1.82 ಕೋಟಿ ಕೆಲಸಗಾರರಿಗೆ ವೇತನ ಸಮಸ್ಯೆ ಉದ್ಯೋಗ ಖಾತ್ರಿ-ವೇತನಕ್ಕೆ ಕತ್ತರಿ

Update: 2016-01-07 18:40 GMT

 ಕೇಂದ್ರ ಸಚಿವ ಅರುಣ್ ಜೇಟ್ಲಿ, ಕಳೆದ ವರ್ಷದ ಬಜೆಟ್‌ನಲ್ಲಿ ಆಶ್ವಾಸನೆ ನೀಡಿದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ತಕ್ಷಣ ಐದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡದಿದ್ದರೆ, ದೇಶದ 12 ರಾಜ್ಯಗಳ 1.82 ಕೋಟಿ ಕೆಲಸಗಾರರಿಗೆ ವೇತನ ಸಮಸ್ಯೆ ಎದುರಾಗಲಿದೆ.

ನರೇಗಾ ಆಂದೋಲನದಲ್ಲಿ ಮುಂಚೂಣಿಯಲ್ಲಿರುವ ಅರುಣಾ ರಾಯ್, ನಿಖಿಲ್ ಡೇ ಹಾಗೂ ಜಯತಿ ಘೋಷ್ ಈ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಾಮಾಜಿಕ ವಲಯದ ವೆಚ್ಚವನ್ನು ಭಾರೀ ಕಡಿತಗೊಳಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಈ ಗ್ರಾಮೀಣ ಉದ್ಯೋಗ ಯೋಜನೆ ನಿರ್ಲಕ್ಷಿಸಿರುವುದನ್ನು ಟೀಕಿಸಿದ್ದಾರೆ.
ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಹರ್ಯಾಣಾ, ಹಿಮಾಚಲಪ್ರದೇಶ, ಕೇರಳ, ಮೇಘಾಲಯ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ಸಿಕ್ಕಿಂ ಹಾಗೂ ಉತ್ತರ ಪ್ರದೇಶ ರಾಜ್ಯಗಳು ಈಗ ನರೇಗಾ ನಿಧಿ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿವೆ.
‘‘ಇವುಗಳನ್ನು ಕೊರತೆಯ ರಾಜ್ಯ ಎನ್ನಲಾಗುತ್ತದೆ; ಏಕೆಂದರೆ ಈ ರಾಜ್ಯಗಳಲ್ಲಿ ಈಗಾಗಲೇ ಜನ ಕೆಲಸ ಮಾಡಿದ್ದರೂ, ಅವರಿಗೆ ವೇತನ ನೀಡಲು ಹಣ ಇಲ್ಲ’’ ಎಂದು ಅರುಣಾ ರಾಯ್ ವಿವರಿಸುತ್ತಾರೆ.
ಸರಕಾರ ಈ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು ಎನ್ನುವುದು ಅವರ ಆಗ್ರಹ. ಕನಿಷ್ಠ ಎಂದರೆ ತಕ್ಷಣ ಐದು ಕೋಟಿ ರೂಪಾಯಿಗಳನ್ನು ಈಗಾಗಲೇ ಆಶ್ವಾಸನೆ ನೀಡಿದಂತೆ ಬಿಡುಗಡೆ ಮಾಡಬೇಕು. ತಕ್ಷಣ ಈ ಹಣ ಬಿಡುಗಡೆ ಮಾಡದಿದ್ದರೆ ಅದರ ಪರಿಣಾಮ ಭೀಕರವಾಗುತ್ತದೆ. ಮೊದಲನೆಯದಾಗಿ 12 ರಾಜ್ಯಗಳು 1.82 ಕೋಟಿ ಗ್ರಾಮೀಣ ಬಡವರ ಭವಿಷ್ಯ ಕರಾಳವಾಗುತ್ತದೆ. ಈಗಾಗಲೇ ಇವರು ಉದ್ಯೋಗಕ್ಕೆ ಹೆಸರು ನೊಂದಾಯಿಸಿಕೊಂಡಿದ್ದರೂ, ಅವರು ಕನಿಷ್ಠ ಎಪ್ರಿಲ್‌ವರೆಗೆ ವೇತನ ಪಡೆಯುವಂತಿಲ್ಲ
ಹಣಕಾಸು ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಡುವೆ ಈ ವಿಚಾರದಲ್ಲಿ ಪತ್ರ ಸಮರ ನಡೆಯುತ್ತಿದ್ದು, ಉಭಯ ಸಚಿವಾಲಯಗಳ ನಡುವಿನ ಸಂವಹನದ ದಾಖಲೆಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ. ಬಜೆಟ್ ಅನುದಾನದ 34,699 ಕೋಟಿ ರೂಪಾಯಿಗಳ ಪೈಕಿ ಶೇಕಡ 95ನ್ನು ಈಗಾಗಲೇ 2015ರ ಡಿಸೆಂಬರ್ 30ರೊಳಗೆ ವೆಚ್ಚ ಮಾಡಲಾಗಿದೆ. ಆದ್ದರಿಂದ ಆಶ್ವಾಸನೆ ನೀಡಿದಂತೆ ತುರ್ತಾಗಿ 5,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಆಗ್ರಹಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಹಿತಿಯಂತೆಯೇ ಈ ಯೋಜನೆಗೆ ನಿಗದಿಪಡಿಸಿದ ಹಣ ಸಂಪೂರ್ಣ ವೆಚ್ಚವಾಗಿದ್ದರೂ ಭರವಸೆ ನೀಡಿದಂತೆ ಹಣ ಬಿಡುಗಡೆ ಮಾಡದಿರುವುದು ಆತಂಕಕ್ಕೆ ಕಾರಣವಾಗಿದೆ.
‘‘ಸಾಮಾಜಿಕ ವಲಯ ಈ ಬಾರಿ ಹಣಕಾಸು ಸಚಿವಾಲಯದ ಸರ್ವಾಧಿಕಾರಿ ಧೋರಣೆಯಿಂದ ಬಳಲಿದೆ. ಶಿಕ್ಷಣ, ಆರೋಗ್ಯ, ಐಸಿಡಿಎಸ್, ಆಹಾರ ಭದ್ರತೆ ಹೀಗೆ ಎಲ್ಲ ಯೋಜನೆಗಳಿಗೂ ಕತ್ತರಿ ಬಿದ್ದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪಿಂಚಣಿಯಲ್ಲೂ ಕಡಿತಗೊಳಿಸಲಾಗಿವೆ. ಈ ಸಂದರ್ಭದಲ್ಲಿ ನರೇಗಾ ಮಾತ್ರ ಆಶಾಕಿರಣ. ಏಕೆಂದರೆ ಹಣಕಾಸು ಸಚಿವಾಲಯ ಏಕಪಕ್ಷೀಯವಾಗಿ ತಾನೇ ಅಂತಿಮ ನಿರ್ಧಾರ ಕೈಗೊಳ್ಳುವಂತಿಲ್ಲ’’ ಎಂದು ನಿಖಿಲ್ ಡೇ ಸ್ಪಷ್ಟಪಡಿಸುತ್ತಾರೆ.
‘‘ಪ್ರಸ್ತುತ ಸರಕಾರದ ಅಭಿವೃದ್ಧಿ ಪರಿಕಲ್ಪನೆಯೇ ವಿಭಿನ್ನವಾಗಿದೆ ಎನಿಸುತ್ತದೆ. ಪ್ರಧಾನಿ ಸಚಿವಾಲಯದ ಕಲ್ಪನೆ ಪ್ರಕಾರ, ಮೂಲಸೌಕರ್ಯ, ಸ್ಮಾರ್ಟ್ ಸಿಟಿಯಂಥ ಯೋಜನೆಗಳಿಗೆ ದೊಡ್ಡ ಮೊತ್ತದ ಹಣ ವಿನಿಯೋಗಿಸಲು ಉದ್ದೇಶಿಸಲಾಗಿದೆ. ಆದರೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಎಲ್ಲ ವರ್ಗದ ಜನರ ಜೀವನಮಟ್ಟ ಸುಧಾರಣೆಯ ಅಗತ್ಯತೆಯನ್ನು ಗಮನಿಸಿದಂತಿಲ್ಲ’’ ಎಂದು ಜಯತಿ ಘೋಷ್ ಆಕ್ಷೇಪಿಸುತ್ತಾರೆ.
‘‘ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ದೇಶದಲ್ಲಿ ಸಮಾನತೆ ಹಾಗೂ ಪಾಲುದಾರಿಕೆಯ ಪ್ರಗತಿ ಬಗ್ಗೆ ನಾವು ಗಂಭೀರ ಚಿಂತನೆ ನಡೆಸಿದ್ದೇವೆಯೇ ಅಥವಾ ಭಾರತದ ಒಂದು ಸಣ್ಣ ಭಾಗಕ್ಕಷ್ಟೇ ಹಣಕಾಸು ನೆರವು ನೀಡುವ ಮೂಲಕ ಉಳಿದ ಎಲ್ಲರನ್ನೂ ಏನೂ ಇಲ್ಲದಂತೆ ವಂಚಿಸುತ್ತಿದ್ದೇವೆಯೇ?’’ ಎಂದು ರಾಯ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮುಂದಿನ ಬಜೆಟ್‌ನಲ್ಲಿ ನರೇಗಾ ಹಂಚಿಕೆಯನ್ನು ಹೆಚ್ಚಿಸಬೇಕು ಎನ್ನುವುದು ಅವರ ಹಕ್ಕೊತ್ತಾಯ.
ಈ ಬಾರಿಯಾದರೂ ಹಿಂದಿನ ವರ್ಷಕ್ಕಿಂತ ದೊಡ್ಡ ಮೊತ್ತದ ಹಂಚಿಕೆ ಅಗತ್ಯ. ಇಡೀ ದೇಶದ ಜನರಿಗೆ ಶಕ್ತಿ ತುಂಬಲು ಅದರಲ್ಲೂ ಮುಖ್ಯವಾಗಿ ಬರಪೀಡಿತ ರಾಜ್ಯಗಳ ಜನರಿಗೆ ಚೈತನ್ಯ ತುಂಬಲು ಇದು ಅನಿವಾರ್ಯ. ಈಗಾಗಲೇ ಹಣದ ಕೊರತೆ ಎದುರಿಸುತ್ತಿರುವ ರಾಜ್ಯಗಳಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು. ಹೆಚ್ಚುವರಿ ನಿಧಿಗಾಗಿ ಎಲ್ಲ ರಾಜ್ಯಗಳ ಆಗ್ರಹಗಳು ಕೂಡಾ ಆ ರಾಜ್ಯದ ಕಾರ್ಮಿಕರ ಬೇಡಿಕೆ. ಇದನ್ನು ಗೌರವಿಸಲೇಬೇಕು.

Writer - ಮುಮ್ತಾಝ್ ಆಲಂ

contributor

Editor - ಮುಮ್ತಾಝ್ ಆಲಂ

contributor

Similar News