ನೇಗಿಲ ಮೇಲೆಯೇ ನಿಂತಿದೆ ಧರ್ಮ!
ನೇಗಿಲ ಮೇಲೆಯೇ ನಿಂತಿದೆ ಧರ್ಮ... ಎನ್ನುವ ಕುವೆಂಪು ಅವರೇ ಈ ನೆಲದ ರೈತರನ್ನು ಮೊದಲ ಬಾರಿಗೆ ಅನ್ನದಾತ, ಯೋಗಿ ಎಂದು ಕರೆದವರು. ಅವರ ಕಾದಂಬರಿ, ಪ್ರಬಂಧ, ಆತ್ಮಕಥೆಗಳಲ್ಲಿ ಬಂದು ಹೋಗುವ ನೂರಾರು ಪಾತ್ರಗಳ ಒಳಗಡೆ ಸಾಂಪ್ರದಾಯಿಕ ಕೃಷಿ ಜ್ಞಾನ ಮಡು ಕಟ್ಟಿದೆ. ಮಣ್ಣು, ಮಳೆ, ಬೀಜ ಬಿತ್ತನೆ, ಕೊಯ್ಲು, ಹಬ್ಬ ಆಚರಣೆ, ಭೂಮಿ ಸಂರಕ್ಷಣೆ, ಪೂಜೆ, ಕೆಸರು, ಬೇರು ಸಂಬಂಧಿಸಿದ ನೂರಾರು ಸೂಕ್ಷ್ಮಗಳು ಅವರ ಕೃತಿಗಳಲ್ಲಿ ಕಾಣಿಸುತ್ತವೆ. ಅವೆಲ್ಲವನ್ನು ಕೃಷಿ ವಿಜ್ಞಾನದ ಮಕ್ಕಳೆದುರು ಸಾದರ ಪಡಿಸುವ ಅವಕಾಶ ನನ್ನಂಥವನಿಗೆ ಒದಗಿ ಬಂದದ್ದು ಅದೃಷ್ಟವೇ ಸರಿ.;

ನಮ್ಮ ದೇಶದ ಕೃಷಿ ವಿಶ್ವವಿದ್ಯಾನಿಲಯಗಳ ಪಠ್ಯ ಸಂರಚನೆ, ವಿನ್ಯಾಸ ಹೇಗಿರುತ್ತದೆ ಎನ್ನುವ ಕುತೂಹಲ ಬಹಳ ದಿನಗಳದ್ದು. ಬೇಸಾಯದ ಸಿಲಬಸ್ಗಳು ಮೇಲಿನಿಂದ ಕೆಳಗಡೆ ಬರುತ್ತದೋ ಕೆಳಗಡೆಯಿಂದ ಮೇಲೆ ಹೋಗುತ್ತೋ, ಮಣ್ಣಿನಿಂದ ಮೇಲೇರುತ್ತದೋ ಲ್ಯಾಬಿನಿಂದ ಕೆಳಗಡೆ ಬರುತ್ತದೋ, ವಿಜ್ಞಾನವೇ ಅಲ್ಲಿ ಮೇಳೈಸುತ್ತದೋ ನೆಲಪದಕ್ಕೆ ಮಹತ್ವವಿದೆಯೋ ಎಂಬ ಕುತೂಹಲ ನನ್ನದು. ಬಹಳ ವರ್ಷಗಳ ಹಿಂದೆ ಪದವಿ ಓದುವ ಕಾಲದಲ್ಲಿ ತಾಲೂಕು ಕೇಂದ್ರಕ್ಕೆ ಯಾರೋ ಬಂದು ಮಣ್ಣು ಪರೀಕ್ಷೆ ಮಾಡುತ್ತಾರೆ ಎಂಬುದನ್ನು ತಿಳಿದ ನಾನು ತೋಟಕ್ಕಿಳಿದು ಮಣ್ಣು ಒಕ್ಕಲು ಆರಂಭಿಸಿದ್ದೆ. ಇದನ್ನು ಗಮನಿಸಿದ ನನ್ನ ತಂದೆಯವರು ಏಕದಂ ಸಹಜವಾಗಿಯೇ ನಮ್ಮ ತೋಟದ ಮಣ್ಣು ಯಾರಿಗೆ, ಯಾಕೆ, ಎಲ್ಲಿಗೆ, ಏನು, ಎತ್ತ ಎಂಬ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ನಮ್ಮ ಮಣ್ಣನ್ನು ಪರೀಕ್ಷಿಸಬೇಕು ಅದರಲ್ಲಿರುವ ಕೊರತೆಗಳನ್ನು ಪತ್ತೆ ಹಚ್ಚಿ ಮದ್ದು ಮಾಡಬೇಕೆಂದು ಉತ್ತರಿಸಿದಾಗ ಬೆಚ್ಚಿ ಬೀಳುವ ಸರದಿ ನನ್ನ ಅಪ್ಪಯ್ಯನದ್ದು!
ಈ ಜಗತ್ತಿನಲ್ಲಿ ಮಣ್ಣನ್ನೂ ಪರೀಕ್ಷೆ ಮಾಡುತ್ತಾರಾ, ಅದೂ ಸಾಧ್ಯವಾ, ಮಣ್ಣು ಪರೀಕ್ಷೆ ಮಾಡುವುದು ಹೇಗೆ? ಯಾಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಅವರು ಕೇಳಲಾರಂಭಿಸಿದರು. ಆನಂತರದ ದಿನಗಳಲ್ಲಿ ನಮ್ಮೂರಿನ ತೋಡಿನಲ್ಲಿ ಬಹಳಷ್ಟು ನೀರು ಹರಿದಿದೆ.
ನಮ್ಮ ದೇಶದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳು, ಅವುಗಳ ವಿಸ್ತರಣಾ ಘಟಕಗಳು, ಅರಣ್ಯ-ತೋಟಗಾರಿಕಾ ವಿಜ್ಞಾನಗಳು ಹೀಗೆ ಅಂದಾಜು ಇನ್ನೂರಕ್ಕಿಂತಲೂ ಹೆಚ್ಚು ಕಡೆ ಕೃಷಿ ಅಧ್ಯಯನ ಕೇಂದ್ರಗಳಿವೆ. ಪ್ರತೀ ವರ್ಷ ಅಲ್ಲೆಲ್ಲ ನಮ್ಮ ವಿದ್ಯಾರ್ಥಿಗಳು ಕೃಷಿಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುತ್ತಾರೆ. ಸಂಗೀತ ವಿಶ್ವವಿದ್ಯಾನಿಲಯವೋ, ಸಂಸ್ಕೃತ ವಿಶ್ವವಿದ್ಯಾನಿಲಯವೋ ಇವುಗಳಿಗೆಲ್ಲ ಕ್ಯಾಂಪಸ್ ಇಲ್ಲದಿದ್ದರೂ ನಡೆಯಬಹುದು. ಆದರೆ ನಮ್ಮ ದೇಶದ ಕೃಷಿ ವಿಶ್ವವಿದ್ಯಾನಿಲಯಗಳನ್ನೊಮ್ಮೆ ನೋಡಿ. ನೂರಾರು ಎಕ್ರೆಯ ವಿಸ್ತಾರವಾದ ಕ್ಯಾಂಪಸ್ ಇದೆ, ಎತ್ತರದ ಗೋಡೆಗಳಿವೆ, ಹೊರಗಡೆಯವರು ಒಳಗಡೆ ಸುಲಭವಾಗಿ ಬರದ ಹಾಗೆ ಗೋಡೆ ಮೇಲೆ ಮುಳ್ಳು, ಗಾಜಿನ ಅಡೆತಡೆಗಳಿವೆ. ಸಿ.ಸಿ. ಕ್ಯಾಮರಾಗಳು ಕಾವಲು ಕಾಯುತ್ತವೆ.
ಈ ಆವರಣದ ಒಳಗಡೆ ಇರುವ ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಏನನ್ನು ಕಲಿಯುತ್ತಾರೆ? ಅಲ್ಲಿರುವ ವಿಸ್ತಾರ ಆವರಣದ ಒಳಗಡೆಯ ಮಣ್ಣಿನೊಳಗಡೆ ಅವರ ಒಳಗೊಳ್ಳುವಿಕೆಯೆಷ್ಟು, ಅಲ್ಲಿ ಉಳುಮೆ, ಬಿತ್ತನೆ, ಪೋಷಣೆ, ಗೊಬ್ಬರ, ನೀರಾವರಿ, ಧಾನ್ಯ ಸಂಗ್ರಹ ಇತ್ಯಾದಿಗಳಲ್ಲಿ ಮಕ್ಕಳ ಪಾಲುಗಾರಿಕೆಯೆಷ್ಟು ಎಂಬಿತ್ಯಾದಿ ಕುತೂಹಲಗಳು ಅತ್ಯಂತ ಸಹಜ. ಇಲ್ಲಿಯ ಆಳೆತ್ತರದ ಗೋಡೆಯನ್ನು ದಾಟಿ ಹೊರಗಡೆಯ ರೈತರು ಒಳಗಡೆ ಬರಬಾರದೇ? ಒಳಗಡೆಯ ಮಕ್ಕಳು ಹೊರಗಡೆ ಹೋಗಬಾರದೇ? ಒಬ್ಬರನ್ನೊಬ್ಬರು ತಡೆಯುವ ಕೃಷಿ ವಿಶ್ವವಿದ್ಯಾನಿಲಯಗಳ ಗೋಡೆಗಳು ಒಂದು ರೂಪಕದ ಹಾಗೆ ನನ್ನನ್ನು ಕಾಡಿದ್ದೂ ಇದೆ.
ಇಲ್ಲಿ ಪಾಠ ಮಾಡುವ ಮೇಷ್ಟ್ರುಗಳೂ ಕೃಷಿ ಮೂಲದವರಲ್ಲವೇ? ವಿದ್ಯಾರ್ಥಿಗಳು ಕೂಡ ಅನ್ನ ಬೆಳೆಸುವವರ ಮಕ್ಕಳಲ್ಲವೇ? ಇವರಿಬ್ಬರೂ ತಿನ್ನಲು ರೈತ ಮೂಲದ ಅನ್ನವನ್ನಷ್ಟೇ ಬಳಸುವವರಲ್ಲವೇ... ಹೀಗೆ ನನ್ನೊಳಗೆ ಅನೇಕ ಸಂದೇಹ ತಕರಾರು ಮೂಡುವುದಕ್ಕೆ ಬಹು ಮುಖ್ಯ ಕಾರಣ ಈ ದೇಶದ ಇಷ್ಟೊಂದು ಕೃಷಿ ವಿಶ್ವವಿದ್ಯಾನಿಲಯ -ಅಧ್ಯಯನ ಕೇಂದ್ರಗಳಲ್ಲಿ ಓದುವ ಕೃಷಿ ಪದವಿಗಳನ್ನು ಮುಗಿಸುವ, ಪದವೀಧರರು ವಾಪಸ್ ತಮ್ಮ ತೋಟಗಳಿಗೆ ಹಳ್ಳಿಗಳಿಗೆ ಬರದಿರುವುದೇ ಆಗಿದೆ. ಬಂದರೂ ಆ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ!
ಇದನ್ನೇ ಮೊನ್ನೆ ಪ್ರಶ್ನೆ ಮಾಡಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕಾ ಅರಣ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಒಂದಷ್ಟು ಮಕ್ಕಳಿಗೆ ಕೇಳಿದ್ದೆ. ‘‘ಸರ್ ನಾನು ಮತ್ತೆ ನಮ್ಮ ತಂದೆಯವರು ಕಟ್ಟಿದ ಹೊಲ ತೋಟಕ್ಕೆ ಬಂದೇ ಬರ್ತೇನೆ’’ ಎಂಬ ಆ ವಿದ್ಯಾರ್ಥಿಗಳ ಉತ್ತರ ಕೇಳಿ ತುಂಬಾ ಖುಷಿಯಾಯಿತು. ಆ ಭಾವನೆ ಬರೀ ಬಾಯಿಯದಲ್ಲ, ಆ ವಿದ್ಯಾರ್ಥಿಯ ಹೃದಯದ್ದು. ಅದಕ್ಕೊಂದು ಬಲವಾದ ಕಾರಣವೂ ಇತ್ತು. ಆ ಕೃಷಿ ವಿಶ್ವವಿದ್ಯಾನಿಲಯದ ಮಕ್ಕಳ ಮನಸ್ಸು ನೆಲ ಸಂಸ್ಕೃತಿ, ಪರಂಪರೆಯ ಕಡೆ ವಾಲುವುದಕ್ಕೆ, ಹಸಿರು ಮನಸ್ಸು ತುಂಬಿಕೊಳ್ಳುವುದಕ್ಕೆ ಭಾಗಶಃ ಅಲ್ಲಿ ಪಾಠ ಮಾಡುತ್ತಿದ್ದ ಉಪನ್ಯಾಸಕರೇ ಕಾರಣರಾಗಿದ್ದರು. ಅಂಥ ಪರಿಣಾಮಕಾರಿ ಸನ್ನಿವೇಶ ಸಂದರ್ಭವೊಂದರಲ್ಲಿ ನಾನೂ ಪಾಲುದಾರನಾದೇನೆಂಬ ಖುಷಿ ನನ್ನದು.
ಈಗ ಆ ಕೃಷಿ ವಿಶ್ವವಿದ್ಯಾನಿಲಯದ ಕುಲ ಸಚಿವರಾಗಿರುವ ಡಾ. ಕೆ.ಸಿ. ಶಶಿಧರ್ ಅವರು ಸಾಹಿತ್ಯಪ್ರಿಯರು, ಸ್ವತಃ ಲೇಖಕರು, ಕೃಷಿ ಪುಸ್ತಕಗಳ ಸಂಪಾದಕರು, ಪಠ್ಯ ಸಂರಚಕರು. ನಾಲ್ಕೈದು ವರ್ಷಗಳ ಹಿಂದೆ ಕರ್ನಾಟಕ ಕೃಷಿ ವಿಶ್ವವಿದ್ಯಾನಿಲಯಗಳ ಪದವಿ ಕನ್ನಡ ಪಠ್ಯಪುಸ್ತಕಗಳ ಬಗ್ಗೆ ನಾನೇ ಬರೆದಿದ್ದೆ. ಹಿಂಗಾರು ಮತ್ತು ಮುಂಗಾರು ಅನ್ನುವ ಎರಡು ಪಠ್ಯಪುಸ್ತಕಗಳ ಒಳಗಡೆ ಕನ್ನಡ ಸಾಹಿತಿಗಳ ನೆಲ ಪರಿಸರ ಬೇಸಾಯಪರ ಕಥೆ, ಕವನ, ಪ್ರಬಂಧಗಳು ಒಟ್ಟಾಗಿದ್ದವು. ಇಂತಹ ಪುಸ್ತಕವನ್ನು ಸಂಪಾದಿಸಿದವರೇ ಈ ಶಶಿಧರ್. ಇದೀಗ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾನಿಲಯದ ಸುಮಾರು ೬೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ‘ಕುವೆಂಪು ಸಾಹಿತ್ಯದಲ್ಲಿ ಕೃಷಿ’ ಎಂಬ ಪರಿಕಲ್ಪನೆಯಲ್ಲಿ ಅವರು ಎರಡು ದಿವಸ ಕಾಲ ಕುಪ್ಪಳ್ಳಿಯಲ್ಲಿ ಕೂರಿಸಿದ್ದರು. ಕುಲಸಚಿವರು ಆಗಿರುವ ಕೆ. ಶಶಿಧರ್ ಮಕ್ಕಳೊಳಗಡೆ ಕೋರ್ಸ್, ಪದವಿ, ಉದ್ಯೋಗ, ವೇತನ, ಶ್ರೀಮಂತ ಬದುಕು ತುಂಬುವ ಜೊತೆಗೆ ಅನ್ನದಾರಿಯ ಅನಂತ ಸಿರಿವಂತಿಕೆಯನ್ನು ತುಂಬುವ ಕೆಲಸವನ್ನು ಮಾಡಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯಗಳೇ ಇರಲಿ, ನಮ್ಮ ದೇಶದ ಇತರ ತಾಂತ್ರಿಕ ವೈದ್ಯಕೀಯ ವಿಶ್ವವಿದ್ಯಾನಿಲಯಗಳೇ ಇರಲಿ ಅಲ್ಲಿ ಶಶಿಧರ್ ಅವರಂಥ ಸಾಹಿತ್ಯ, ಸಂಸ್ಕೃತಿ, ನೆಲ ಪ್ರೀತಿಯ ಉಪನ್ಯಾಸಕರಿದ್ದಾಗ ವಿಜ್ಞಾನ, ತಂತ್ರಜ್ಞಾನ ಓದಿದ ಮಕ್ಕಳು ಕೂಡ ಸುಸಂಸ್ಕೃತಿಯ ಬಗ್ಗೆ ಯೋಚನೆ ಮಾಡಬಲ್ಲರು ಎಂಬುದಕ್ಕೆ ಈ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮತ್ತು ಅಧ್ಯಾಪಕ ಕುಟುಂಬವೇ ಸಾಕ್ಷಿ.
ನನಗೆ ಗೊತ್ತಿರುವ ಹಾಗೆ ಈ ದೇಶದ ಕೃಷಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಒಬ್ಬ ಕವಿಯ ಸಾಹಿತ್ಯದ ಒಳಗಡೆ ಇರುವ ಪರಿಸರ, ಕೃಷಿ-ಗ್ರಾಮ ಜೀವನ, ಸುಸ್ಥಿರ ಬದುಕು ಅವುಗಳ ಉದ್ದೇಶ ಆಶಯಗಳನ್ನು ಇಟ್ಟುಕೊಂಡು ಶಿಬಿರವನ್ನು ಆಯೋಜಿಸಿದ್ದು ಇದು ಮೊದಲನೆಯ ಸಲ ಇರಬಹುದು. ಕೃಷಿ ವಿಶ್ವವಿದ್ಯಾನಿಲಯದ ಮಕ್ಕಳು ಪ್ರವಾಸ ಅಧ್ಯಯನದ ಉದ್ದೇಶದಿಂದ ಮಹಾನಗರದ ದಿಕ್ಕಿನ ಮೋಜು ತಾಣಗಳಲ್ಲಿ ಲೀನವಾಗಬೇಕಾದ ಹೊತ್ತು ಇಷ್ಟೊಂದು ಮಕ್ಕಳನ್ನು ಕುಪ್ಪಳ್ಳಿಯ ಆವರಣದಲ್ಲಿ ಕವಿಮನೆ, ಕವಿಶೈಲ, ಕುವೆಂಪು ಸಾಕ್ಷ್ಯ ಚಿತ್ರ, ನವಿಲುಕಲ್ಲಿನ ಸೂರ್ಯೋದಯ, ಕುವೆಂಪು ರಾವಣ ಎನ್ನುವ ನಾಟಕ, ಕುವೆಂಪು ಸಾಹಿತ್ಯದಲ್ಲಿ ಕೃಷಿ ಪರಿಸರವನ್ನು ಶೋಧಿಸುವ ನಾಲ್ಕೈದು ಉಪನ್ಯಾಸಗಳ ಚೌಕಟ್ಟಿನಲ್ಲಿ ಒಳಗೊಳ್ಳುವ ಹಾಗೆ ಮಾಡಿದ್ದು ಅಭಿನಂದನೀಯವೇ ಸರಿ. ಕುವೆಂಪು ಸಾಹಿತ್ಯದ ಒಳಗಡೆ ಬರುವ ರೈತ ಮನಸ್ಸಿನ ಹೆಜ್ಜೆ ಗುರುತುಗಳ ಮೇಲೆಯೇ ಅಷ್ಟೂ ಮಕ್ಕಳು ಎರಡು ದಿವಸ ನಡೆದದ್ದು ತಿಳಿದದ್ದು ಅಪರೂಪವೇ ಸರಿ. ನನಗೆ ಗೊತ್ತಿರುವ ಹಾಗೆ ಈ ದೇಶದ ಯಾವುದೇ ಕೃಷಿ ವಿಶ್ವವಿದ್ಯಾನಿಲಯಗಳು ಇಂಥದ್ದೊಂದು ಕಾರ್ಯಕ್ರಮವನ್ನು ಈ ಮುಂಚೆ ಬಹುಶಃ ಆಯೋಜಿಸಿರಲಿಕ್ಕಿಲ್ಲ.
ಸಹಜವಾಗಿಯೇ ಕೃಷಿ ವಿಶ್ವವಿದ್ಯಾನಿಲಯದ ಪಠ್ಯ ವಿನ್ಯಾಸವು ವೈದ್ಯಕೀಯ ಶಾಸ್ತ್ರದ ಪಠ್ಯಕ್ರಮವನ್ನೇ ಹೋಲುತ್ತವೆ. ಮೆಡಿಕಲ್ ಸೈನ್ಸ್ ಮನುಷ್ಯ ದೇಹದ ಅಂಗಾಂಗಗಳನ್ನು ಅಧ್ಯಯನ ಮಾಡಿದ ಹಾಗೆ ಕೃಷಿ ವಿಜ್ಞಾನ ಕೂಡ ಬೀಜ, ಸಸ್ಯ, ಮಣ್ಣು, ನೀರಾವರಿ, ಪೋಷಣೆ, ಬೀಜ ಸಂರಕ್ಷಣೆ ಇತ್ಯಾದಿಗಳನ್ನು ಎಳೆ ಎಳೆಯಾಗಿ ತರ್ಕಬದ್ಧವಾಗಿ ಅಧ್ಯಯನ ಮಾಡುತ್ತದೆ. ಅದಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ತಂಡೋಪತಂಡವಾಗಿ ವಿಂಗಡಿಸಿ ಗ್ರಾಮಗಳ ಕೃಷಿ ಸಮೀಕ್ಷೆಗಳನ್ನು ಮಾಡಲು ನಿಯೋಜಿಸುತ್ತದೆ. ಹಳ್ಳಿಯಲ್ಲಿ ಕೃಷಿ ಮಾಡುವ ಹಿರಿಯ ರೈತರ ಆಲೋಚನೆಗಳನ್ನು ದಾಖಲಿಸುವ, ಸಮೀಕರಿಸುವ ಕೆಲಸವನ್ನು ವಿದ್ಯಾರ್ಥಿಗಳಲ್ಲಿ ಮಾಡಲೇಬೇಕು. ಪ್ರಾಯೋಗಿಕ ಮತ್ತು ತಾತ್ವಿಕ ಅಧ್ಯಯನಗಳ ಸಮರ್ಪಕ ಸಂಯೋಜನೆಯ ಮೂಲಕ ಪದವಿಯ ಪಾಠಗಳಿವೆ. ತರಗತಿಯ ಒಳಗಡೆ ಎಷ್ಟು ಕಲಿಯುತ್ತಾರೋ ಅಷ್ಟೇ ಅವರು ಹೊರಗಡೆಯೂ ಕಲಿಯುತ್ತಾರೆ.
ಇಷ್ಟಾದರೂ ಕೃಷಿ ವಿಶ್ವವಿದ್ಯಾನಿಲಯದ ಬಹಳಷ್ಟು ಪದವೀಧರರು ಪದವಿಯ ಆನಂತರ ಯಾವುದೋ ಬೀಜದ, ಗೊಬ್ಬರದ, ಕೀಟನಾಶಕಗಳ ಉತ್ಪಾದನೆ, ಮಾರಾಟ ಕೇಂದ್ರಗಳಲ್ಲಿ ಉದ್ಯೋಗಸ್ಥರಾಗುವುದನ್ನು ನಾನು ಕಂಡಿದ್ದೇನೆ. ಇವರೆಲ್ಲ ಕೃಷಿ ತಜ್ಞರಾಗುತ್ತಾರೆಯೇ ಹೊರತು ಕೃಷಿಕರಾಗಿ ವಾಪಸ್ ನೆಲಕ್ಕೆ ಬರುವುದನ್ನು ನಾನು ಗಮನಿಸಿದ್ದು ಕಡಿಮೆ. ಇದಕ್ಕೆ ಕಾರಣ ಅವರ ಕೋರ್ಸಿನ ಒಳಗಡೆ ಗ್ರಾಮೀಣ ಬದುಕಿನ ಕಷ್ಟ ಸುಖವನ್ನು ಬಿತ್ತುವ ಸ್ವಾವಲಂಬಿ ಬದುಕನ್ನು ಸಾಕ್ಷೀಕರಿಸುವ ಅಥವಾ ಹಳ್ಳಿಯ ಪಾರಂಪರಿಕ ತನ್ನದೇ ಮನೆಯ ಮನಸ್ಸಿನ ಹಿರಿಯರ ವೃತ್ತಿ ಬದುಕನ್ನು ಮುಂದುವರಿಸುವ ನೆಲನ್ಯಾಯದ ಕಡೆಗೆ ಅಂತಹ ಬದುಕಿನ ಘನತೆಯ ಬಗೆಗೆ ವಿವರಿಸುವ ಪಠ್ಯಗಳು, ಪ್ರಾಧ್ಯಾಪಕರು ಇಲ್ಲದಿರುವುದೇ ಆಗಿದೆ. ಬಹಳಷ್ಟು ಸಂದರ್ಭದಲ್ಲಿ ಪಠ್ಯಗಳು ಏನೇ ಯಾವುದನ್ನೇ ಹೇಳಲಿ ಅದನ್ನು ತರಗತಿಯ ಒಳಗಡೆ ನಿರ್ವಚಿಸುವ, ಬೋಧಿಸುವ ಉಪನ್ಯಾಸಕರ ಮನಸ್ಥಿತಿಯನ್ನು ಅವಲಂಬಿಸಿಕೊಂಡಿರುತ್ತದೆ. ಆದರೆ ಶಿವಮೊಗ್ಗದ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಕುವೆಂಪನ್ನು ಇಟ್ಟುಕೊಂಡು ಹಳ್ಳಿಯ ಸುಖ ದುಃಖಗಳನ್ನು ಕೃಷಿ ಬೇರಿನ ಜೊತೆಗೆ ಸಮ್ಮಿಲಿತಗೊಳಿಸಿ ನಿರ್ವಹಿಸಿದ್ದು ಗಮನೀಯ ಸಂಗತಿ.
ಹಾಗೆ ನೋಡಿದರೆ ಕನ್ನಡದಲ್ಲಿ ಪಂಪನಿಂದ ಹಿಡಿದು ಕುವೆಂಪುವರೆಗೆ ಕೃಷಿಯನ್ನೇ ಪ್ರಧಾನವಾಗಿ ಇಟ್ಟುಕೊಂಡು ಬರೆಯಲಾದ ಪರಿಪೂರ್ಣ ಮಹತ್ವದ ಹೊತ್ತಗೆಯೊಂದು ಕಾಣಿಸುವುದಿಲ್ಲ. ದೇವರು, ಭಕ್ತಿ, ರಾಜಪ್ರಭುತ್ವ, ಅರಸೊತ್ತಿಗೆ, ಆಡಳಿತಾಂಗ, ಕುಟುಂಬ, ಯುದ್ಧ, ಬೇಟೆ, ದಾಂಪತ್ಯ, ಅಡುಗೆ, ಕಲೆ, ಸಂಗೀತ, ಮನುಷ್ಯ ಸಂಬಂಧ... ಹೀಗೆ ನೂರಾರು ವಿಷಯಗಳ ಬಗ್ಗೆ ಗಂಭೀರವಾಗಿ ಮತ್ತು ವಿಸ್ತಾರವಾಗಿ ಬರೆಯಲಾದ ಕೃತಿಗಳು ಲಭ್ಯವಾಗುತ್ತವೆ. ಹೊರತು ಕೃಷಿಯನ್ನೇ ಪ್ರಧಾನವಾಗಿಟ್ಟುಕೊಂಡು ಬರೆಯಲಾದ ಅಥವಾ ವಿಸ್ತಾರವಾಗಿ ಉಲ್ಲೇಖಗೊಂಡ ಮಹಾ ಕಾವ್ಯಗಳು ಬಹಳ ಕಡಿಮೆ. ಕೃಷಿ ಪ್ರದೀಪಿಕೆಯೇ ಮೊದಲ ರೈತ ಉಪಯೋಗಿ ಕೃತಿಯಾಗಿ ಕಾಣಿಸಿಕೊಳ್ಳುತ್ತದೆ. ನೇಗಿಲ ಮೇಲೆಯೇ ನಿಂತಿದೆ ಧರ್ಮ... ಎನ್ನುವ ಕುವೆಂಪು ಅವರೇ ಈ ನೆಲದ ರೈತರನ್ನು ಮೊದಲ ಬಾರಿಗೆ ಅನ್ನದಾತ, ಯೋಗಿ ಎಂದು ಕರೆದವರು. ಅವರ ಕಾದಂಬರಿ, ಪ್ರಬಂಧ, ಆತ್ಮಕಥೆಗಳಲ್ಲಿ ಬಂದು ಹೋಗುವ ನೂರಾರು ಪಾತ್ರಗಳ ಒಳಗಡೆ ಸಾಂಪ್ರದಾಯಿಕ ಕೃಷಿ ಜ್ಞಾನ ಮಡು ಕಟ್ಟಿದೆ. ಮಣ್ಣು, ಮಳೆ, ಬೀಜ ಬಿತ್ತನೆ, ಕೊಯ್ಲು, ಹಬ್ಬ ಆಚರಣೆ, ಭೂಮಿ ಸಂರಕ್ಷಣೆ, ಪೂಜೆ, ಕೆಸರು, ಬೇರು ಸಂಬಂಧಿಸಿದ ನೂರಾರು ಸೂಕ್ಷ್ಮಗಳು ಅವರ ಕೃತಿಗಳಲ್ಲಿ ಕಾಣಿಸುತ್ತವೆ. ಅವೆಲ್ಲವನ್ನು ಕೃಷಿ ವಿಜ್ಞಾನದ ಮಕ್ಕಳೆದುರು ಸಾದರ ಪಡಿಸುವ ಅವಕಾಶ ನನ್ನಂಥವನಿಗೆ ಒದಗಿ ಬಂದದ್ದು ಅದೃಷ್ಟವೇ ಸರಿ.