‘ವಾಝಿರ್’: ಅಖ್ತರ್, ಬಚ್ಚನ್ ಚಿತ್ರದ ಜೀವಾಳ
ಬಿಜೊಯ್ ನಂಬಿಯಾರ್ ಚಿತ್ರ ಮಾಡುತ್ತಾರೆಂದರೆ, ಬಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಅನುರಾಗ್ ಕಶ್ಯಪ್ ಬಳಗದವರಾಗಿರುವ ನಂಬಿಯಾರ್, ಈಗಾಗಲೇ ಶೈತಾನ್, ಡೇವಿಡ್‌ನಂತಹ ಭಿನ್ನ ಚಿತ್ರಗಳಿಂದ ಗುರುತಿಸಲ್ಪಟ್ಟವರು. ಇವರ ಚಿತ್ರಗಳು ಬಾಲಿವುಡ್‌ನಲ್ಲಿ ಯಶಸ್ಸು ಕಂಡದ್ದು ಕಡಿಮೆಯಾದರೂ, ಅವರ ವಿಭಿನ್ನ ಶೈಲಿ, ವಿಭಿನ್ನ ನಿರೂಪಣೆಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಈ ಕಾರಣದಿಂದಲೇ ‘ವಾಝಿರ್’ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಈ ಚಿತ್ರದ ಬಗ್ಗೆ ನಿರೀಕ್ಷೆಯಿಡಲು ಒಂದು ಕಾರಣ ನಿರ್ದೇಶಕ ನಂಬಿಯಾರ್ ಆಗಿದ್ದರೆ ಇನ್ನೊಂದು ಕಾರಣ, ಅಮಿತಾಭ್ ಬಚ್ಚನ್. ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಅಂಶ ‘ವಾಝಿರ್’ಗೆ ಪ್ರಚಾರ ನೀಡಿತ್ತು. ಬಹಳ ದಿನಗಳ ಬಳಿಕ ಫರ್ಹಾನ್ ಅಖ್ತರ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ಇದು. ಅದರಲ್ಲೂ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಇನ್ನಷ್ಟು ವಿಶೇಷಗಳೆಂದರೆ ನೀಲ್ ನಿತಿನ್ ಮುಖೇಶ್ ಮತ್ತು ಜಾನ್ ಅಬ್ರಹಾಂ ಅವರೂ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ವಾಝಿರ್’ ಒಂದು ಥ್ರಿಲ್ಲರ್ ಚಿತ್ರ. ಈ ಚಿತ್ರದ ನಾಯಕ ದಾನಿಶ್ ಅಲಿ(ಫರ್ಹಾನ್ ಅಖ್ತರ್) ಆಗಿದ್ದರೂ, ಒಟ್ಟು ಕಥೆಯನ್ನು ನಿಯಂತ್ರಿಸುವ ಪಾತ್ರ ಪಂಡಿತ್ ಓಂಕಾರ್(ಅಮಿತಾಭ್ ಬಚ್ಚನ್) ಅವರದು. ಚಿತ್ರದ ಆರಂಭದಲ್ಲಿ ಭೂಗತ ಪಾತಕಿಗಳ ಕಾರಣದಿಂದ, ದಾನಿಶ್ ಅಲಿ ತನ್ನ ಪುಟ್ಟ ಮಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಪರೋಕ್ಷವಾಗಿ ಇದಕ್ಕೆ ತನ್ನ ಪತಿಯೇ ಕಾರಣ ಎಂದು ಪತ್ನಿ ರೂಹಾನ(ಅದಿತಿ) ದಾನಿಶ್‌ನಿಂದ ದೂರ ಸರಿಯುತ್ತಾಳೆ. ಭೂಗತ ಪಾತಕಿಯನ್ನು ಕೊಂದು ತನ್ನ ಸೇಡು ತೀರಿಸುವಲ್ಲಿ ಯಶಸ್ವಿಯಾದರೂ ದಾನಿಶ್, ಮಗಳ ಸಾವಿಗೆ ತಾನೇ ಕಾರಣ ಎಂದು ಆತ್ಮಹತ್ಯೆಗೆ ಯತ್ನಿಸುತ್ತಾನೆ. ಈ ಸಂದರ್ಭದಲ್ಲೇ ಆತನಿಗೆ ಎರಡೂ ಕಾಲಿಲ್ಲದ ಪಂಡಿತ್ ಓಂಕಾರ್ ಭೇಟಿಯಾಗುತ್ತಾನೆ. ಚದುರಂಗದಲ್ಲಿ ಪ್ರವೀಣನಾಗಿರುವ ಪಂಡಿತ್ ಓಂಕಾರ್ ತನ್ನ ವೈಯಕ್ತಿಕ ಸೇಡನ್ನು ಪೊಲೀಸ್ ಅಧಿಕಾರಿ ದಾನಿಶ್ ಮೂಲಕ ತೀರಿಸುವುದೇ ಒಟ್ಟು ಚಿತ್ರದ ಕತೆ. ಚಿತ್ರದ ನಡಿಗೆ ನೇರವಾಗಿದೆ. ಕತೆ ತೆಳುವಾಗಿದೆ. ‘ವಾಝಿರ್’ ಯಾರು ಮತ್ತು ಅವನನ್ನು ಪತ್ತೆ ಹಚ್ಚಲು ನಾಯಕ ಯಶಸ್ವಿಯಾಗುತ್ತಾನೆಯೇ ಎನ್ನುವುದೇ ಚಿತ್ರದ ಕ್ಲೈಮಾಕ್ಸ್. ಆದರೆ ಈ ಸಸ್ಪೆನ್ಸ್ ಒಂದು ಥ್ರಿಲ್ಲರ್ ಚಿತ್ರಕ್ಕೆ ಪುಷ್ಟಿಯನ್ನು ತುಂಬಲು ಸಾಕಾಗುವುದಿಲ್ಲ. ಚಿತ್ರ ಸಾಗುವ ದಾರಿಯನ್ನು ಪ್ರೇಕ್ಷಕ ಸುಲಭದಲ್ಲಿ ಗುರುತಿಸಿ ಬಿಡುತ್ತಾನೆ. ಭಯೋತ್ಪಾದನೆ, ಕಾಶ್ಮೀರ ಇತ್ಯಾದಿಗಳನ್ನು ಅಲ್ಲಲ್ಲಿ ಮುಟ್ಟುತ್ತಾ ಹೋಗುವ ಚಿತ್ರ, ಅಂತಿಮವಾಗಿ ಯಾವುದನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ಖಳನಾಯಕ ಖುರೇಷಿ (ಮಾನವ್ ಕೌಲ್)ಯಾಗಿ ಸೆಳೆಯುತ್ತಾರೆ. ನೀಲ್ ನಿತಿನ್ ಮತ್ತು ಜಾನ್ ಅಬ್ರಾಹಾಂ ಪಾತ್ರ ಗಟ್ಟಿಯಾಗಿಲ್ಲ. ಈ ಪಾತ್ರಗಳನ್ನು ಯಾರು ನಿರ್ವಹಿಸಿದರೂ ವಿಶೇಷ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ದಾನಿಶ್ ಅಲಿ ಆಗಿ ಫರ್ಹಾನ್ ಅಖ್ತರ್ ಮತ್ತು ಪಂಡಿತ್ ಆಗಿ ಅಮಿತಾಭ್ ಬಚ್ಚನ್ ಅಭಿನಯವೇ ಚಿತ್ರದ ಹೆಗ್ಗಳಿಕೆ. ನಾಯಕಿಯಾಗಿ ಅದಿತಿಗೆ ವಿಶೇಷ ಹೊಣೆಗಾರಿಕೆಗಳಿಲ್ಲ. ನಟನೆ ಪರವಾಗಿಲ್ಲ. ಸಂಗೀತ ಸಹ್ಯ. ಒಂದು ಥ್ರಿಲ್ಲರ್ ಚಿತ್ರವಾಗಿ, ‘ವಾಝಿರ್’ನನ್ನು ಒಮ್ಮೆ ನೋಡುವುದಕ್ಕೆ ಅಡ್ಡಿಯಿಲ್ಲ.