ಅನುವಾದಕ್ಕೆ ಸಿಕ್ಕದ ಕುಮಾರವ್ಯಾಸ

ಭೂಕೈಲಾಸದ ಪ್ರಸಂಗದಂತೆ ಗಿರಿಯನೆತ್ತಲು ಹೋಗಿ ಕೈಯನ್ನು ಸಿಕ್ಕಿಸಿಕೊಳ್ಳುವುದೂ ಕಷ್ಟ. ಆದರೆ ಇಲ್ಲಿ ಕಾಣಿಸಿದ ಹಿರಿ-ಕಿರಿ ವಿದ್ವಾಂಸರ ಒಳಗೊಳ್ಳುವಿಕೆ ‘too many cooks’ ಅಲ್ಲದಿದ್ದರೂ ನಿರೀಕ್ಷಿತ ಸಾರ್ಥಕವಾಗಲಿಲ್ಲವೆಂಬುದೇ ನನ್ನ ಆತಂಕಕ್ಕೆ ಕಾರಣ. ಇಂಗ್ಲಿಷಿನಲ್ಲಿ ‘glorious failure’ ಎಂಬ ನುಡಿಯಿದೆ. ಈ ಅನುವಾದವೂ ಅದಕ್ಕೆ ಭಾಜನವಾಗಬಹುದು. ಆದರೆ ಇದಕ್ಕೆ ಯೋಜಕರನ್ನು, ಅನುವಾದಕರನ್ನು ಹೊಣೆಯಾಗಿಸಲಾಗದು. ಅದು ಕುಮಾರವ್ಯಾಸನ ಅನನ್ಯತೆ. ಆತ ಅನುವಾದಕ್ಕೆ ಅನುವಾಗದ, ಅನುವಾದದ ಮಾಯೆಗೆ ಸಿಕ್ಕದ ಅಲ್ಲಮ. ಕುಮಾರವ್ಯಾಸನು ಅನುವಾದಕ್ಕೆ ಅನುಗ್ರಹ ನೀಡಲು ಅನುವಾದ ಎಂಬ ಸ್ಥಿತಿ ಬರುವುದು ಕನ್ನಡ ಸಾಹಿತ್ಯಕ್ಕೆ ಮತ್ತು ಭಾಷೆಗೆ ಹಾಗೂ ವಿಶ್ವ ಸಾಹಿತ್ಯಕ್ಕೆ, ಭಾಷೆಗೆ ಒಳಿತು. ಆ ಕ್ಷಣಕ್ಕೆ ಆಸೆಪಡೋಣ.

Update: 2024-03-07 04:56 GMT

ಕುಮಾರವ್ಯಾಸ ಭಾರತವೆಂದೇ ಪ್ರಚಲಿತವಿರುವ (ಗದುಗಿನ ಕವಿ ನಾರಣಪ್ಪನ) ಕರ್ನಾಟ ಭಾರತ ಕಥಾಮಂಜರಿಯ ಆಂಗ್ಲ ಅನುವಾದದ ಮೊದಲ ಸಂಪುಟ ಪ್ರಕಟವಾಗಿದೆ. ಶೆಲ್ಡನ್ ಪೊಲ್ಲಾಕ್ ಮುಖ್ಯ ಸಂಪಾದಕರಾಗಿರುವ, ಈ ಸಂಪುಟವನ್ನು ಸಂಪಾದಿಸಿರುವವರು ಎಸ್.ಎನ್. ಶ್ರೀಧರ್. ಅನುವಾದಕರು ಸಿ.ಎನ್. ರಾಮಚಂದ್ರನ್ ಮತ್ತು ನಾರಾಯಣ ಹೆಗಡೆ. ಗಂಭೀರ ಮತ್ತು ಆಕರ್ಷಕ ಹೊದಿಕೆಯನ್ನೂ ಮುದ್ರಣ ವಿನ್ಯಾಸವನ್ನೂ ಹೊಂದಿರುವ ೪೦+೬೮೫ ಪುಟಗಳ ಈ ಕೃತಿ ವಿಶೇಷ ಕಾಗದದಲ್ಲಿ ಮುದ್ರಣಗೊಂಡು ತನ್ನ ಗಾತ್ರಕ್ಕೆ ತುಂಬ ಹಗುರವಿದೆ. ಇದಿಷ್ಟು ಕೃತಿಯ ಬಾಹ್ಯ ಚಿತ್ರಣ.

ವೈವಿಧ್ಯದಲ್ಲಿ ಏಕತೆಯು ಭಾರತದಲ್ಲಿ ಪ್ರಕೃತಿ ಮಾತ್ರವಲ್ಲ, ಧರ್ಮ, ಮತ, ಜಾತಿ, ಜನಾಂಗ, ಭಾಷೆ, ಸಂಸ್ಕೃತಿ, ಸಾಹಿತ್ಯ ಹೀಗೆ ಬದುಕಿನ ಎಲ್ಲ ಮಜಲುಗಳಲ್ಲಿ, ಆಯಾಮಗಳಲ್ಲಿ ಕಾಣುವಂತಹದ್ದು. ಇಷ್ಟೊಂದು ವೈವಿಧ್ಯವಿರುವ ದೇಶಗಳು ವಿಶ್ವದಲ್ಲಿ ಇನ್ನೆಲ್ಲೂ ಇಲ್ಲವೆನ್ನುವಷ್ಟು ವಿರಳ. ವಾದಕ್ಕಾಗಿ ಉದಾಹರಿಸಿದರೂ ಅದು ವಾಸ್ತವವಾಗದು. ಯಾವುದೇ ಭಾರತೀಯ ಭಾಷೆಯ ಸಾಹಿತ್ಯವನ್ನು ಹೊರದೇಶೀಯರಿಗೆ, ಪರಭಾಷಿಕರಿಗೆ ಸವಿಯಲು ಆಂಗ್ಲ ಅನುವಾದದ ಅಗತ್ಯವಿತ್ತು. ಟಾಗೋರರ ಗೀತಾಂಜಲಿ ನೊಬೆಲ್ ಪ್ರಶಸ್ತಿ ಗಳಿಸಿದ್ದು, ವಿಶ್ವಮಾನ್ಯವಾದದ್ದು ಯೇಟ್ಸ್ನ ಆಂಗ್ಲ ಅನುವಾದ ಮತ್ತು ವಾಚಿಕೆಯ ಮೂಲಕ. ಇತರ ಭಾರತೀಯ ಭಾಷೆಗಳ ಸಾಹಿತ್ಯವನ್ನು ಭಾರತೀಯರೇ ಓದಿದ್ದು ಆಂಗ್ಲ ಅನುವಾದಗಳ ಮತ್ತು ಅಲ್ಲಿಂದ ಆಯಾಯ ಭಾರತೀಯ ಭಾಷೆಗಳ ಅನುವಾದಗಳ ಮೂಲಕ. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ನೇರವಾಗಿ ಒಂದು ಭಾರತೀಯ ಭಾಷೆಯಿಂದ ಇನ್ನೊಂದು ಭಾರತೀಯ ಭಾಷೆಗೆ ಅನುವಾದ ಪ್ರಸಂಗಗಳಿವೆ. ಇಂಗ್ಲಿಷಿನ ಹೊರತಾಗಿ ಭಾರತೀಯ ಭಾಷೆಗಳ ಗದ್ಯವನ್ನು ವಿಶ್ವದ ಇತರ ಭಾಷೆಗಳಿಗೆ ಅನುವಾದಿಸಿದ್ದರಿಂದ ಅದನ್ನು ಓದುವವರ ಸಂಖ್ಯೆ ಹೆಚ್ಚಾಯಿತು. ಭಾರತೀಯರು ವಿಶ್ವಸಾಹಿತ್ಯವನ್ನು ಇಂಗ್ಲಿಷ್ ಅನುವಾದದ ಮೂಲಕ ಮತ್ತು ಅಲ್ಲಿಂದ ಭಾರತೀಯ ಭಾಷೆಗಳ ಅನುವಾದದಲ್ಲಿ ಓದಿದ್ದೇ ಹೆಚ್ಚು.

ಕನ್ನಡದ ಕುಮಾರವ್ಯಾಸನನ್ನು ಅನುವಾದದ ಮೂಲಕ ಸಾಗರೋಲ್ಲಂಘನಗೊಳಿಸಲು ಅಥವಾ ವಿಶ್ವಾತ್ಮಕಗೊಳಿಸಲು ಪ್ರಾಯಃ ಇದೇ ಮೊದಲ ಪ್ರಯತ್ನವಿರಬಹುದು. ಆ ದೃಷ್ಟಿಯಿಂದ ಈ ಕೃತಿಯ ಪಯಣಕ್ಕೆ ಪ್ರಯತ್ನಿಸಿದ ಎಲ್ಲ ಮಹನೀಯರೂ ಅಭಿನಂದನಾರ್ಹರು.

ಕೃತಿಯ ಕುರಿತು ಮುನ್ನುಡಿ-ಹಿನ್ನುಡಿಯ ಬರಹಗಳು ಕೃತಿಯ ಅಗತ್ಯಕ್ಕೂ ಮಹತ್ವಕ್ಕೂ ಅಡಿಗಲ್ಲುಗಳಂತೆಯೂ ದಿಕ್ಸೂಚಿಯಂತೆಯೂ ಇವೆ. ಸಮರ್ಥನೆಯ ರೂಪದಲ್ಲಿರುವ ಇವನ್ನು ವಸ್ತುನಿಷ್ಠವಾಗಿ ಓದುಗರು ಗ್ರಹಿಸಬಹುದು. ಪ್ರಸ್ತಾವನೆಯಲ್ಲಿ ಕೃತಿ, ಕರ್ತೃ ಮತ್ತು ಒಟ್ಟು ಸಂಬಂಧಿತ ಸಾಹಿತ್ಯ ಮತ್ತು ವಿಚಾರಧಾರೆಯ ವಿವರಗಳಿವೆ; ಪಠ್ಯ ಮತ್ತು ಅನುವಾದದ ಕುರಿತು ಒಂದು ಪುಟ್ಟ ಟಿಪ್ಪಣಿಯಿದೆ; ಕನ್ನಡದಲ್ಲಿ ಹರ್ಮನ್ ಮೋಂಗ್ಲಿಂಗ್ ಅವರಿಂದ ಸಂಪಾದಿತವಾದ ಭಾಗಗಳಿಂದ ತೀರ ಇತ್ತೀಚೆಗಿನ ಸಂಪಾದನೆಯವರೆಗೂ ಈ ಕೃತಿಯ ಕನ್ನಡ ಪಠ್ಯದ ಇತಿಹಾಸವನ್ನು ಉಲ್ಲೇಖಿಸಲಾಗಿದೆ; ಹಾಗೆಯೇ ಕೃತಿಯ ಆಯ್ದ ಭಾಗಗಳ ಕೆಲವು ಅನುವಾದಗಳನ್ನೂ ಉಲ್ಲೇಖಿಸಲಾಗಿದೆ. (ಇವನ್ನು ನಾನು ಗಮನಿಸಿಲ್ಲ; ಇವುಗಳನ್ನು ಅಥವಾ ಇವುಗಳ ಕೆಲವು ಮಾದರಿಗಳನ್ನು ನೀಡಿ ಅವಕ್ಕೂ ಪ್ರಕೃತ ಅನುವಾದಕ್ಕೂ ಇರುವ ಭಿನ್ನತೆಯನ್ನು ಹೇಳಿದ್ದರೆ ತೌಲನಿಕ ಅಧ್ಯಯನಕ್ಕೆ ಅನುಕೂಲವಾಗುತ್ತಿತ್ತು.) ಕೊನೆಯಲ್ಲಿ ಕೃತಿಯ ಕುರಿತು ಬರೆಯುವಾಗ ಈ ಮತ್ತು ಇಂತಹ ಪ್ರಕಟಣೆಗಳ ಉದ್ದೇಶವೇ ‘ವೈವಿಧ್ಯದಲ್ಲಿ ಏಕತೆ’ಯ ಚಿಂತನೆಯಾಗಿದ್ದು ಪ್ರತಿಯೊಂದು ಭಾಷೆಯ ಅಸ್ಮಿತೆಯನ್ನು ಸಂಭ್ರಮಿಸುವುದರೊಂದಿಗೇ ಅದನ್ನು ವಿಶ್ವಾತ್ಮಕತೆಯ (ಭಾಷೆ/ಸಂಸ್ಕೃತಿಯ) ಭಾಗವಾಗಿ ಗುರುತಿಸುವುದು; ಈ ಸಾಹಸದಲ್ಲಿ ಪರಂಪರೆಯನ್ನು ಮುಂದುವರಿಸುವುದರೊಂದಿಗೇ ಪ್ರಾಯೋಗಿಕ ಅಂಶಗಳನ್ನು ಕೈಗೆತ್ತಿಕೊಳ್ಳುವುದು. ಮಾಸ್ತಿ ಮತ್ತು ಕುವೆಂಪು ಅವರು ಸಂಪಾದಿಸಿದ ಪಠ್ಯವನ್ನು ತಾವು ಅನುಸರಿಸಿದ್ದೇವೆಂದು ಯೋಜಕರು ಹೇಳಿದ್ದಾರೆ.

ಕನ್ನಡದಲ್ಲಿ ಭಾಮಿನಿ ಷಟ್ಪದಿ ಛಂದಸ್ಸಿನಲ್ಲಿ ಬಂದ ಕಾವ್ಯ ಅನೇಕ: ಕುಮಾರವ್ಯಾಸನ ಕರ್ನಾಟ ಭಾರತ ಕಥಾಮಂಜರಿ, ಕುಮಾರ ವಾಲ್ಮೀಕಿಯ ತೊರವೆ ರಾಮಾಯಣ, ಚಾಮರಸನ ಪ್ರಭುಲಿಂಗ ಲೀಲೆ, ಕವಿರಂಗನ ಕಾವೇರಿ ಮಹಾತ್ಮ್ಯೆ ಮುಂತಾದವು ತಕ್ಷಣಕ್ಕೆ ನೆನಪಿಗೆ ಬರುವಂಥವುಗಳು. ಇವುಗಳಲ್ಲಿ ಸಕಾರಣವಾಗಿಯೇ ಕುಮಾರವ್ಯಾಸನ ಕೃತಿ ಮುಂಚೂಣಿಯಲ್ಲಿದೆ. ಆತ ಆರಿಸಿಕೊಂಡ ಕೃತಿಶಕ್ತಿಯೇ ಅಂಥಾದ್ದು. ಪುರಾಣ ಕೃತಿಯಾಗಿ ವಾಲ್ಮೀಕಿ ರಾಮಾಯಣದಿಂದ ತೊರವೆ ರಾಮಾಯಣದವರೆಗೆ ಕಥಾವಸ್ತುವೇ ರಾಮಭಕ್ತಿಯಿಂದ ಪ್ರೇರಿತವಾದರೆ, ಭಾಗವತವು ಕೃಷ್ಣಭಕ್ತಿಯಿಂದ ಪ್ರೇರಿತ. ಮಹಾಭಾರತ ಲೌಕಿಕದ ಕಥೆ. ಕೃಷ್ಣ ಬರುವ ಮುನ್ನವೂ ಕಥೆಯಿದೆ; ಕೃಷ್ಣ ಹೋದ ಬಳಿಕವೂ ಕಥೆಯಿದೆ. ತನ್ನ ಕಥಾಹಂದರದಿಂದಲೇ ಅಸಂಖ್ಯ ಓದುಗರನ್ನೂ ಅಭಿಮಾನಿಗಳನ್ನೂ ಹೊಂದಿದ್ದು ಅವರನ್ನೆಲ್ಲ ಬೆನ್ನಲ್ಲಿ ಹೊತ್ತು ನಡೆಯುವ ಶಕ್ತಿಯನ್ನು ಹೊಂದಿದೆ. ಕೃಷ್ಣಭಕ್ತರಿಗೆ ಮಹಾಭಾರತದಿಂದ ಬೇರ್ಪಡಿಸಬಲ್ಲ ಗೀತೆಯಿದೆ; ವಿಷ್ಣು ಸಹಸ್ರನಾಮವಿದೆ. ಪಂಪ ತನ್ನ ಸಮಸ್ತ ಭಾರತ ಸಾರವಾದ ವಿಕ್ರಮಾರ್ಜುನ ವಿಜಯದಲ್ಲಿ ಹೇಳಿದ್ದು ಇದನ್ನೇ: ‘ಬೆಳಗುವೆನಿಲ್ಲಿ ಲೌಕಿಕಮನ್’. ಸರಿಯಾಗಿ ಬದುಕಿದರೆ ಲೌಕಿಕವೂ ಬೆಳಕೇ. ಇಲ್ಲದಿದ್ದರೆ ಬೆಂಕಿ. ಕುಮಾರವ್ಯಾಸ ಇನ್ನೊಂದು ಹೆಜ್ಜೆ ಮುಂದುವರಿದು ಒಂದೆಡೆ ‘ಕೃಷ್ಣಕಥೆ’ಯೆಂದು ಹೇಳಿದನಾದರೂ ಮುಂದೆ ಎಲ್ಲರಿಗೂ ಮೃಷ್ಟಾನ್ನವೆಂಬಂತೆ ‘ಅರಸುಗಳಿಗಿದು ವೀರ ದ್ವಿಜರಿಗೆ| ಪರಮವೇದದ ಸಾರ ಯೋಗೀ|ಶ್ವರರ ತತ್ವವಿಚಾರ ಮಂತ್ರಿಜನಕೆ ಬುದ್ಧಿಗುಣ| ವಿರಹಿಗಳ ಶೃಂಗಾರ ವಿದ್ಯಾ| ಪರಿಣತರಲಂಕಾರ ಕಾವ್ಯಕೆ| ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ|’ ಎಂದು ಬರೆದ. ಕುಮಾರವ್ಯಾಸನನ್ನು, ಆತನ ಕಾವ್ಯದ ಮೂಲಕವೇ ಮೆಚ್ಚಿದವರೆಲ್ಲ ಮೂಗಿನಲ್ಲಿ ಬೆರಳಿಟ್ಟು ತೂಗಿ ತೊನೆದಿದ್ದಾರೆ. ಆತ ಬಳಸಿದ ಭಾಷೆ ಅಪೂರ್ವ. ಆತನ ನುಡಿಗಟ್ಟುಗಳು, ಉಪಮೆಗಳು, ಅಲಂಕಾರಗಳು, ರೂಪಕಗಳು ಅನನ್ಯ.

ಕನ್ನಡವನ್ನು ಇತರ ಭಾಷೆಗೆ ಅನುವಾದಿಸುವುದು ಸುಲಭವಲ್ಲ ಎಂಬ ಅರಿವಿನೊಂದಿಗೇ ಈ ಕೃತಿಯನ್ನು ಕಾಣಬಹುದು. ಅನೇಕ ಬಾರಿ ಅನುವಾದವೆಂಬುದು ಸ್ವತಂತ್ರ ಕೃತಿಗಿಂತಲೂ ಕಷ್ಟಜನ್ಯ. ಅನುವಾದಕ್ಕೆ ಸಿಗುವ ಮೂಲ ಕೃತಿಗಳಿವೆ. ಅವು ಭಾಷಾಂತರದಲ್ಲೂ ತಮ್ಮ ಸತ್ವವನ್ನು ನೀಡಬಲ್ಲವು. ಬಹಳಷ್ಟು ಗದ್ಯ ಕೃತಿಗಳು ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವ ಪದ್ಯಗಳು ಅನುವಾದಿಸಲು ಅಡ್ಡಿಪಡಿಸುವುದಿಲ್ಲ. ಆದರೆ ಕಾವ್ಯವನ್ನು ಅನುವಾದಿಸುವುದು ದೊಡ್ಡ ಸಾಹಸ. ಅದರಲ್ಲಿ ಸೋಲೂ ಪ್ರಶಂಸಾರ್ಹವಾಗುತ್ತದೆ. ಹಳೆಗನ್ನಡದ ಪ್ರಸಿದ್ಧ ಕಾವ್ಯಗಳಲ್ಲಿ ಕಥೆಯಿರುತ್ತದೆ; (ಆತ್ಮಪ್ರಶಂಸೆಯೂ ಸೇರಿದಂತೆ) ಪ್ರಶಂಸೆಗಳಿರುತ್ತವೆ; ಪರಿಣಾಮಕಾರೀ ಭಾಷೆಯಿರುತ್ತದೆ; ಇದನ್ನು ಕನ್ನಡದಲ್ಲಿ ವ್ಯಾಖ್ಯಾನಿಸುವುದೇ ಕಷ್ಟ; ಭಾರತೀಯ ಇತರ ಭಾಷೆಗಳಲ್ಲಿ ತರಂಗಾಂತರಗಳು ಹತ್ತಿರವಿದ್ದಾಗ್ಯೂ ಮೂಲದ ಪ್ರತಿಭೆ ದಕ್ಕುವುದು ಕಷ್ಟ. ಇನ್ನು ಈ ಮಣ್ಣಿಗೆ ಸಂಬಂಧವೇ ಇಲ್ಲದಂತಿರುವ ಭಾರತೀಯೇತರ ಭಾಷೆಗಳಲ್ಲಿ ಹೇಗಿರಬೇಕು? ಇದು ಕುಮಾರವ್ಯಾಸ ಎಂದಲ್ಲ- ಆಧುನಿಕ ಕನ್ನಡದ ಅನೇಕ ಕಾವ್ಯಗಳಿಗೂ ಅನ್ವಯಿಸುತ್ತದೆ. ಸಂಸ್ಕೃತದಿಂದ ಕನ್ನಡಕ್ಕೆ ಪ್ರಭಾವಶಾಲಿಯಾಗಿ ಅನುವಾದಿಸಬಹುದು; ಅನುವಾದಿಸಿದ್ದಾರೆ. ಮೇಘದೂತದ ಒಂದು ಸಾಲು ಬೇಂದ್ರೆಯವರ ಕೈಯಲ್ಲಿ ‘ಕೈ ತಟ್ಟಿ ಮಾಟ ಬಳೆ ಥಾಕಲಾಟ ಥಕಥೈಯ್ಯ ಥಾಟಿನಲ್ಲಿ’ ಎಂಬ ಅನುವಾದ ಮೂಲಕ್ಕೆ ಸಂದ ಗೌರವ ಮತ್ತು ನ್ಯಾಯ; ಹಾಗೆಂದು ಈ ಕನ್ನಡ ರೂಪವನ್ನು ಇಷ್ಟೇ ಶಕ್ತವಾಗಿ ಇಂಗ್ಲಿಷಿನಲ್ಲಿ ಹೇಳಬಹುದೆಂಬ ಬಗ್ಗೆ ನನಗೆ ವಿಶ್ವಾಸವಿಲ್ಲ. ಬೇಂದ್ರೆಯವರ ‘ಬೆಳಗು’ ಕವನವನ್ನು, ಅವರ ಇನ್ನೊಂದು ಕವನದ ‘ಅದಕು ಇದಕು ಎದಕು’ ಎಂಬ ಒಂದೇ ಒಂದು ಸಾಲನ್ನು ಅಷ್ಟೇ ಪರಿಣಾಮಕಾರಿಯಾಗಿ ಪದ್ಯರೂಪದಲ್ಲಿ ಅನುವಾದಿಸುವುದು ಅಸಾಧ್ಯ. ಅಡಿಗರ ಕವನವೊಂದರಲ್ಲಿ ಬರುವ ‘ವಾಲಿಯೂಟದ ತಟ್ಟೆ ತಾರೆ ಟಣಟಣ ಚಿಮ್ಮಿ ಜಾರಿದಳು ಸುಗ್ರೀವನಡುಗೆಮನೆಗೆ’ ಎಂಬ ಅಥವಾ ‘ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆದೊಗಲು’ ಎಂಬ ಸಾಲುಗಳ ಲಯ, ಗೇಯತೆ, ಭಾಷಾಬಳಕೆ, ಪದಗಳ ಉರುಳುವಿಕೆಯು ಸಾಧಿಸುವ ನಾಟ್ಯ, ಭಾವ, ಅರ್ಥವ್ಯಾಪ್ತಿ ಮುಂತಾದ ಕಾವ್ಯಧಾತುಗಳು ಒಟ್ಟಾಗಿ ಪರಸ್ಪರ ಹೊಂದಿಸಿಕೊಂಡು ಇನ್ನೊಂದು ಭಾಷೆಯಲ್ಲಿ ಬರಬಹುದೆಂದು ನನಗನ್ನಿಸುವುದಿಲ್ಲ. (ಉದಾಹರಣೆಗಷ್ಟೇ ಈ ಎರಡು ಕವಿಗಳ ಸ್ಪರ್ಶ; ಕನ್ನಡದ ಇನ್ನೂ ಹಲವಾರು ಕವಿಗಳನ್ನು ಇಂತಹ ಅಧ್ಯಯನಕ್ಕೆ ಬಳಸಿಕೊಳ್ಳಬಹುದು.)

ಹೀಗಿರುವಾಗ ಭಾಮಿನಿ ಷಟ್ಪದಿಯ ಛಂದಸ್ಸಿನಲ್ಲಿ (ಕೃತಿಯಲ್ಲಿ ದ್ವಿತೀಯ ಪ್ರಾಸವೆಂದು ಉಲ್ಲೇಖವಾಗಿರುವ) ದ್ವಿತೀಯಾಕ್ಷರ ಪ್ರಾಸ ದೊಂದಿಗೆ ಭಾಷೆಯ ಮತ್ತು ಕಾವ್ಯದ ಎಲ್ಲ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸಿಕೊಂಡ ಕುಮಾರವ್ಯಾಸನನ್ನು ಇತರ ಭಾಷೆಗಳಲ್ಲಿ ವಿವರಿಸಬಹುದೇ ಹೊರತು ಅನುಸರಿಸಲೂ, ಅನುಕರಿಸಲೂ ಸಾಧ್ಯವಾಗದು. ಇದು ಪಾಂಡಿತ್ಯ-ಪ್ರತಿಭೆ-ಅನುಭವದ ಪ್ರಶ್ನೆಯಲ್ಲ. ಕೃತಿಯೇ ಮೇರುಗಿರಿಯಾಗಿರುವಾಗ ರನ್ನದುಪ್ಪರಿಗೆಯನೇರಿದಂತೆ ಅದನ್ನು ಏರಲು ಸಾಧ್ಯವಾಗದು.

ಅನುವಾದಕರು ಆಯ್ದ ಭಾಗಗಳನ್ನು-ಅಲ್ಲ-ಆಯ್ದ ಪದ್ಯಗಳನ್ನು- ಅನುವಾದಿಸಿದ್ದಾರೆ. ಯೋಜಕರ ಹೇಳಿಕೆಯಂತೆ ಒಟ್ಟು ಅನುವಾದದಲ್ಲಿ ಮೂಲದಲ್ಲಿರುವ 8,400 ಪದ್ಯಗಳ ಪೈಕಿ 2,500 ಪದ್ಯಗಳನ್ನು ಅನುವಾದಿಸುವುದು ಅವರ ಯೋಜನೆ. ಅವರ ಆಯ್ಕೆಯನ್ನು ಪ್ರಶ್ನಿಸಲಾಗದು. ಯಾವುದೇ ಷಟ್ಪದಿಗಳನ್ನು ಆಯ್ಕೆ ಮಾಡಿದ್ದರೂ ಅದು ಎಲ್ಲರಿಗೂ ರುಚಿಸದು. ಲೋಕೋ ಭಿನ್ನ ರುಚಿಃ. ಅವುಗಳ ಯಶಸ್ಸಿನ ಕುರಿತಷ್ಟೇ ಚಿಂತಿಸಬೇಕು. ಅವು ಮಾಡಬಲ್ಲ ಪರಿಣಾಮ ಮತ್ತು ಒಟ್ಟಂದದ ಫಲಿತಾಂಶ ಇವು ಮುಖ್ಯವಾಗಬೇಕು.

ಆದರೆ ಇಲ್ಲಿ ಈಗ ಮೊದಲ ಎರಡು ಪರ್ವಗಳ ಆಯ್ದ ಪದ್ಯಗಳಷ್ಟೇ ಅನುವಾದಗೊಂಡಿವೆ. ಆದಿಪರ್ವದ 950 ಪದ್ಯಗಳ ಪೈಕಿ ಇಲ್ಲಿ 431 ಅನುವಾದಗೊಂಡಿವೆ. ಸಭಾಪರ್ವದಲ್ಲಿ 1,119 ಪದ್ಯಗಳ ಪೈಕಿ 418 ಅನುವಾದಗೊಂಡಿವೆ. ಆದಿಪರ್ವದಲ್ಲಿ ಎಲ್ಲ 20 ಸಂಧಿಗಳೂ ಇದ್ದರೆ, ಸಭಾಪರ್ವದ 16 ಸಂಧಿಗಳ ಪೈಕಿ 3ರಿಂದ 6, 9 ಮತ್ತು 11ನೇ ಸಂಧಿಗಳನ್ನು ಕೈಬಿಡಲಾಗಿದೆ. ಈ ಬಿಟ್ಟುಹೋದ ಸಂಧಿಗಳನ್ನು ನಮೂದಿಸದೆ ಆನಂತರದ ಸಂಧಿಗಳಿಗೆ ಅನುಕ್ರಮ ಸಂಖ್ಯೆ ಹಾಕಲಾಗಿದೆಯಾದ್ದರಿಂದ ಮೂಲದ ಅಧ್ಯಯನವಿಲ್ಲದವರಿಗೆ ಸಭಾ ಪರ್ವದಲ್ಲಿ 16 ಸಂಧಿಗಳಿವೆಯೆಂಬುದೇ ಗೊತ್ತಾಗದು. ಇದು ಮೂಲಕ್ಕೆಸಗಿದ ಅಪಚಾರ. ಕಥನದ ಓಟದ ಅಪೂರ್ಣತೆ ಕಣ್ಣಿಗೆ ರಾಚುವಂತಿದೆ. ಕನ್ನಡ ಕಾವ್ಯವನ್ನು ಓದಿದ ಇಳೆಯ ಜಾಣರಿಗೆ ಇದು ಒಪ್ಪಿತವೇ?

ಕುತೂಹಲಕ್ಕೆ ಕುಮಾರವ್ಯಾಸ ಭಾರತದಲ್ಲಿ ಬರುವ ಒಂದೇ ಒಂದು ಬೆಡಗಿನ ಭಾಮಿನಿ-ಆದಿಪರ್ವದ ಮೊದಲ ಸಂಧಿಯ 23ನೇ ಪದ್ಯ ‘ವೇದಪುರುಷನ ...ಗದುಗಿನ ವೀರನಾರಾಯಣ’ ಹೇಗೆ ಅನುವಾದಗೊಂಡಿದೆಯೆಂಬುದನ್ನು ಹುಡುಕಿದೆ. ವ್ಯಾಖ್ಯಾನಕ್ಕೇ ಸವಾಲಾದ ಈ ಪದ್ಯ ಅನುವಾದಕ್ಕೆ ಆಯ್ಕೆಯಾಗಿಲ್ಲ. ನಿರಾಶೆಯಾಯಿತು.

ಅನುವಾದದ ಹೂರಣವನ್ನು ಈ ತಾಂತ್ರಿಕ ಅಂಶಗಳ ಆಧಾರದಿಂದ ಅಂದರೆ ಸಂಖ್ಯಾಬಲದಿಂದ ಗುರುತಿಸಿಲ್ಲ. ಈ ದೃಷ್ಟಿಯಿಂದ ಅನುವಾದದ ಕೆಲವು ಭಾಗಗಳನ್ನು ಇಲ್ಲಿ ಸಾಣೆಕಲ್ಲಿಗೆ ಹಿಡಿದಿದ್ದೇನೆ:

ಪ್ರಸ್ತಾವನೆಯಲ್ಲಿ ಮಾಡಿದ ಅನುವಾದದಲ್ಲಿ ಕೆಲವು ಆಕ್ಷೇಪಣೆಗಳನ್ನು ಹೇಳಬಹುದು. ಕೀಚಕ ವಧ ‘the killing Of Kichaka’ ಆಗಬಹುದು; ಸರಿ. ಆದರೆ ಊರ್ವಶಿ ಪ್ರಸಂಗ ‘Urvashi episode’ ಆಗದೆ ‘Urvashi’s attempted seduction of Arjuna’ ಅಥವಾ ಕೃಷ್ಣ ಸಂಧಾನ ‘Krishna’s mediation’ ಆಗದೆ ‘Krishna’s embassy’ ಆಗಿದೆ; ಸಭಾಪರ್ವದ ೧೪ನೆಯ ಸಂಧಿ ವಸ್ತ್ರಾಪಹಾರವೆಂದು ಪ್ರಸಿದ್ಧವಾದರೂ ಅದು ನಾಟಕ, ಯಕ್ಷಗಾನದ ರೋಚಕತೆಗಾಗಿ ಮಾತ್ರ. ಅಲ್ಲಿರುವ ಶೀರ್ಷಿಕೆ ಅಥವಾ ಸೂಚನಾ ಪದ್ಯ (ಅರ್ಧ ಭಾಮಿನಿ) ದ್ರೌಪದಿಯ ಪರಿಭವವನ್ನು ಕೃಷ್ಣ ಕಾಯ್ದ ಕಥೆಯನ್ನು ಹೇಳುತ್ತದೆ. ಇಂಗ್ಲಿಷಿನಂತಹ ಬೇರೊಂದು ಅಥವಾ ಅಪರಿಚಿತ ಸಂಸ್ಕೃತಿ-ಭಾಷೆ-ಭಾವ-ಸಂದರ್ಭದಲ್ಲಿ ಓದುವವರಿಗೆ ಇವು ತಪ್ಪು ಸೂಚನೆಗಳನ್ನು ಕೊಡುವುದಿಲ್ಲವೇ? ಗದಾಯುದ್ಧ ಎಂದರೆ ಗದೆಗಳ ಯುದ್ಧವಲ್ಲ. ಭೀಮ ದುರ್ಯೋಧನ ಕಾಳಗ. ಇದನ್ನು ಕುಮಾರವ್ಯಾಸ ‘ಊರುಭಂಗ’ವೆಂಬ ಸುಂದರ ರೂಪಕದೊಂದಿಗೆ ವರ್ಣಿಸುತ್ತಾನೆ. ಇದನ್ನು ‘Battle of the Maces’ ಎಂದು ಅನುವಾದಿಸಿದರೆ ಕುಮಾರವ್ಯಾಸನಿಗೆ ಮಾತ್ರವಲ್ಲ, ಕನ್ನಡ ಕಾವ್ಯಕ್ಕೂ ಭಾಷೆಗೂ ಅಪಚಾರವಾಗದೇ?

ಇರಲಿ; ಇವೂ ಪ್ರಸ್ತಾವಿತ ಮಾತ್ರ. ಮುಖ್ಯ ಕಾವ್ಯಾನುವಾದಕ್ಕೆ ಬಂದರೆ ಅಲ್ಲಿ ಕನ್ನಡದ ಕಾವ್ಯಛಂದಸ್ಸನ್ನು ಅನುಕರಿಸುವುದಕ್ಕಾಗಿ 6 ಸಾಲುಗಳನ್ನು ಬಳಸಲಾಗಿದೆ. ಆದರೆ ವರ್ಣನೆಯಲ್ಲಿ, ವಿವರಣೆಯಲ್ಲಿ ಹೇಳಬಹುದಾದ್ದನ್ನು ಕಾವ್ಯಮಾರ್ಗವೆಂಬ ಮಾಧ್ಯಮದಲ್ಲಿ ಹೇಳಬಾರದು. ಮೊದಲ ಪದ್ಯವನ್ನು ಗಮನಿಸಿದರೆ ‘ಶ್ರೀವನಿತೆಯರಸನೆ’ ಎಂಬ ಪದವನ್ನು ‘Vishnu, lord of Lakshmi the goddess of wealth’ ಎಂದು ಹೇಳಿದರೆ ಅದು ಅಡಿಟಿಪ್ಪಣಿಯಾದಿತಷ್ಟೇ ಹೊರತು ಕಾವ್ಯಾನುವಾದವಾಗುವುದಿಲ್ಲ. ಅನುವಾದ ಕೊಂಕಣ ಸುತ್ತಿ ಮೈಲಾರ ಎಂದಾಗಬಾರದು. ‘Saintly people like Sanaka’ ಎಂಬುದನ್ನು ‘Saints like Sanaka’ ಎಂಬ ಪದಗಳಲ್ಲಿ ಸುಲಭವಾಗಿ ವರ್ಣಿಸಬಹುದಲ್ಲವೇ? 4ನೇ (ಮೂಲದಲ್ಲಿ 5) ಪದ್ಯದಲ್ಲಿ ‘ಕರಿನಿಭಾಕೃತಿಯೆನಿಪ ವದನದ’ ಇಲ್ಲಿ ‘Whose face is like that of an elephant’ ಎಂದಾಗಿದೆ. ಇದನ್ನು ‘like’ ಎಂಬ ಪದವನ್ನು ಕೈಬಿಟ್ಟಿದ್ದರೆ ಅದು ಕಾವ್ಯಾತ್ಮಕ ಕಲೆಗಾರಿಕೆಯಾಗುತ್ತಿತ್ತೇನೋ? ಹಾಗೆಯೇ ಈ ಪದ್ಯದ ಕೊನೆಯ ಸಾಲಿನಲ್ಲಿ ‘ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ’ ಎಂಬುದನ್ನು ಕಷ್ಟಕರವಾಗಿ ‘dance on my tongue with rapture and love’ ಎಂದು ಅನುವಾದಿಸಿದೆ. ಇಲ್ಲಿ ‘dance’ ಎಂಬುದು ವಾಚ್ಯಾರ್ಥದ ಸೀಮೆಯನ್ನು ದಾಟಬೇಕು. ಪ್ರಾಯಃ ‘perform’ ಎಂಬುದು ಹೆಚ್ಚು ಸೂಕ್ತವೆಂದನ್ನಿಸುತ್ತದೆ. ‘ಕಿಂಕರ’ ಎಂಬುದನ್ನು ‘servant’ ಎಂದು ಅನುವಾದಿಸುವುದಕ್ಕಿಂತ ‘disciple’ ಎಂದು ಅನುವಾದಿಸುವುದೇ ಸಾಧುವೆಂದನ್ನಿಸುತ್ತದೆ, ಏಕೆಂದರೆ ಅಲ್ಲಿ ವ್ಯಕ್ತವಾಗುವ ಸರ್ವಸಮರ್ಪಣಭಾವದ ಭಕ್ತಿಯದ್ದೇ ವಿನಾ ಗುಲಾಮಗಿರಿ ಅಥವಾ ‘slavery’ಯದ್ದಲ್ಲ. ಇವೆಲ್ಲ ಚರ್ಚಾಸ್ಪದ.

ಆರಂಭದ ಕೆಲವು ಪದ್ಯಗಳು ಹೀಗಿವೆ. ಬೆಂದಿದೆಯೇ ಎಂದು ನೋಡಲು ಕೆಲವು ಅಗುಳುಗಳನ್ನು ಪರೀಕ್ಷಿಸಿದ್ದೇನೆ. ನೈವೇದ್ಯದ ಅಕ್ಕಿಯಲ್ಲಿ ಸಿಗುವ ಇಂತಹ ಶಿವಲಿಂಗಗಳು ಬೇಕಷ್ಟಿವೆ. ಆದರೂ ಆದಿಪರ್ವದ ಅನುವಾದವು ಸಭಾಪರ್ವದ ಅನುವಾದಕ್ಕಿಂತ ಹೆಚ್ಚು ಸಮಗ್ರವಾಗಿದೆ. ಸಭಾಪರ್ವದಲ್ಲಿ ಆಯ್ಕೆಗಳನ್ನು ಸಮರ್ಥಿಸುವ ನಿರೂಪಣೆಯಿಲ್ಲ. ಕೆಲವು ಪೌರಾಣಿಕ ಪದಗಳನ್ನು ಯಥಾವತ್ತಾಗಿ ಇಂಗ್ಲಿಷಿನಲ್ಲೂ ಬಳಸಿಕೊಳ್ಳಲಾಗಿದೆ. ಇನ್ನು ಕೆಲವು ‘ರವಿಪ್ರಕಾಶ’ ಎಂಬ ಕನ್ನಡ ಪದ ಇಂಗ್ಲಿಷಿನಲ್ಲಿ ‘Sun Light’ ಆದಂತಿದೆ. ಶೇಕ್ಸ್ಪಿಯರ್ ‘It’s greek to me’ ಎಂದಾಗ ಒಂದು ನುಡಿಗಟ್ಟನ್ನೇ ರಚಿಸಿದ. ‘ಅದು ನನಗೆ ಗ್ರೀಕ್’ ಎಂದು ಆತ ಹೇಳಿದ್ದನ್ನು ಅನುವಾದಿಸಬಹುದೇ? ಕಾಳಿದಾಸ ಶಬ್ದಾರ್ಥ, ಪದಾರ್ಥಗಳನ್ನು ಬದಿಗಿರಿಸಿ ವಾಗರ್ಥವನ್ನು ಪ್ರತಿಪಾದಿಸಿದ. ನಾವು ಭಾರತೀಯರು ಅನ್ಯ ಭಾಷೆ ಮತ್ತು ವ್ಯಾಕರಣವನ್ನು ಮಡಿವಂತಿಕೆಯಿಂದ ಬಳಸುತ್ತೇವೆ. ಇದು ಇಂಗ್ಲಿಷ್ ಅನುವಾದದಲ್ಲಿ ಪ್ರತಿಫಲಿಸುತ್ತಿದೆ. ಇನ್ನೊಂದು ಭಾಷೆಯಿಂದ ನಮ್ಮ ಮಾತೃಭಾಷೆಗೆ ಅನುವಾದಿಸುವುದಕ್ಕೂ ನಮ್ಮ ಭಾಷೆಯಿಂದ ಇನ್ನೊಂದು (ನಮ್ಮದಲ್ಲದ) ಭಾಷೆಗೆ ಅನುವಾದಿಸುವುದಕ್ಕೂ ಇರುವ ವ್ಯತ್ಯಾಸ ಇಲ್ಲಿ ಕಾಣುತ್ತದೆ. ನಮ್ಮ ವಿದ್ವಾಂಸರನ್ನು ಗೌರವಿಸುತ್ತಲೇ, ನನಗನ್ನಿಸುವಂತೆ ಪ್ರಾಯಃ ವಿದೇಶೀ ವಿದ್ವಾಂಸರು (ಅದರಲ್ಲೂ ಸೃಜನಶೀಲ ಬರಹಗಾರರು) ಕನ್ನಡ ಕಲಿತು ತಮ್ಮ ಭಾಷೆಗೆ ಅನುವಾದಿಸಿದ್ದರೆ ಅದು ಸಹಜವಾಗಿರುತ್ತಿತ್ತು ಎಂದೂ ಅನ್ನಿಸುತ್ತದೆ. ಕನ್ನಡ ಕಾವ್ಯದ ಸೌಂದರ್ಯವನ್ನು, ಉಪಯುಕ್ತತೆಯನ್ನು ಯುರೋಪಿನ ವಿದ್ವಾಂಸರು ಅರಿತು ಸಂಪಾದಿಸಿದರಲ್ಲ! ಗದ್ಯದಲ್ಲಿ ಎಷ್ಟೇ ಪರಿಣತರಾದರೂ ಪದ್ಯಕ್ಕೆ ಜೀವ ನೀಡಬೇಕಾದರೆ ಸೃಜನಶೀಲ ಕವಿಹೃದಯ ಮತ್ತು ಕಾವ್ಯದ ಒರತೆಯಿರಬೇಕು. ವಿಮರ್ಶೆಯ ವಿದ್ವತ್ತು ಸಾಕಾಗುವುದಿಲ್ಲ. ‘ಘಳಿಗೆಗೊಬ್ಬ ಹುಟ್ಟುವನು, ಘಳಿಗೆಗೊಬ್ಬ ಸಾಯುವನು’ ಎಂಬ ವಿದ್ಯಾರ್ಥಿ ಕವಿಯ ಸಾಲನ್ನು ಗಣಿತದ ಅಧ್ಯಾಪಕರು ಹಾಗಾಗುವುದು ಸಾಧ್ಯವಿಲ್ಲ, ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ತರ್ಕದೊಂದಿಗೆ ‘ಘಳಿಗೆಗೊಬ್ಬ ಹುಟ್ಟುವನು, ಒಂದೂವರೆ ಘಳಿಗೆಗೊಬ್ಬ ಸಾಯುವನು’ ಎಂದು ತಿದ್ದಿದರಂತೆ. ಯಾವ ಸೃಜನಶೀಲ ಸಾಹಿತ್ಯವೂ ಸರಾಸರಿಯ ತರ್ಕವನ್ನು ಮೀರಿಯೇ ಬದುಕಬೇಕು.

ಇನ್ನಷ್ಟು ಪದಗಳ, ಪದ್ಯಗಳ ಬಗ್ಗೆ ಬರೆಯಲು ಇಲ್ಲಿ ವ್ಯವಧಾನವಿಲ್ಲ. ಪರ್ವ, ಸಂಧಿ, ವೇದ, ನಿಗಮ ಮುಂತಾದ ಪದಗಳ ವರ್ಚಸ್ಸನ್ನು ಇನ್ನೊಂದು ಭಾಷೆಯಲ್ಲಿ ಒಡಮೂಡಿಸುವುದು ಸುಲಭವಲ್ಲ. ಕನ್ನಡದಲ್ಲಿ ಕುಮಾರವ್ಯಾಸ ರಚಿಸಿದ ನುಡಿಗಟ್ಟುಗಳು ಭಾಷೆಯನ್ನು ದಾಟಿ ಹೋಗುವುದು ಅಸಾಧ್ಯವೆಂದೇ ಅನ್ನಿಸುತ್ತದೆ. ಆತನನ್ನು ಓದಬೇಕಾದವರು ಮೋಗ್ಲಿಂಗ್, ರೈಸ್, ಕಿಟ್ಟೆಲರ ಹಾಗೆ ಕನ್ನಡವನ್ನೇ ಆವಾಹಿಸಿಕೊಳ್ಳಬೇಕು. ಅನುವಾದವೆಂಬುದು ಇನ್ನೂ ಒಂದು ವಿಜ್ಞಾನವಾಗಿಲ್ಲ; ಅದೊಂದು ಕಲೆ. ಅಲ್ಲೇ ಅದರ ಮತ್ತು ಅದರಾಚೆಯ ಸೀಮೆಯಿದೆ. ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರು ಎಂಬುದು ಅನುವಾದಗಳಿಗೆ ರೂಪಸದೃಶವಾಗಿ ಅನ್ವಯಿಸಬೇಕು. ಅನುಭವ, ವಿದ್ವತ್ತು, ಪರಿಶ್ರಮ, ಶ್ರದ್ಧೆಯ ಹೊರತಾಗಿಯೂ, ಈ ಕೃತಿಯು ಅತ್ತ ಶಬ್ದಾನುವಾದವೂ ಆಗದೆ, ಇತ್ತ ಭಾವಾನುವಾದ/ಸಂಗ್ರಹಾನುವಾದವೂ ಆಗದೆ ಉಳಿದಿದೆ. ಕಬಂಧನ ಹಾಗೆ ತಲೆಯೂ ಕಾಲುಗಳೂ ಇಲ್ಲದೆ ದೇಹ ಶಾಪವಿಮೋಚನೆಗಾಗಿ ಕಾದಿದೆ. ಈ ಪರಿಯ ಅನುವಾದವು ಕಷ್ಟವೆಂಬ ಮತ್ತು ಇಂತಹ ಅನುವಾದದ ಮಹತ್ವವನ್ನು ಮತ್ತು ಈ ಸಾಹಸಕ್ಕೆ ಕೈಯಿಕ್ಕಿದ ಹಿರಿಯರ ವಿದ್ವತ್ತು, ಸಾಹಿತ್ಯಲೋಕದಲ್ಲಿ ಅವರಿಗಿರುವ ಸ್ಥಾನ-ಮಾನ-ವರ್ಚಸ್ಸು-ಪ್ರಭಾವ, ಪರಿಶ್ರಮ ಇವನ್ನು ಲೆಕ್ಕಿಸಿಯೇ ಕೆಲವು ವಿಚಾರಗಳನ್ನು ಗಮನಿಸಲಾಗಿದೆ. ಭೂಕೈಲಾಸದ ಪ್ರಸಂಗದಂತೆ ಗಿರಿಯನೆತ್ತಲು ಹೋಗಿ ಕೈಯನ್ನು ಸಿಕ್ಕಿಸಿಕೊಳ್ಳುವುದೂ ಕಷ್ಟ. ಆದರೆ ಇಲ್ಲಿ ಕಾಣಿಸಿದ ಹಿರಿ-ಕಿರಿ ವಿದ್ವಾಂಸರ ಒಳಗೊಳ್ಳುವಿಕೆ ‘too many cooks’ ಅಲ್ಲದಿದ್ದರೂ ನಿರೀಕ್ಷಿತ ಸಾರ್ಥಕವಾಗಲಿಲ್ಲವೆಂಬುದೇ ನನ್ನ ಆತಂಕಕ್ಕೆ ಕಾರಣ. ಇಂಗ್ಲಿಷಿನಲ್ಲಿ ‘glorious failure’ ಎಂಬ ನುಡಿಯಿದೆ. ಈ ಅನುವಾದವೂ ಅದಕ್ಕೆ ಭಾಜನವಾಗಬಹುದು. ಆದರೆ ಇದಕ್ಕೆ ಯೋಜಕರನ್ನು, ಅನುವಾದಕರನ್ನು ಹೊಣೆಯಾಗಿಸಲಾಗದು. ಅದು ಕುಮಾರವ್ಯಾಸನ ಅನನ್ಯತೆ. ಆತ ಅನುವಾದಕ್ಕೆ ಅನುವಾಗದ, ಅನುವಾದದ ಮಾಯೆಗೆ ಸಿಕ್ಕದ ಅಲ್ಲಮ. ಕುಮಾರವ್ಯಾಸನು ಅನುವಾದಕ್ಕೆ ಅನುಗ್ರಹ ನೀಡಲು ಅನುವಾದ ಎಂಬ ಸ್ಥಿತಿ ಬರುವುದು ಕನ್ನಡ ಸಾಹಿತ್ಯಕ್ಕೆ ಮತ್ತು ಭಾಷೆಗೆ ಹಾಗೂ ವಿಶ್ವ ಸಾಹಿತ್ಯಕ್ಕೆ, ಭಾಷೆಗೆ ಒಳಿತು. ಆ ಕ್ಷಣಕ್ಕೆ ಆಸೆಪಡೋಣ.

Writer - ವಾರ್ತಾಭಾರತಿ

contributor

Editor - Safwan

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಪತನದ ಕಳವಳ