ವಿಧಾನಸಭಾ ಚುನಾವಣೆ: ಬಿಜೆಪಿಗೆ ವರುಣ್ ಸಾರಥಿ?

Update: 2015-12-16 08:37 GMT

ಉ.ಪ್ರ. ವಿಧಾನಸಭಾ ಚುನಾವಣೆ: ಬಿಜೆಪಿಗೆ ವರುಣ್ ಸಾರಥಿ?
 ಭಾರತೀಯ ಜನತಾಪಕ್ಷವು ಈಗಾಗಲೇ ‘ಮಿಶನ್ ಉತ್ತರ್ ಪ್ರದೇಶ್’ ಗೆ ಯೋಜನೆಯನ್ನು ಆರಂಭಿಸಿದೆ. ಭಾರತದ ಅತ್ಯಧಿಕ ಜನಸಾಂಧ್ರತೆಯ ರಾಜ್ಯವಾದ ಉತ್ತರಪ್ರದೇಶವು 2017ರಲ್ಲಿ ವಿಧಾನಸಭಾ ಚುನಾವಣೆಗೆ ತೆರಳಲಿದೆ. ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ವರುಣ್‌ಗಾಂಧಿಗೆ ನೀಡುವ ನಿರೀಕ್ಷೆಯಿದೆ. ಪಕ್ಷದ ಒಂದು ವರ್ಗದ ಅಭಿಪ್ರಾಯದ ಪ್ರಕಾರ ವರುಣ್‌ಗಾಂಧಿಯನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ, ಅವರಿಗೆ ಪಕ್ಷದ ರಾಜ್ಯ ಘಟಕದ ಮೇಲಿನ ನಿಯಂತ್ರಣವನ್ನು ಹಸ್ತಾಂತರಿಸಬೇಕು. ಪಕ್ಷದಲ್ಲಿ ಬದಿಗೆ ಸರಿಸಲ್ಪಟ್ಟಿರುವ ವರುಣ್‌ಗಾಂಧಿಗೆ ಇದೊಂದು ಅಚ್ಚರಿಯ ಸಂಗತಿಯೇ ಸರಿ. ಆದರೆ ಅವರ ಕಠಿಣ ಪರಿಶ್ರಮ ಹಾಗೂ ರಾಜಕೀಯ ಮುತ್ಸದ್ಧಿತನವು ಎಲ್ಲರಿಂದಲೂ ಗುರುತಿಸಲ್ಪಟ್ಟಿದೆ, ಇದರ ಫಲವಾಗಿ ಅವರಿಗೆ ಈ ಕೊಡುಗೆ ದೊರೆತಿದೆ ಎಂದು ಕೆಲವರ ಅಭಿಪ್ರಾಯವಾಗಿದೆ.


 ದಿಲ್ಲಿಯಲ್ಲಿ ಅಮರ್‌ಸಿಂಗ್‌ಗೆ ಮನೆಯ ಹಂಬಲ
 ಸಮಾಜವಾದಿ ಪಕ್ಷದ ತೆಕ್ಕೆಗೆ ಮರಳುವ ಕನಸು ಕಾಣುವುದನ್ನು ಅಮರ್‌ಸಿಂಗ್ ಇನ್ನೂ ಮುಂದುವರಿಸಿದ್ದಾರೆ. ಆ ಮೂಲಕ ತನ್ನ ರಾಜಕೀಯ ಸನ್ಯಾಸಕ್ಕೆ ಅಂತ್ಯಹಾಡಲು ಅವರು ಹಂಬಲಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿಯಾದ ಅವರು, ದಿಲ್ಲಿ ಲೂತಿಯೆನ್ಸ್‌ನಲ್ಲಿ ತಾನು ವಾಸ್ತವ್ಯವಿದ್ದ ವಿಲಾಸಿ ಬಂಗಲೆಯನ್ನು ಮತ್ತೆ ತನ್ನದಾಗಿಸಿಕೊಳ್ಳುವ ಆಕಾಂಕ್ಷೆಯನ್ನೂ ಕೈಬಿಟ್ಟಿಲ್ಲ. ತೀರಾ ಇತ್ತೀಚೆಗೆ ಅಮರ್‌ಸಿಂಗ್ ಅವರು ಲೂತಿಯೆನ್ಸ್‌ನ 27 ಲೋಧಿ ಎಸ್ಟೇಟ್ ಬಂಗಲೆಯನ್ನು ಖಾಲಿಮಾಡಬೇಕಾಯಿತು. ಮತ್ತೆ ಈ ವಿಳಾಸಕ್ಕೆ ಹಿಂದಿರುಗುವಂತಾಗಲು ಅವರು ದಿಲ್ಲಿಯ ಅಧಿಕಾರದ ಕಾರಿಡಾರ್‌ನ ಬಾಗಿಲುಗಳನ್ನು ತಟ್ಟತೊಡಗಿದ್ದಾರೆ. ಅಮರ್‌ಸಿಂಗ್ ಆಶಾವಾದಿಯಾಗುವುದಕ್ಕ್ಕೆ ಕಾರಣವೂ ಇದೆಯೆನ್ನಿ. ಈ ಮನೆಯ ಇನ್ನೋರ್ವ ಆಕಾಂಕ್ಷಿಯಾದ ಕೇಂದ್ರ ಸಚಿವ ಗಿರಿರಾಜ್‌ಸಿಂಗ್‌ಗೆ ಇನ್ನೂ ಬೀಗದ ಕೀಲಿಯನ್ನು ಹಸ್ತಾಂತರಿಸಿಲ್ಲ. ಇನ್ನೋರ್ವ ಆಕಾಂಕ್ಷಿ ಕುಮಾರಿ ಸೆಲ್ಜಾ ಅವರಿಗೂ ಆ ಬಗ್ಗೆ ಹೆಚ್ಚು ನಿರೀಕ್ಷೆಯಿಡಬಾರದೆಂಬ ಸೂಚನೆ ದೊರೆತಿದೆ. ದಿಲ್ಲಿಯ ಸಾಮಾಜಿಕ ವಲಯಗಳಲ್ಲಿ ಕೇಳಿಬರುತ್ತಿರುವ ಪಿಸುಮಾತುಗಳ ಪ್ರಕಾರ, ಈ ಭಾರೀ ನಿವೇಶನವು ಅಮರ್‌ಸಿಂಗ್ ತೆಕ್ಕೆಗೆ ಜಾರಿದರೆ ಅವರಿಗೆ ರಾಜ್ಯಸಭಾ ಸ್ಥಾನವು ದೊರೆಯಲಿದೆಯೆಂಬ ವದಂತಿ ಖಚಿತವಾದಂತೆ.


‘ಹವಾಮಾನ ತಜ್ಞ’ ಪವಾರ್
ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಪವಾರ್ ಅವರ 75ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಪವಾರ್‌ರ ಸಂಘಟನಾ ಚತುರತೆ ಹಾಗೂ ರಾಜಕೀಯ ನೈಪುಣ್ಯತೆಯನ್ನು ಕೊಂಡಾಡಿದ್ದಾರೆ. ಪವಾರ್ ಪುತ್ರಿ ಸುಪ್ರಿಯಾ ಸುಲೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ‘‘ಶರದ್‌ಪವಾರ್‌ರಲ್ಲಿ ರೈತನ ಗುಣಗಳಿವೆ. ಅವರು ಹವಾಮಾನವನ್ನು ತುಂಬಾ ಮುಂಚಿತವಾಗಿ ಗ್ರಹಿಸಿಕೊಳ್ಳುತ್ತಾರೆ ಹಾಗೂ ಅದನ್ನು ಅವರು ರಾಜಕೀಯದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಬಳಸಿಕೊಳ್ಳುತ್ತಾರೆ. ನಿಮಗೆ ಗಾಳಿ ಯಾವ ದಿಕ್ಕಿನಿಂದ ಬೀಸುತ್ತಿದೆ ಎಂಬುದು ತಿಳಿಯಬೇಕಿದ್ದರೆ, ಅವರು ನಿಮಗೆ ಹೇಳಿಕೊಡಬಹುದು’’ ಎಂದು ಚಟಾಕಿ ಹಾರಿಸಿದ್ದರು. ಇದಕ್ಕೂ ಕೆಲವು ನಿಮಿಷಗಳ ಮೊದಲು ಭಾಷಣ ಮಾಡಿದ್ದ ಸೋನಿಯಾ ಕೂಡಾ ಅದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ‘‘ಅವರು ಈಗಿನಂತೆ ಮುಂದೆಯೂ ಬ್ಯಾಟಿಂಗ್ ಮುಂದುವರಿಸಬಹುದು. ಪ್ರಾಯಶಃ ಶತಕ ಕೂಡಾ ಬಾರಿಸಬಹುದು’’ ಎಂದಿದ್ದರು. ಇಷ್ಟೊಂದು ಸಂಖ್ಯೆಯ ಹಿತೈಷಿಗಳಿರುವುದನ್ನು ಕಂಡು ಪವಾರ್‌ಗೆ ಸಂತಸವಾಗಿರಬಹುದು.


ದಿಲ್ಲಿಯಲ್ಲಿ ನಿತೀಶ್ ತಂತ್ರಗಾರಿಕೆ
   ನಿತೀಶ್‌ಕುಮಾರ್ ಇತ್ತೀಚೆಗೆ ದಿಲ್ಲಿಗೆ ಆಗಮಿಸಿದ್ದರು. ಪಕ್ಷ ಭೇದವಿಲ್ಲದೆ ಅವರು ರಾಜಕೀಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ದಿಲ್ಲಿ ವಿಧಾನಸಭಾ ಚುನಾವಣೆ ಹಾಗೂ ಗುಜರಾತ್ ಸ್ಥಳೀಯಾಡಳಿತ ಚುನಾವಣೆ ಫಲಿತಾಂಶಗಳ ಬಳಿಕ, ವಿಶಾಲವಾದ ಬಿಜೆಪಿ ವಿರೋಧಿ ರಂಗವೊಂದನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೋಧಿಸಲು ಹಾಗೂ ದಿಲ್ಲಿಯ ಪ್ರಸಕ್ತ ರಾಜಕೀಯ ವಾತಾವರಣವನ್ನು ಗ್ರಹಿಸುವ ಪ್ರಯತ್ನವಿದೆಂದು ಹೇಳಲಾಗುತ್ತಿದೆ. ಬಿಹಾರದ ಮುಖ್ಯಮಂತ್ರಿಯವರು ಮೊದಲಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸತ್‌ಭವನದಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿದ್ದರು. ಇದೊಂದು ‘ಸೌಜನ್ಯದ ಭೇಟಿ’ ಎಂದು ನಿತೀಶ್ ಬಣ್ಣಿಸಿಕೊಂಡಿದ್ದರು. ನಿತೀಶ್ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳುವ ಕಾರಣದಿಂದ ದಿಲ್ಲಿಗೆ ಆಗಮಿಸಿದ್ದರಾದರೂ, ಅವರು ಅಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬಿಹಾರ ವಿಧಾನ ಸಭಾ ಚುನಾವಣೆ ಹಾಗೂ ಗುಜರಾತ್ ಪೌರಾಡಳಿತ ಚುನಾವಣೆಯ ಬಳಿಕ ನರೇಂದ್ರ ಮೋದಿಯವರ ‘ಬಾಡಿ ಲಾಂಗ್ವೇಜ್’ ಹೇಗಿದೆಯೆಂಬುದನ್ನು ತಿಳಿದುಕೊಳ್ಳಲೆಂದೇ ಅವರು ದಿಲ್ಲಿಗೆ ಬಂದಿದ್ದಿರಬಹುದು ಎಂದು ಜೆಡಿಯು ನಾಯಕರೊಬ್ಬರು ಹೇಳುತ್ತಾರೆ. ಮೋದಿಯ ಭದ್ರಕೋಟೆಯಾದ ಗುಜರಾತ್‌ನಲ್ಲಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿಯ ವೈಫಲ್ಯ ಹಾಗೂ ಕಾಂಗ್ರೆಸ್‌ನ ಅಚ್ಚರಿಯ ವಿಜಯವು, ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿನ ಆನಂತರದ ಕೇವಲ 17 ತಿಂಗಳುಗಳಲ್ಲಿ ಮೋದಿ ಸರಕಾರದ ಸ್ಥೈರ್ಯವನ್ನು ಕುಗ್ಗಿಸಿದೆ.


ಕಾಂಗ್ರೆಸ್‌ನಲ್ಲಿ ಹೊಸ ಮುಖಗಳಿಗೆ ಆದ್ಯತೆ
  ರಾಹುಲ್‌ಗಾಂಧಿಯ ಬಳಗದಲ್ಲಿ ಮಧುಸೂದನ್ ಮಿಸ್ತ್ರಿ ನಿಧಾನವಾಗಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಒಂದು ವಾರದಲ್ಲಿ ಮಥುರಾದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯು ಫ್ಲಾಪ್ ಶೋ ಆಗಿತ್ತು. ಇದಕ್ಕೆ ಮಿಸ್ತ್ರಿಯ ಸಂಘಟನಾ ಸಾಮರ್ಥ್ಯದ ವೈಫಲ್ಯವೇ ಕಾರಣವೆಂದು ಪಕ್ಷದೊಳಗೆ ದೂರುಗಳು ಕೇಳಿಬಂದಿದ್ದವು. ಅಸಮಾಧಾನಗೊಂಡ ರಾಹುಲ್, ಉತ್ತರಪ್ರದೇಶದ ಎಲ್ಲೆಡೆ ಇಂತಹದೇ ರ್ಯಾಲಿಗಳನ್ನು ಆಯೋಜಿಸುವಂತೆ ಪಕ್ಷದ ಯುವನಾಯಕರಿಗೆ ಆದೇಶ ನೀಡಿದರು. ಕಾಂಗ್ರೆಸ್‌ನ ಚುಕ್ಕಾಣಿಯು ಹಳಬರಿಂದ ಹೊಸಬರಿಗೆ ಹಸ್ತಾಂತರಗೊಳ್ಳುತ್ತಿರುವುದು ಪಕ್ಷದ ಕೆಲವು ನಾಯಕರಿಗೆ ಮನವರಿಕೆಯಾಗಿದೆ. ಬಹಳ ಸಮಯದಿಂದ ಮಿಸ್ತ್ರಿ, ರಾಹುಲ್ ಅವರ ‘ಬಲಗೈ’ ಎಂದೇ ತಿಳಿಯಲ್ಪಟ್ಟಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿರುವ ಹಾಗೆ ಕಾಣಿಸುತ್ತಿದೆ.
 

Writer - ಪತ್ರಕರ್ತ

contributor

Editor - ಪತ್ರಕರ್ತ

contributor

Similar News

ನಾಸ್ತಿಕ ಮದ