ಅಜ್ಜಂಪೀರ್ ಖಾದ್ರಿ ನನಗಾಗಿ ಶಾಸಕ ಸ್ಥಾನ ತ್ಯಜಿಸಲೂ ಸಿದ್ಧರಾಗಿದ್ದರು: ಸಿಎಂ ಸಿದ್ದರಾಮಯ್ಯ

Update: 2024-11-04 10:34 GMT

ಶಿಗ್ಗಾಂವಿ, ನ.4: ಅಜ್ಜಂಪೀರ್ ಖಾದ್ರಿ ನನಗೆ ತುಂಬಾ ಬೇಕಾದವರು. ನನಗಾಗಿ ಖಾದ್ರಿ ಶಾಸಕ ಸ್ಥಾನ ತ್ಯಜಿಸಲು ಸಿದ್ದರಾಗಿದ್ದರು. ನಾನು ಸೋತು, ಖಾದ್ರಿ ಗೆದ್ದಿದ್ದಾಗ ಸ್ವತಃ ಖಾದ್ರಿಯವರೇ ಬಂದು ಅವರು ಶಾಸಕ ಸ್ಥಾನವನ್ನು ನನಗಾಗಿ ಬಿಟ್ಟು ಕೊಡಲು ಸಿದ್ದರಾಗಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಆತ್ಮೀಯತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹುಲಗೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪೈಲ್ವಾನ್ ಪಠಾಣ್ ಪರವಾಗಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಮ್ಮಿಬ್ಬರ ನಡುವಿನ ಆತ್ಮೀಯತೆ ಕಾರಣ ನನ್ನ ಮಾತಿಗೆ ಬೆಲೆ ನೀಡಿ ಅಜ್ಜಂಪೀರ್ ಖಾದ್ರಿ ನಾಮಪತ್ರ ಹಿಂಪಡೆದು ಪಠಾಣ್ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಅಜ್ಜನೂ ಮುಖ್ಯಮಂತ್ರಿಯಾಗಿ, ಅಪ್ಪನೂ ಮುಖ್ಯಮಂತ್ರಿ ಆಗಿದ್ದವರ ಮಗನ ವಿರುದ್ಧ ಸಾಮಾನ್ಯ ಕುಟುಂಬದ ಪೈಲ್ವಾನ್ ಪಠಾಣ್ ಕಣದಲ್ಲಿದ್ದಾರೆ. ಇವರನ್ನು ಗೆಲ್ಲಿಸಿ, ವಿಧಾನಸೌಧಕ್ಕೆ ಕಳುಹಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ವಿರುದ್ಧ ಸಾಮಾನ್ಯ ಕುಟುಂಬದ ಪಠಾಣ್ ಅವರನ್ನು ಗೆಲ್ಲಿಸಿ ಎಂದರು.

ಕೊರೋನಾ ಸಂದರ್ಭದಲ್ಲಿ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದು ದಾಖಲೆ ಮಾಡಿದವರು ಬಸವರಾಜ ಬೊಮ್ಮಾಯಿ. ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದ ಏಕೈಕ ಸರ್ಕಾರ ಬೊಮ್ಮಾಯಿ ಅವರದ್ದಾಗಿತ್ತು. ಕೋವಿಡ್ ಸಂದರ್ಭದಲ್ಲೂ, ಸಂಕಷ್ಟದಲ್ಲಿ ನರಳುವಾಗಲೂ ಲಂಚ ಪಡೆದವರ ಪುತ್ರನನ್ನು ಸೋಲಿಸಿ ಎಂದರು.

ಮೋದಿಯ ಸುಳ್ಳುಗಳು

ಸಿದ್ದರಾಮಯ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದ್ದರು. ಆದರೆ ನಮ್ಮ ಸರ್ಕಾರ ಜಾರಿಗೆ ಬಂದ ಎಂಟೇ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಲಕ್ಷಾಂತರ ತಾಯಂದಿರು ಗ್ಯಾರಂಟಿಗಳ ಅನುಕೂಲಗಳನ್ನು ಪ್ರತೀ ದಿನ ಪಡೆಯುತ್ತಿದ್ದಾರೆ. ಮೋದಿ ಅವರ ಸುಳ್ಳುಗಳು ಮಾತ್ರ ನಿಲ್ಲುತ್ತಲೇ ಇವೆ ಎಂದು ಟೀಕಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದರೆ, "ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇಲ್ಲ" ಎಂದು ಯಡಿಯೂರಪ್ಪ ಹೇಳಿದ್ದರು. ಹೋಗಲಿ ಬಸವರಾಜ ಬೊಮ್ಮಾಯಿ ಅವರೂ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಲಿಲ್ಲ. ಇವರು ಯಾವ ಮುಖ ಇಟ್ಟುಕೊಂಡು ರೈತರ ಮತ ಕೇಳುತ್ತಿದ್ದಾರೆ ಎಂದರು.

ಕ್ಷೇತ್ರಕ್ಕೆ ಏನು ಕೊಟ್ರಿ ಬೊಮ್ಮಾಯಿಯವರೇ?

ಕೃಷಿ ಸಚಿವರಾಗಿ, ಗೃಹ ಸಚಿವರಾಗಿ, ಮುಖ್ಯಮಂತ್ರಿಯಾಗಿ ನಿಮ್ಮ ಕ್ಷೇತ್ರಕ್ಕೆ ಏನು ಕೊಟ್ಟಿದ್ದೀರಿ ಬೊಮ್ಮಾಯಿಯವರೇ? ನೀವು ಸಿಎಂ ಆಗಿದ್ದಾಗಲಾದರೂ ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲವಲ್ಲಾ ಏಕೆ ಸ್ವಾಮಿ ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News