ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದ್ದರು.

ಕಾಂಗ್ರೆಸ್ ಆಡಳಿತದಲ್ಲಿ ನಿಮ್ಮ ಮಂಗಳಸೂತ್ರ ಸುರಕ್ಷಿತವಾಗಿರುವುದಿಲ್ಲ ಎಂದು ಸೋಮವಾರ ಅಲಿಗಡ್ನಲ್ಲಿ ರ‍್ಯಾಲಿಯಲ್ಲಿ ಹೇಳಿದ ಮೋದಿ, ತಾಯಂದಿರು ಮತ್ತು ಸೋದರಿಯವರ ಬಳಿಯಿರುವ ಚಿನ್ನವನ್ನು ಪಕ್ಷವು ಲೆಕ್ಕ ಹಾಕಲಿದೆ. ಆ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲಿದೆ ಮತ್ತು ನಂತರ ಅದನ್ನು ಮರುಹಂಚಿಕೆ ಮಾಡುತ್ತದೆ ಎಂದು ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯು ಹೇಳಿದೆ ಎಂದು ಪ್ರತಿಪಾದಿಸಿದರು.

‘‘ನಾನು ನನ್ನ ದೇಶವಾಸಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿವೆ. ತಮ್ಮ ಸರಕಾರವು ಅಧಿಕಾರಕ್ಕೆ ಬಂದರೆ ಯಾರು ಎಷ್ಟು ಗಳಿಸುತ್ತಿದ್ದಾರೆ ಮತ್ತು ಯಾರು ಎಷ್ಟು ಆಸ್ತಿಯನ್ನು ಹೊಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಿದೆ ಎಂದು ಕಾಂಗ್ರೆಸಿನ ‘ಯುವರಾಜ’ ಹೇಳಿದ್ದಾರೆ. ನಮ್ಮ ತಾಯಂದಿರು ಮತ್ತು ಸೋದರಿಯರು ಚಿನ್ನವನ್ನು ಹೊಂದಿದ್ದಾರೆ. ಅದು ಸ್ತ್ರೀ ಧನ,ಅದನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಕಾನೂನು ಕೂಡ ಅದನ್ನು ರಕ್ಷಿಸುತ್ತದೆ. ತಾಯಂದಿರು ಮತ್ತು ಸೋದರಿಯರ ಚಿನ್ನವನ್ನು ಕದಿಯುವುದು ಅವರ ಉದ್ದೇಶವಾಗಿದೆ ’’ ಎಂದು ಮೋದಿ ಹೇಳಿದರು.

‘ನಿಮ್ಮ ಗ್ರಾಮದಲ್ಲಿ ಪೂರ್ವಜರ ಮನೆಯಿದ್ದರೆ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನೀವು ನಗರದಲ್ಲಿ ಸಣ್ಣ ಫ್ಲ್ಯಾಟನ್ನು ಖರೀದಿಸಿದ್ದರೆ ಎರಡಲ್ಲೊಂದನ್ನು ಅವರು ಕಿತ್ತುಕೊಳ್ಳುತ್ತಾರೆ. ಇದು ಮಾವೋವಾದಿಗಳ ಚಿಂತನೆ ,ಇದು ಕಮ್ಯುನಿಸ್ಟರ ಚಿಂತನೆ. ಹೀಗೆ ಮಾಡುವ ಮೂಲಕ ಅವರು ಈಗಾಗಲೇ ಅನೇಕ ದೇಶಗಳನ್ನು ಹಾಳು ಮಾಡಿದ್ದಾರೆ. ಈಗ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಅದೇ ನೀತಿಯನ್ನು ಭಾರತದಲ್ಲಿ ಜಾರಿಗೊಳಿಸಲು ಬಯಸಿವೆ ’ ಎಂದರು.

ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಪಕ್ಷವು ಮೋದಿಯವರ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿದೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ ಮನು ಸಿಂಘ್ವಿ ಅವರು ಸೋಮವಾರ ಇಲ್ಲಿ ತಿಳಿಸಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಪ್ರಣಾಳಿಕೆಯ ಬಗ್ಗೆ ಮೋದಿಯವರಿಗೆ ‘ಪಾಠ’ ಮಾಡಲು ಅವರೊಂದಿಗೆ ಭೇಟಿಗೆ ಅವಕಾಶವನ್ನು ಕೋರಿದ್ದರು.

ಪಕ್ಷದ ನಾಯಕರು ಮತ್ತು ಲೋಕಸಭಾ ಸದಸ್ಯರು ಪ್ರಣಾಳಿಕೆಯ ಪ್ರತಿಗಳನ್ನು ಮೋದಿಯವರಿಗೆ ರವಾನಿಸಲಿದ್ದಾರೆ ಎಂದು ಹೇಳಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೆಣುಗೋಪಾಲ ಅವರು,ಮೋದಿಯವರು ಪ್ರಧಾನಿ ಹುದ್ದೆಗೆ ಸೂಕ್ತವಲ್ಲದ ಹೇಳಿಕೆಯನ್ನು ನೀಡಿದ್ದಾರೆ. ಓರ್ವ ಪ್ರಧಾನಿ ಪ್ರತಿಯೊಂದರ ಬಗ್ಗೆಯೂ ಸುಳ್ಳುಗಳನ್ನು ಹೇಳಲು ಮತ್ತು ಸುಳ್ಳು ಸುದ್ದಿಗಳನ್ನು ಹರಡಲು ಹೇಗೆ ಸಾಧ್ಯ? ರವಿವಾರ ಅವರು ರಾಜಸ್ಥಾನದಲ್ಲಿ ಮಾಡಿದ್ದ ಭಾಷಣವು ಅವರು ಈ ದೇಶದ ಮಹಾನ್ ಸುಳ್ಳುಗಾರ ಎನ್ನುವುದನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News