ಡ್ರೈವಿಂಗ್ ಸೀಟ್‌ನಲ್ಲಿ ಮೋದಿ ಕೂತಿದ್ರಂತೆ...!

Update: 2015-12-16 08:31 GMT

ಕಾರು ಚಲಾಯಿಸಿ ಪಾದಚಾರಿಯನ್ನು ಬಲಿ ಪಡೆದ ಆರೋಪದಿಂದ ಮುಕ್ತರಾದ ತೀರ್ಪನ್ನು ಓದಿದಾಕ್ಷಣ ಸಲ್ಮಾನ್ ಖಾನ್ ಅವರು ಕಟಕಟೆಯಲ್ಲಿ ಕುಸಿದು ಬಿದ್ದರಂತೆ. ನ್ಯಾಯಾಧೀಶರೋ ಬೆಚ್ಚಿ ಬಿದ್ದರು.
                                                ‘‘ಏನ್ರೀ ಇದು. ಇಲ್ಲಿಯೂ ಕುಡಿದು ಬಂದಿದ್ದೀರಾ? ಯಾರಿದ್ದೀರಾ ಅಲ್ಲಿ. ಇವರನ್ನು ಜಾಗ್ರತೆ ಎತ್ತಿ ಮನೆ ಮುಟ್ಟಿಸಿ ಬಿಡಿ. ತಾನೇ ಡ್ರೈವಿಂಗ್ ಮಾಡದಂತೆ ನೋಡಿಕೊಳ್ಳಿ’’
ಸಲ್ಮಾನ್ ಖಾನ್ ತಡವರಿಸಿ ಎದ್ದು ನಿಂತರು ‘‘ಸಾರ್...ನಾನೇ ಡ್ರೈವಿಂಗ್ ಮಾಡೋದಕ್ಕೆ ಅನುಮತಿ ಕೊಡಿ ಸಾರ್....’’
‘‘ಸಾಧ್ಯಾನೇ ಇಲ್ಲ. ನಾನು ಮನೆ ತಲುಪುವವರೆಗೆ ನೀವು ಕಾರು ಚಲಾಯಿಸುವುದಕ್ಕೆ ಸಾಧ್ಯವಿಲ್ಲ’’ ನ್ಯಾಯಾಧೀಶರು ಗಾಬರಿಯಿಂದ ಹೇಳಿದರು.
‘‘ನಾನು ನಿರಪರಾಧಿ ಎಂದು ನೀವೇ ಘೋಷಿಸಿದ್ದೀರಲ್ಲ ಸಾರ್....’’ ಸಲ್ಮಾನ್ ಖಾನ್ ಆತಂಕದಿಂದ ಕೇಳಿದ.
‘‘ತೀರ್ಪನ್ನು ಬೇಕಾದರೆ ನಾನು ಬದಲಿಸಿ ಕೊಡುತ್ತೇನೆ. ಆದರೆ ನಾನು ಮನೆ ಸೇರುವವರೆಗೆ ನೀವು ಡ್ರೈವಿಂಗ್ ಮಾಡುವ ಹಾಗಿಲ್ಲ’’ ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದರು.
‘‘ಸಾರ್, ನೀವು ಮನೆ ಸೇರಿದ ಬಳಿಕ ನಾನು ಡ್ರೈವಿಂಗ್ ಮಾಡಬಹುದಾ ಸಾರ್?’’ ಮುಗ್ಧನಾಗಿ ಸಲ್ಮಾನ್ ಕೇಳಿದ.


‘‘ನನ್ನ ಮನೆಯ ಪರಿಸರದಲ್ಲಿ ಡ್ರೈವಿಂಗ್ ಮಾಡಲೇ ಬಾರದು. ರಾತ್ರಿಯಂತೂ ಬೇಡವೇ ಬೇಡ. ನಾನು ಫೂಟ್‌ಪಾತ್‌ನಲ್ಲಿ ವಾಕಿಂಗ್ ಹೋಗೋ ಸಮಯ ಅದು...’’
ನ್ಯಾಯಾಧೀಶರು ಎಚ್ಚರಿಸಿದರು.
‘‘ಸಾರ್...ನನ್ ಚಾಲಕ ಡ್ರೈವಿಂಗ್ ಮಾಡಿದರೆ ಓಕೆನಾ? ನಾನು ಹಿಂದಿನ ಸೀಟಲ್ಲಿ ಕೂತಿರ್ತೀನಿ....’’ ಸಲ್ಮಾನ್ ವಿಧೇಯನಾಗಿ ಹೇಳಿದ.
‘‘ಅಲ್ರೀ....ಈ ತೀರ್ಪು ಹೊರಬಿದ್ದ ಮೇಲೆ ನಿಮ್ಮ ಕಾರಿಗೆ ಡ್ರೈವರ್ ಸಿಗ್ತಾನೇನ್ರೀ? ಜೈಲಿನಲ್ಲಿ ಅನ್ಯಾಯವಾಗಿ ಕಳೆಯುವುದಕ್ಕೆ ಯಾವ ಚಾಲಕ ಸಿದ್ಧನಿರ್ತಾನೆ?’’ ನ್ಯಾಯಾಧೀಶರು ಸಿಟ್ಟಿನಿಂದ ಕೇಳಿದರು ‘‘ನೋಡ್ರಿ...ಸುಪ್ರೀಂಕೋರ್ಟ್‌ನ ಡ್ರೈವಿಂಗ್ ಸೀಟ್‌ನಲ್ಲಿ ಕೂತಿದ್ದೀನಿ ನಾನು. ಹೇಗೋ ನಿಮ್ಮ ಮೇಲೆ ಕಾರು ಹಾಯಿಸುವುದನ್ನು ಭಾರೀ ಕಷ್ಟದಿಂದ ತಪ್ಪಿಸಿದ್ದೀನಿ. ಇನ್ನೊಮ್ಮೆ ನೀವು ಡ್ರೈವಿಂಗ್ ಸೀಟ್‌ನಲ್ಲಿ ಕೂತ್ರೆ ನೇರ ನಿಮ್ಮ ಎದೆ ಮೇಲೆ ಹರಿಸ್ತೇನೆ ಅಷ್ಟೇ...’’

ಸಲ್ಮಾನ್ ಖಾನ್‌‘‘ಊಂ...ಊಊಂ....’’ ಎಂದು ಅಳುತ್ತಾ ಸಿಂಬಳ ಸುರಿಸತೊಡಗಿದ. ***
ಐತಿಹಾಸಿಕ ತೀರ್ಪು ಹೊರಬಿದ್ದದ್ದೇ ಎಂಜಲು ಕಾಸಿ ನ್ಯಾಯಾಧೀಶರನ್ನು ಇಂಟರ್ಯು ಮಾಡಲು ಶುರು ಮಾಡಿದ.
‘‘ಸಾರ್...ಸುಪ್ರೀಂ ಕಾರ್‌ನ ಚಾಲಕ ಸ್ಥಾನದಲ್ಲಿ ಕೂತು ನ್ಯಾಯ ದೇವತೆಯ ಮೇಲೆಯೇ ಕಾರ್ ಹರಿಸಿ ಬಿಟ್ರೂ ಎಂದು ಫೇಸ್‌ಬುಕ್, ಟ್ವಿಟರ್‌ನಲ್ಲಿ ಹರಿಹಾಯುತ್ತಿದ್ದಾರೆ...ಇದಕ್ಕೇನು ಹೇಳುತ್ತೀರಾ...’’
ನ್ಯಾಯಾಧೀಶರು ಬೆವರೊರೆಸಿಕೊಳ್ಳುತ್ತಾ ಹೇಳಿದರು ‘‘ನೋಡ್ರಿ...ಹೊರಗೆ ನೋಡೋದಕ್ಕೆ ಕಾರು ಏನೋ ಚೆನ್ನಾಗಿದೆ. ಆದರೆ ಒಳಗೆ ಎಂಜಿನ್ ಎಷ್ಟು ಕೆಟ್ಟಿದೆ ಎನ್ನೋದು ನಿಮ ಗೆ ಗೊತ್ತೇನ್ರಿ...ಮಾರ್ಗದ ಮಧ್ಯೆ ಇದನ್ನು ಬಿಡೋದಕ್ಕೆ ಹೊರಟ್ರೆ ಅದು ಫುಟ್‌ಪಾತ್ ಮೇಲೆ ಓಡುತ್ತೆ.... ನನ್ನ ಸ್ಥಿತಿಯೇ ಹೀಗಾಗಿರುವಾಗ, ಯಕಃಶ್ಚಿತ್ ಮಾಮೂಲಿ ನಟನಾಗಿರುವ ಸಲ್ಮಾನ್ ಖಾನ್ ಅವರ ಕಾರಿನ ಸ್ಥಿತಿ ಹೇಗಿರಬೇಡ...ಒಂದು ಸ್ವಲ್ಪ ಯೋಚಿಸಿ...’’
‘‘ಫುಟ್‌ಪಾತ್‌ನಲ್ಲಿ ಸತ್ತವರನ್ನು ನ್ಯಾಯದೇವತೆಯ ಮನೆಗೆ ಕರೆದೊಯ್ಯುವ ಕಾರು, ನೇರವಾಗಿ ನ್ಯಾಯದೇವತೆಯ ಎದೆಯ ಮೇಲೆ ಹರಿದರೆ ತಪ್ಪಲ್ವಾ ಸಾರ್...’’ ಕಾಸಿ ಹೆದರುತ್ತಾ ಕೇಳಿದ. ಹೆಚ್ಚು ಮಾತನಾಡಿದರೆ ನ್ಯಾಯಾಂಗ ನಿಂದನೆಯಾಗಿ ಕಾರು ತನ್ನ ಎದೆಯ ಮೇಲೆಯೇ ಹರಿಯಬಹುದೆಂಬ ಭಯವಿತ್ತು ಅವನಿಗೆ.
‘‘ನೋಡ್ರೀ...ಸುಮ್ ಸುಮ್ನೆ ನನ್ನ ತಲೆಯ ಮೇಲೆ ಎಲ್ಲವನ್ನೂ ಕಟ್ಟಬೇಡಿ...ಅದಿರಲಿ. ಕಾರಿನಲ್ಲಿ ಸಲ್ಮಾನ್ ಖಾನ್ ಇದ್ದ ಎನ್ನುವುದನ್ನು ನ್ಯಾಯವಾದಿಗಳು ಪ್ರೂವ್ ಮಾಡ್ಬೇಕು...ಅವರು ಸರಿ ಇಲ್ಲದೇ ಇದ್ದ ಮೇಲೆ ನಾವೇನ್ರೀ ಮಾಡೋದು...?’’ ನ್ಯಾಯಾಧೀಶರು ಕೇಳಿದರು.
‘‘ಆದ್ರೆ ಸುಪ್ರೀಂ ಕಾರ್‌ನಲ್ಲಿ ಚಾಲಕನ ಜಾಗದಲ್ಲಿ ನೀವು ಕೂತಿದ್ದೀರಲ್ಲ ಸಾರ್...’’ ಕಾಸಿ ಮತ್ತೆ ಕೇಳಿದ.
‘‘ನಾನು ಕೂತಿದ್ದೆ ಎನ್ನುವುದಕ್ಕೆ ಏನ್ರೀ ಸಾಕ್ಷಿ ಇದೆ...?’’ ನ್ಯಾಯಾಧೀಶರು ತಿರುಗಾ ಕಾಸಿಯನ್ನು ಪ್ರಶ್ನಿಸಿದರು.
‘‘ಸಾರ್...ಮತ್ಯಾರು ಸಾರ್...ಅದೇ ಕುಡುಕ ಸಲ್ಮಾನ್ ಕೂತಿದ್ನಾ...’’ ಕಾಸಿ ಅಚ್ಚರಿಯಿಂದ ಮತ್ತೆ ಪ್ರಶ್ನಿಸಿದ.
‘‘ಅವನ್ಯಾಕೆ ಕೂರ್ತಾನೆ? ನಾನು ಡ್ರೈವಿಂಗ್ ಸೀಟ್‌ನಲ್ಲಷ್ಟೇ ಕೂತಿದ್ದೆ. ಆದರೆ ಹಿಂದಿನಿಂದ ಯಾವ ಕಡೆ ಹೋಗಬೇಕು ಎಂದು ಸೂಚನೆ ಕೊಟ್ಟವರು ಬೇರೆಯೇ ಇದ್ದಾರೆ... ಆದುದರಿಂದ ಸಲ್ಮಾನ್ ಖಾನ್ ಬಿಡುಗಡೆಯ ಆ್ಯಕ್ಸಿಡೆಂಟ್‌ನಲ್ಲಿ ನನ್ನ ಪಾತ್ರವೇ ಇಲ್ಲ...’’
‘‘ಸಾರ್ ಸಲ್ಮಾನ್ ಖಾನ್ ಅವರ ಕಾರಿನ ಡ್ರೈವಿಂಗ್ ಸೀಟಿನಲ್ಲಿ ನರೇಂದ್ರ ಮೋದಿ ಕೂತಿದ್ರಂತೆ ಹೌದಾ...ಸಾರ್...’’ ಕಾಸಿ ಕೇಳಿದ.
‘‘ನೋಡ್ರಿ...ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲೂ ಇದನ್ನೇ ಹೇಳಿದ್ರು. ಆದರೆ ಅವರ ಕಾರನ್ನು ಚಲಾಯಿಸಿಕೊಂಡು ಗುಜರಾತ್‌ನಿಂದ ದಿಲ್ಲಿಗೆ ಬಂದೇ ಬಿಟ್ರು...ಅವರೇ ಹೇಳಿದ್ದಾರಲ್ಲ....ವೇಗವಾಗಿ ಕಾರು ಚಲಾಯಿಸುವಾಗ ಕೆಲವು ನಾಯಿಮರಿಗಳು ಅಡಿಗೆ ಬೀಳೋದು ಸಹಜ. ನನಗೂ ಬೇಜಾರಾಗುತ್ತೆ ಅಂತ...’’ ನ್ಯಾಯಾಧೀಶರು ಸಮಜಾಯಿಷಿ ಕೊಟ್ಟರು.
‘‘ಅಂದ್ರೆ, ನರೇಂದ್ರ ಮೋದಿಯವರ ಆ ಮಾತಿನ ಆಧಾರದಲ್ಲಿ ಸಲ್ಮಾನ್ ಖಾನ್ ಅವರನ್ನು ಬಿಡುಗಡೆ ಮಾಡಲಾಯಿತೇ ಸಾರ್....’’ ಕಾಸಿ ಕೇಳಿದ.
‘‘ನೋಡ್ರಿ...ನೀವು ತುಂಬಾ ಕಂಫ್ಯೂಶನ್ ಮಾಡ್ತಾ ಇದ್ದೀರಿ....ಮುಖ್ಯವಾಗಿ ಸಲ್ಮಾನ್ ಅವರು ಚಲಾಯಿಸಿದ ಕಾರಿನಲ್ಲಿ ಡ್ರೈವಿಂಗ್ ಸೀಟಿನಲ್ಲಿ ಯಾರಿದ್ರು ಎನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಸಲ್ಮಾನ್ ಹೇಳ್ತಾನೆ ಚಾಲಕ ಬಿಡ್ತಾ ಇದ್ದ ಅಂತ. ಕೆಲವರು ಹೇಳ್ತಾರೆ ಆತನ ಸೀಟ್‌ನಲ್ಲಿ ನರೇಂದ್ರ ಮೋದಿ ಕೂತಿದ್ರು ಅಂತ. ಆದ್ರೆ ಕೆಲವರು ಹೇಳ್ತಾರೆ ಆ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಗುಜರಾತ್‌ನಲ್ಲಿ ಕಾರ್ ಚಲಾಯಿಸ್ತಾ ಒಂದು ದೊಡ್ಡ ಆಕ್ಸಿಡೆಂಟ್ ಮಾಡ್ಕೊಂಡಿದ್ರೂ ಅಂತಾ...ಒಟ್ಟಾರೆ ಗೊಂದಲ ಆಗಿರುವುದರಿಂದ ಸಲ್ಮಾನ್ ಖಾನ್ ಅವರನ್ನು ಬಿಡುಗಡೆ ಮಾಡುವುದು ಅನಿವಾರ್ಯವಾಯಿತು...’’
‘‘ಈ ಸಂತ್ರಸ್ತರ ಗತಿ ಏನು ಸಾರ್?’’ ಕಾಸಿ ಆತಂಕದಿಂದ ಕೇಳಿದ.
‘‘ಅವರು ಫುಟ್‌ಪಾತ್‌ನಲ್ಲಿ ಯಾಕೆ ಮಲಗಬೇಕಾಗಿತ್ತು?’’
‘‘ಅವರಲ್ಲ ಸಾರ್...ಇದೀಗ ನ್ಯಾಯವ್ಯವಸ್ಥೆಯ ಮೇಲೆಯೇ ಕಾರು ಹರಿದಿದೆ ಎಂದು ಜನ ಹೇಳುತ್ತಾ ಇದ್ದಾರೆ. ಕಾರಿನಡಿಯಲ್ಲಿ ಸಿಕ್ಕು ಹಾಕಿಕೊಂಡಿರುವ ನ್ಯಾಯದ ಗತಿ ಏನು ಸಾರ್?’’ ಕಾಸಿ ಕೇಳಿದ.




‘‘ಕಾರು ವೇಗವಾಗಿ ಹೋಗುವಾಗ ಕೆಲವು ನಾಯಿಮರಿಗಳು ಅಡಿಗೆ ಬೀಳ್ತವೆ ಎಂದು ನಮ್ಮ ಪ್ರಧಾನಿಯವರೇ ಹೇಳಿದ್ದಾರಲ್ಲ, ಅವರಲ್ಲೇ ಕೇಳಿ ಈ ಪ್ರಶ್ನೆ....’’ ಎಂದವರೇ ತಮ್ಮ ಕಾರನ್ನು ಭರ್ರನೇ ಚಲಾಯಿಸಿ ಮನೆಯ ಕಡೆ ಧಾವಿಸಿದರು. ಎಲ್ಲಿ ತನ್ನ ಮೈಮೇಲೆಯೇ ಚಲಾಯಿಸಿ ಬಿಡುತ್ತಾರೆಯೋ ಎಂದು ಹೆದರಿದ ಕಾಸಿ, ಒಂದೇ ಬಾರಿಗೆ ಹಾರಿ ಬೆಂಗಳೂರು ಸೇರಿಕೊಂಡ. 

 

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News