ನ್ಯಾಯ ಎಂದಾದರೂ ನಿಮ್ಮನ್ನು ಹುಡುಕಿ ಬರಬಹುದು...

Update: 2016-01-29 11:32 GMT

‘ಹಿಟ್ ಅಂಡ್ ರನ್’ ಪ್ರಕರಣದಲ್ಲಿ ಮುಂಬೈ ನ್ಯಾಯಾಲಯ ಸಲ್ಮಾನ್‌ರನ್ನು ದೋಷಮುಕ್ತಗೊಳಿಸಿದರೂ ನ್ಯಾಯಾಲಯದಿಂದ ಹೊರಬರುವಾಗ ಸಲ್ಮಾನ್‌ಖಾನ್ ಅಭಿಮಾನದಿಂದ ತಲೆಯೆತ್ತಿಯೇನೂ ಬರಲಿಲ್ಲ. 13 ವರ್ಷಗಳ ದೀರ್ಘ ಅವಧಿಯಲ್ಲಿ ಹಲವು ನ್ಯಾಯಾಲ ಯಗಳ ಮೆಟ್ಟಿಲೇರಿದ ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚ್‌ಲರ್ ‘ಅಗ್ನಿ ಶುದ್ಧಿ’ಯಾಗಿ ಹಿಂದಿರುಗಿದರೂ ಜನಸಾಮಾನ್ಯನ ಮನಸ್ಸಿನಲ್ಲಿ ಆ ಕಳಂಕವೊಂದು ಶಾಶ್ವತವಾಗಿರುತ್ತದೆ. ನ್ಯಾಯದ ಪಾಲನೆ ಸರಿಯಾಗಿ ಆಗಿದೆಯೇ ಎಂಬ ಸಂಶಯ ಅವನ ಮನಸ್ಸಿನಲ್ಲಿ ಬಾಕಿಯಾಗಬಹುದು.

ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾದ ಸಲ್ಮಾನ್‌ನ ಅಂಗರಕ್ಷಕ ರವೀಂದ್ರ ಪಾಟೀಲ್ ಹೇಳಿಕೆಯನ್ನು ಭಾಗಶಃ ಮಾತ್ರವೇ ನಂಬಲು ಸಾಧ್ಯ ಎಂಬ ಕಾರಣಕ್ಕೆ ಸಲ್ಮಾನ್ ದೋಷ ಮುಕ್ತರಾದರು. ಅವರು ಕೈಕೋಳಗಳು ಹಾಗೂ ಜೈಲನ್ನು ದಾಟಿ ಬಂದರೂ ಮುಂದಿನ ದಾರಿಯಲ್ಲಿ ರವೀಂದ್ರ ಪಾಟೀಲ್ ಎಂಬ ಆ ಯುವಕನ ವಾಸನೆ, ಆ ಆತ್ಮದ ಸಾಮೀಪ್ಯ ಸಲ್ಮಾನ್‌ರನ್ನು ಬೇಟೆಯಾಡಬಹುದು. ಆ ಒಂದು ಅಪಘಾತ ನಾಶಗೊಳಿಸಿದ ಬದುಕು ಹಾಗೂ ನರಕಯಾತನೆಯಿಂದ ಕೊನೆಗೊಂಡ ಸಾವಿಗೆ ಸಲ್ಮಾನ್ ಎಂದಾದರೂ ಉತ್ತರ ಹೇಳಬೇಕಾಗಿ ಬರಬಹುದು.
 


2002 ಫ್ರೆಬ್ರವರಿ-ಸಲ್ಮಾನ್‌ಗೆ ಅಂಗರಕ್ಷಕನಾಗಿ ಬಂದ 24ರ ಯುವಕ

ಮುಂಬೈಯ ಭೂಗತಲೋಕದಿಂದ ತನಗೆ ನಿರಂತರವಾಗಿ ಜೀವಬೆದರಿಕೆ ಬರುತ್ತಿದೆ ಎಂದು ಹೇಳಿ ಸಲ್ಮಾನ್‌ಖಾನ್ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಸಲ್ಮಾನ್‌ನ ದೂರನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆತನಿಗೆ ಇಲಾಖೆಯಿಂದಲೇ ಒಬ್ಬ ಬಾಡಿಗಾರ್ಡನ್ನು ನೇಮಿಸುತ್ತಾರೆ. ಆತನೇ 24 ವರ್ಷದ ರವೀಂದ್ರ ಪಾಟೀಲ್. ಹಾಗೆ ರವೀಂದ್ರ ಪಾಟೀಲ್ ಎಂಬ ಸ್ಫುರದ್ರೂಪಿ ಹಾಗೂ ಆರೋಗ್ಯವಂತನಾಗಿದ್ದ ಆ ಯುವಕ ಸಲ್ಮಾನ್‌ನ ಸಹಚರನಾಗುತ್ತಾನೆ. ಸಲ್ಮಾನ್ ಹೋಗುವ ಕಡೆಗೆಲ್ಲ ಒಂದು ನೆರಳಿನಂತೆ ಆತ ಹಿಂಬಾಲಿಸುತ್ತಾನೆ. ಎಲ್ಲರೂ ಹತ್ತಿರದಿಂದ ನೋಡಲು ಬಯಸುವ ಸಲ್ಮಾನ್‌ನ ಅಂಗರಕ್ಷಕ ಕೆಲಸ ಪಾಟೀಲ್‌ಗೂ ಖುಷಿ ನೀಡುತ್ತದೆ.
 
2002 ಸೆಪ್ಟಂಬರ್ 28- ಬದುಕಿನ ಬಹುದೊಡ್ಡ ತಿರುವು
ಆ ಘಟನೆ ನಡೆದ ರಾತ್ರಿ ಸಲ್ಮಾನ್ ಜುಹುವಿನಲ್ಲಿರುವ ಮಾರಿಯಟ್ ಹೋಟೆಲ್‌ನಲ್ಲಿ ಮದ್ಯಪಾನ ಮಾಡು ತ್ತಿದ್ದರು. ರವೀಂದ್ರ ಪಾಟೀಲ್ ಹೊರಗೆ ಕಾರಿನಲ್ಲಿದ್ದರು. ಹೋಟೆಲ್‌ನಿಂದ ಮರಳಿದ ಸಲ್ಮಾನ್ ಕಾರಿನಲ್ಲಿ ಮನೆಕಡೆ ಧಾವಿಸಿದರು. ಅತಿವೇಗದಿಂದ ತೆರಳುತ್ತಿದ್ದ ಸಲ್ಮಾನ್‌ಗೆ ವೇಗ ತಗ್ಗಿಸುವಂತೆ ರವೀಂದ್ರ ಪಾಟೀಲ್ ಹೇಳಿದರು. ಆದರೆ ಸಲ್ಮಾನ್ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಪರಿಣಾಮ ಅಪಘಾತ ಸಂಭವಿಸಿತು.
ಅಪಘಾತ ನಡೆದ ಬಳಿಕ ಅದಕ್ಕೆ ಬಲಿಯಾದವರನ್ನು ರಕ್ಷಿಸುವುದನ್ನು ಬಿಟ್ಟು ಮನೆಗೆ ಹೋಗಲು ಸಲ್ಮಾನ್ ಅವಸರಿಸುತ್ತಿದ್ದರು ಎಂದು ರವೀಂದ್ರ ಪಾಟೀಲ್ ಹೇಳಿಕೆ ನೀಡಿದರು. ಎಂಟು ಗಂಟೆಗಳ ಬಳಿಕ ಸಲ್ಮಾನ್‌ರ ಬಂಧನವಾದ ವೇಳೆ ನಡೆಸಿದ ಪರೀಕ್ಷೆಯಲ್ಲಿ ಅವರ ರಕ್ತದಲ್ಲಿ 65 ಮಿ.ಗ್ರಾಂನಷ್ಟು ಮದ್ಯದ ಅಂಶವಿತ್ತು. ಸಲ್ಮಾನ್ ವಿರುದ್ಧ ಪಾಟೀಲ್ ಹೇಳಿಕೆಯನ್ನೂ ನೀಡಿದರು.
 

ಬಳಿಕ ನಡೆದದ್ದು ಸಿನೆಮಾವನ್ನೂ ಮೀರಿಸಿದ ಘಟನೆ
ಈ ನಡುವೆ ಮುಖ್ಯ ಸಾಕ್ಷಿಯಾದ ರವೀಂದ್ರ ಪಾಟೀಲ್ ಮೇಲೆ ಹಲವರು ಹಲವು ವಿಧದಲ್ಲಿ ಪ್ರಭಾವ ಬೀರಲು ನೋಡಿದರು. ಆದರೆ ಆತ ತನ್ನ ಹೇಳಿಕೆಯಲ್ಲಿ ದೃಢವಾಗಿ ನಿಂತರು. ಸಲ್ಮಾನ್ ಅತ್ಯಂತ ಮಿಗಿಲಾದ ವಕೀಲರೊಬ್ಬರಿಗೆ ಕೇಸನ್ನು ವಹಿಸಿದರು. ಆದರೆ ಒತ್ತಡ ತಾಳಲಾರದೆ ರವೀಂದ್ರ ಪಾಟೀಲ್ ಒಂದು ದಿನ ಓಡಿ ಹೋದರು. ಪಾಟೀಲ್ ಕಾಣೆಯಾಗಿದ್ದಾರೆ ಎಂದು ಆತನ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಕೇಸ್‌ನ ವಾದ ನಡೆಯುವ ಸಂದರ್ಭದಲ್ಲೂ ಪಾಟೀಲ್ ಹಾಜರಾಗಲಿಲ್ಲ. ಪಾಟೀಲ್ ಗೈರು ಹಾಜರಿಯಿಂದ ಕೇಸ್‌ನ ದಾರಿಯೇ ಸಂಪೂರ್ಣವಾಗಿ ಮುಚ್ಚಿ ಹೋಯಿತು. ಒಂದು ರಜಾ ಅರ್ಜಿಯನ್ನೂ ಬರೆದಿಡದೆ ಹೋದ ಪಾಟೀಲ್ ಎಲ್ಲಿದ್ದಾರೆಂದು ಯಾರಿಗೂ ಗೊತ್ತಿರಲಿಲ್ಲ. ಕೊನೆಗೆ ಆ ಕೇಸ್‌ನ ಎಫ್‌ಐಆರ್ ತಯಾರಿಸಿದ ಸಿಬ್ಬಂದಿ, ಪಾಟೀಲ್ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದ.

ಪಾಟೀಲನ್ನು ಬಂಧಿಸಲೆಂದೇ ವಿಶೇಷ ತನಿಖಾ ತಂಡವೇ ಸಿದ್ಧವಾಯಿತು. ಆದರೆ ಹೆಚ್ಚು ಶ್ರಮಪಡದೆ ಮುಂಬೈಯ ಸಣ್ಣ ಲಾಡ್ಜೊಂದರಲ್ಲಿದ್ದ ಪಾಟೀಲನ್ನು ಅವರು ಬಂಧಿಸಿದರು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಪಾಟೀಲನ್ನು ಬಳಿಕ ಆರ್ಥರ್ ರಸ್ತೆಯ ಜೈಲಿಗೆ ಸ್ಥಳಾಂತರಿಸಲಾಯಿತು. ಏಕೆ ಓಡಿ ಹೋದೆ, ಎಲ್ಲಿಗೆ ಹೋದೆ ಎಂದು ಯಾವ ನ್ಯಾಯಾಲಯವೂ, ನ್ಯಾಯಾಧೀಶನೂ ಆತನನ್ನು ಕೇಳಲಿಲ್ಲ.

ಯಾವುದೇ ತಪ್ಪನ್ನು ಮಾಡದ ಪಾಟೀಲ್, ಜೈಲಲ್ಲಿ ಕ್ರಿಮಿನಲ್‌ಗಳೊಂದಿಗೆ ಕಳೆದರು. ತನ್ನನ್ನು ಬಿಟ್ಟು ಬಿಡಬೇಕೆಂದು ಹಲವು ಬಾರಿ ನ್ಯಾಯಾಲಯಕ್ಕೆ ಮನವಿ ಮಾಡಿದರೂ ಅಲ್ಲಿಯೂ ನ್ಯಾಯ ಕಣ್ಣು ಮುಚ್ಚಿತು. ಜೈಲಲ್ಲಿ ಪಾಟೀಲ್‌ಗೆ ಟ್ಯೂಬರ್‌ಕುಲೋಸಿಸ್ ಬಾಧಿಸಿತು. ತಿಂಗಳುಗಳ ಬಳಿಕ ಪಾಟೀಲನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು. ಆದರೆ ಜೈಲಿನಿಂದ ಮರಳಿದ ಅವರನ್ನು ಮನೆಮಂದಿ ಸ್ವೀಕರಿಸಲಿಲ್ಲ. ಈ ನಡುವೆ ಅವರಿಗೆ ಕೆಲಸವೂ ನಷ್ಟವಾಗಿತ್ತು.

ಯಾರೂ ಜೊತೆಯಿಲ್ಲದ ಪಾಟೀಲ್ ಮತ್ತೆ ಕಾಣೆಯಾದರು. 2007ರಲ್ಲಿ ಮುಂಬೈಯ ಒಂದು ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಪಾಟೀಲರನ್ನು ಗುರುತು ಹಿಡಿದ ಮಿತ್ರನೊಬ್ಬ ಅವರನ್ನು ಸರಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಹಿಂದೆ ದೃಢಕಾಯನಾಗಿದ್ದ ಪಾಟೀಲ್ ರೋಗ ಬಾಧಿಸಿದ್ದರಿಂದ ಮೂಳೆಯ ಚಕ್ಕಳವಾಗಿದ್ದರು. ಶುಶ್ರೂಷೆ ಮಾಡಲು ಯಾರೂ ಇಲ್ಲದೆ ರಕ್ತ ಕಾರಿ ನರಳಿ ಕೊನೆಗೆ 2007ರ ಅಕ್ಟೋಬರ್ 4ರಂದು ಪಾಟೀಲ್ ಈ ಲೋಕಕ್ಕೆ ವಿದಾಯ ಹೇಳಿದರು.
                                                                ಕೃಪೆ: ಮನೋರಮಾ ಆನ್‌ಲೈನ್


ನನಗೆ ಬದುಕಬೇಕು
ಸಾಯುವ ವಾರಗಳ ಹಿಂದೆ ಪಾಟೀಲ್ ಆ ಮಿತ್ರನೊಂದಿಗೆ ಹೀಗೆ ಹೇಳಿದ್ದರು. ‘‘ನಾನು ನನ್ನ ನಿಲುವಿನಲ್ಲಿ ದೃಢವಾಗಿ ನಿಂತೆ. ಆದರೆ ಇಲಾಖೆ ನನ್ನೊಂದಿಗೆ ನಿಲ್ಲಲಿಲ್ಲ. ನನಗೆ ನನ್ನ ಕೆಲಸ ಮತ್ತೆ ಬೇಕು. ನನಗೆ ಬದುಕಬೇಕು.’’ ಯಾರಿಗೂ ಕೇಳದ ಆ ಮಾತುಗಳು ಆತನ ಗದ್ಗದಕಂಠದಲ್ಲಿ ಕೊನೆಗೊಳ್ಳುತ್ತಿದ್ದಾಗ ಹೊರಗೆ ಸಲ್ಮಾನ್‌ನ ಸಿನೆಮಾಗೆ ಅಭಿಮಾನಿಗಳು ಹರ್ಷೋದ್ಗಾರ ಮಾಡುತ್ತಿದ್ದರು.

ಕೊಲ್ಲಬಹುದು ಆದರೆ ಸೋಲಿಸಲು ಸಾಧ್ಯವಿಲ್ಲ
ಬಂಡಾಯ ನಾಯಕನ ಈ ಹೇಳಿಕೆಗಳು ಬರೀ ಮಾತುಗಳಲ್ಲ ಎಂಬುದು ರವೀಂದ್ರ ಪಾಟೀಲ್ ಎಂಬ ಈ ಪೊಲೀಸ್ ಸಿಬ್ಬಂದಿಯ ಕಥೆ ಕೇಳುವಾಗ ನಮಗೆ ಅರಿವಾಗಬಹುದು. ಮನಸ್ಸಿನಲ್ಲಿ ನಾಯಕನ ವೇಷ ತೊಡಿಸಿದ ನಟನಿಗೆ ಖಳನಾಯಕನ ಮುಖವಾಡ ತೊಡಿಸಲು ಯಾರೂ ಇಷ್ಟಪಡಲಾರರು. ಆದರೆ ಸತ್ಯದ ಮುಖ ಯಾವಾಗಲೂ ವಿಕೃತವಾಗಿರುತ್ತದೆ.
ರವೀಂದ್ರ ಪಾಟೀಲ್...ನೀವು ಸಮಾಧಾನದಿಂದ ನಿದ್ರಿಸುತ್ತಿಲ್ಲ ಎನ್ನುವುದು ನಮಗೆ ಗೊತ್ತು. ಆದರೆ ಒಂದು ವಿಷಯ ಖಚಿತವಾಗಿ ಹೇಳಬಹುದು. ಅದೇನೆಂದರೆ ಎಂದಿಗೂ ದಣಿಯದ ಹೋರಾಟದ ಕೆಚ್ಚಿಗೆ ಪರ್ಯಾಯವಾಗಿ ತಮ್ಮನ್ನು ಎಂದಾದರೂ ನೆನಪಿಸಿಕೊಳ್ಳಬಹುದು. ಅಥವಾ ನಾಯಕ ಖಳನಾಯಕನಾದ ಈ ಕಥೆಯಿಂದ ನಾಳೆ ಒಂದು ಸಿನೆಮಾ ಕೂಡ ಹುಟ್ಟಬಹುದು. ಆದರೆ ಒಂದನ್ನು ಖಡಾಖಂಡಿತವಾಗಿ ಹೇಳಬಹುದು. ‘‘ಇನ್ ಫ್ಯೂಚರ್ ಯು ವಿಲ್ ರೆಸ್ಟ್ ಇನ್ ಪೀಸ್.’’

Writer - ರಲಿಯಾ ಸಿದ್ದೀಕ್, ಪರ್ಲಿಯ

contributor

Editor - ರಲಿಯಾ ಸಿದ್ದೀಕ್, ಪರ್ಲಿಯ

contributor

Similar News

ಸಂವಿಧಾನ -75